ಮನವಿಯ ಮೇರೆಗೆ ಕಟ್ಟಡ ಪಾರ್ಕಿಂಗ್‌ ತೆರಿಗೆ ಕುರಿತು ಪುನರ್‌ ಪರಿಶೀಲನೆ : ತುಷಾರ್‌ ಗಿರಿನಾಥ್‌

| N/A | Published : Apr 03 2025, 02:49 AM IST / Updated: Apr 03 2025, 07:39 AM IST

Tushar Girinath

ಸಾರಾಂಶ

 ಮನವಿಯ ಮೇರೆಗೆ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುತ್ತಿದ್ದ ವಾಹನ ಪಾರ್ಕಿಂಗ್‌ ಸ್ಥಳದ ತೆರಿಗೆ ದರ ಪರಿಷ್ಕರಣೆಗೆ ಬಿಬಿಎಂಪಿ ಮುಂದಾಗಿತ್ತು. ಈ ಕುರಿತು ಪುನರ್‌ ಪರಿಶೀಲನೆ ನಡೆಸುವುದಾಗಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

 ಬೆಂಗಳೂರು :  ಮಾಲ್‌, ರೆಸ್ಟೋರೆಂಟ್‌, ಸ್ಟಾರ್‌ ಹೋಟೆಲ್‌, ಆಸ್ಪತ್ರೆ ಸೇರಿದಂತೆ ವಿವಿಧ ಉದ್ಯಮ ಮಾಲೀಕರ ಮನವಿಯ ಮೇರೆಗೆ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುತ್ತಿದ್ದ ವಾಹನ ಪಾರ್ಕಿಂಗ್‌ ಸ್ಥಳದ ತೆರಿಗೆ ದರ ಪರಿಷ್ಕರಣೆಗೆ ಬಿಬಿಎಂಪಿ ಮುಂದಾಗಿತ್ತು. ಈ ಕುರಿತು ಪುನರ್‌ ಪರಿಶೀಲನೆ ನಡೆಸುವುದಾಗಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ಪಾರ್ಕಿಂಗ್‌ ತೆರಿಗೆ ಪರಿಷ್ಕರಣೆ ನೆಪದಲ್ಲಿ ಜನ ಸಾಮಾನ್ಯರಿಗೆ ಹೊರೆ ಹಾಕಿ, ಉದ್ದಿಮೆಗಳಿಗೆ ಬಿಬಿಎಂಪಿ ಅನುಕೂಲ ಮಾಡಿಕೊಡಲು ಮುಂದಾಗಿದೆ ಎಂದು ಸಾಕಷ್ಟು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಹೋಟೆಲ್‌, ಮಾಲ್‌ ಸೇರಿದಂತೆ ಹಲವು ಉದ್ದಿಮೆದಾರರು ಕಟ್ಟಡ ಪಾರ್ಕಿಂಗ್‌ ಸ್ಥಳಕ್ಕೆ ವಿಧಿಸಲಾಗುತ್ತಿರುವ ತೆರಿಗೆ ಪ್ರಮಾಣ ಅಧಿಕವಾಗಿದೆ. ಕಡಿಮೆ ಮಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಸತಿ ಕಟ್ಟಡದಲ್ಲಿ ಮೀಸಲಿಟ್ಟ ಪಾರ್ಕಿಂಗ್‌ ಸ್ಥಳದ ಪ್ರತಿ ಚದರಡಿಗೆ ₹2, ವಾಣಿಜ್ಯ ಕಟ್ಟಡದ ಪ್ರತಿ ಚದರಡಿಗೆ ₹3 ಏಕರೂಪದಲ್ಲಿ ದರ ಪರಿಷ್ಕರಣೆಗೆ ಕರಡು ಅಧಿಸೂಚನೆ ಹೊರಡಿಸಲಾಗಿದೆ.

ದರ ಪರಿಷ್ಕರಣೆಯಿಂದ ನಗರದ ಒಟ್ಟಾರೆ ವಸತಿ ಕಟ್ಟಡಗಳಿಂದ ವಸೂಲಿಯಾಗುವ ತೆರಿಗೆಯಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಆದರೆ, ವಾಣಿಜ್ಯ ಕಟ್ಟಡದಿಂದ ವಸೂಲಿಯಾಗುವ ಮೊತ್ತದಲ್ಲಿ ₹40 ಕೋಟಿಯಷ್ಟು ಕಡಿಮೆಯಾಗಲಿದೆ. ವಾರ್ಷಿಕವಾಗಿ ವಸೂಲಿಯಾಗುತ್ತಿದ್ದ ತೆರಿಗೆ ಮೊತ್ತವು ₹211 ಕೋಟಿಯಿಂದ ₹170 ಕೋಟಿಗೆ ಇಳಿಕೆಯಾಗಲಿದೆ. ಆದರೂ, ಏಕರೂಪ ಮತ್ತು ಸರಳಗೊಳಿಸುವ ಉದ್ದೇಶದಿಂದ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಸಲ್ಲಿಕೆಯಾಗುವ ಆಕ್ಷೇಪಣೆ ಆಧಾರಿಸಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಕಸ ವಿಲೇವಾರಿಗೆ ಶುಲ್ಕ ಜಾರಿ:

ಕೇಂದ್ರ ಸರ್ಕಾರದ ಘನತ್ಯಾಜ್ಯ ವಿಲೇವಾರಿ ನಿಯಮ ಹಾಗೂ ಬಿಬಿಎಂಪಿಯ ಬೈಲಾ ಪ್ರಕಾರ ಕಸ ವಿಲೇವಾರಿಗೆ ಶುಲ್ಕ ವಿಧಿಸಬಹುದಾಗಿದೆ. ಈಗಾಗಲೇ ದೇಶದ ಸಣ್ಣ ಸಣ್ಣ ಹಳ್ಳಿಗಳಲ್ಲಿ ಹಾಗೂ ದೊಡ್ಡ ನಗರದಲ್ಲಿ ಕಸ ವಿಲೇವಾರಿಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಬಿಬಿಎಂಪಿಯಲ್ಲಿ ತಡವಾಗಿ ಜಾರಿಗೊಳಿಸಲಾಗುತ್ತಿದೆ. ನಿಯಮಕ್ಕಿಂತ ಶೇ.50ರಷ್ಟು ಕಡಿಮೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ನಗರದ ತ್ಯಾಜ್ಯ ವಿಲೇವಾರಿ ವೆಚ್ಚವನ್ನೂ ಸಂಪೂರ್ಣವಾಗಿ ಭರಿಸುವುದಕ್ಕೆ ಸಾಧ್ಯವಿಲ್ಲ. ಏಪ್ರಿಲ್‌ನಿಂದ ಶುಲ್ಕ ವಿಧಿಸುವ ಕಾರ್ಯ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದರು.