ಸಾರಾಂಶ
ಕಾಡಾ ಕಚೇರಿ ಒಳಗೆ ಪ್ರವೇಶಿಸಲು ಅವಕಾಶ ಕೊಡದೇ ತಡೆಯೊಡ್ಡಿದ್ದರಿಂದ ಕಾಡಾ ಕಚೇರಿಯ ಹೊರ ಭಾಗದಲ್ಲೇ ಪ್ರತಿಭಟಿಸಿದ ರೈತರು,
ಕನ್ನಡಪ್ರಭ ವಾರ್ತೆ ಮೈಸೂರು
ಕಾವೇರಿ, ಕಬಿನಿ ಅಚ್ಚುಕಟ್ಟು ಭಾಗದ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆ ತುಂಬಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಮಂಗಳವಾರ ಪ್ರತಿಭಟಿಸಿ, ಕಾಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.ಕೆರೆ ಕಟ್ಟೆಗಳನ್ನು ತುಂಬಿಸುವಂತೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ ರೈತರು, ನಂತರ ಕಾಡಾ ಕಚೇರಿ ಮುತ್ತಿಗೆಗೆ ಹಾಕಲು ಯತ್ನಿಸಿದರು. ಈ ವೇಳೆ ಪ್ರತಿಭಟನಾನಿರತ ರೈತರನ್ನು ಪೋಲಿಸರು ಪ್ರವೇಶ ದ್ವಾರದ ಬಳಿಯೇ ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಡಾ ಕಚೇರಿ ಒಳಗೆ ಪ್ರವೇಶಿಸಲು ಅವಕಾಶ ಕೊಡದೇ ತಡೆಯೊಡ್ಡಿದ್ದರಿಂದ ಕಾಡಾ ಕಚೇರಿಯ ಹೊರ ಭಾಗದಲ್ಲೇ ಪ್ರತಿಭಟಿಸಿದ ರೈತರು, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ, ಕಬಿನಿ ಅಚ್ಚುಕಟ್ಟು ಭಾಗದಲ್ಲಿ ಬೆಳೆದು ನಿಂತಿರುವ ಕಬ್ಬು, ಅಡಿಕೆ, ತೆಂಗು, ಬಾಳೆ ಇನ್ನಿತರೆ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹಾಳಾಗುತ್ತಿವೆ. ಕಾವೇರಿ- ಕಬಿನಿ ಅಚ್ಚುಕಟ್ಟು ಪ್ರದೇಶದ ಕೆರೆ ಕಟ್ಟೆಗಳು ಬರಿದಾಗುತ್ತಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಕೃಷಿ ಪಂಪ್ ಸೆಟ್ ಗಳಿಗೆ ಅಂತರ್ಜಲ ಕುಸಿದಿದ್ದು ನೀರಿಲ್ಲದೆ ತೋಟದ ಬೆಳೆಗಳಾದ ಹಣ್ಣು ತರಕಾರಿ ಇನ್ನಿತರೆ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಜನ, ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದ್ದು, ಸಮಸ್ಯೆ ಅರಿತು ತುರ್ತಾಗಿ ನಾಲೆಗಳ ಮೂಲಕ ಕಾವೇರಿ ಅಚ್ಚುಕಟ್ಟು ಭಾಗದ ವಿಸಿ ನಾಲೆ, ವರುಣ ನಾಲೆಯ ಶಾಖಾ ನಾಲೆ, ಉಪ ಶಾಖಾ ನಾಲೆಗಳು ಮತ್ತು ಚಿಕ್ಕದೇವರಾಯ ನಾಲೆಗಳಿಗೆ ಹಾಗೂ ಕಬಿನಿ ಜಲಾಶಯದ ಬಲದಂಡೆ ನಾಲೆಗಳಿಗೆ ನೀರು ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಕೆಆರ್ ಎಸ್ ವಿಭಾಗದ ನಂ.4 ಉಪ ವಿಭಾಗಕ್ಕೆ ಸೇರಿದ ಬನ್ನೂರು ದೊಡ್ಡ ಕೆರೆ ಬಲದಂಡೆ ನಾಲೆ, ಎಡದಂಡೆ ನಾಲೆಗಳನ್ನು ಆಧುನೀಕರಣ ಮಾಡುವುದಾಗಿ ಕುಂಟು ನೆಪ ಹೇಳಿಕೊಂಡು ಬರುತ್ತಿರುವುದು ಸರಿಯಾದ ಕ್ರಮವಲ್ಲ. ಈ ಬಾರಿ ಕಾಮಗಾರಿ ಪ್ರಾರಂಭ ಮಾಡಿ ಪೂರ್ಣಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ನಂತರ ಕಾಡಾ ಕಚೇರಿಯ ಉಪ ಎಂಜಿನಿಯರ್ ಗೌತಮ್ ಅವರಿಗೆ ರೈತರು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಮುಖಂಡರಾದ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಲಕ್ಷ್ಮೀಪುರ ವೆಂಕಟೇಶ್, ಮಾರ್ಬಳ್ಳಿ ನೀಲಕಂಠಪ್ಪ, ಸತೀಶ್ ಕೇರ್ಗಳ್ಳಿ, ಶಿವಕುಮಾರ್ ಕೇರ್ಗಳ್ಳಿ, ಧನಗಳ್ಳಿ ಕೆಂಡಗಣ್ಣಸ್ವಾಮಿ, ಜಯರಾಮ ವರಕೋಡು, ನಾಗೇಶ್, ಕೆ. ಶಿವಶಂಕರ, ಕೆ.ಸಿ. ನಾಗರಾಜು, ಪಿ. ನಾಗೇಂದ್ರ, ಮಾದೇವ, ಮಹಾಲಿಂಗ, ಬಸವರಾಜು, ಬಸವರಾಜ್ ಮೊದಲಾದವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))