ಸಾರಾಂಶ
ಬೆಂಗಳೂರು : ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧ, ವಿಕಾಸ ಸೌಧ ಸೇರಿದಂತೆ ನಗರದಲ್ಲಿರುವ 30ಕ್ಕೂ ಅಧಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಇಲಾಖೆಯ ಕಟ್ಟಡಗಳಿಂದ ಬರಬೇಕಾಗಿದ್ದ ₹65.14 ಕೋಟಿ ಸೇವಾ ತೆರಿಗೆ ಹಾಗೂ ಆಸ್ತಿ ತೆರಿಗೆಯನ್ನು ಬಿಬಿಎಂಪಿ ವಸೂಲಿ ಮಾಡಿದೆ.
ನಗರದಲ್ಲಿ ನೂರಾರು ಸಂಖ್ಯೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳ ಕಟ್ಟಡಗಳಿವೆ. ಜತೆಗೆ, ಸರ್ಕಾರದ ವಿವಿಧ ಸಂಸ್ಥೆಗಳು ಪ್ರಾಧಿಕಾರಗಳ ಕಟ್ಟಡಗಳಿವೆ. ಈ ಕಟ್ಟಡಗಳು ಹಲವು ವರ್ಷದಿಂದ ಸೇವಾ ತೆರಿಗೆ ಪಾವತಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಈ ಹಿಂದೆ ಹಲವು ವರ್ಷದಿಂದ ಬಾಕಿ ಉಳಿಸಿಕೊಂಡ ಎಲ್ಲಾ ಆಸ್ತಿ ಮಾಲೀಕರಿಗೆ ನೀಡಿದಂತೆ ಸರ್ಕಾರಿ ಇಲಾಖೆಗಳಿಗೂ ಬಿಬಿಎಂಪಿಯು ಒನ್ ಟೈಮ್ ಸೆಟಲೈಂಟ್ (ಒಟಿಎಸ್) ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆಯಡಿ ದಂಡ ಹಾಗೂ ಬಡ್ಡಿ ಸಂಪೂರ್ಣ ಮನ್ನಾ ಮಾಡಿ ಸೇವಾ ತೆರಿಗೆ ಮಾತ್ರ ಪಾವತಿಸುವಂತೆ ಕೋರಿ ಮಾ.31ರವರೆಗೆ ಅವಕಾಶ ನೀಡಿತ್ತು. ಈ ಅವಕಾಶ ಬಳಕೆ ಮಾಡಿಕೊಂಡ ವಿವಿಧ ಇಲಾಖೆಗಳು ಬಿಬಿಎಂಪಿಗೆ ₹65.14 ಕೋಟಿ ಸೇವಾ ತೆರಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ.
ಕೆಲವು ಇಲಾಖೆಗಳಿಗೆ ಬಿಬಿಎಂಪಿಯೂ ಹಣ ಪಾವತಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಅಂತಹ ಇಲಾಖೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಾಕಿ ವಸೂಲಿ ಮಾಡಿಕೊಳ್ಳಲಾಗಿದೆ.
ಮೆಟ್ರೋ, ಇಸ್ರೋದಿಂದ ಅತ್ಯಧಿಕ ತೆರಿಗೆ ಪಾವತಿ:
ನಗರದಲ್ಲಿ ನಮ್ಮ ಮೆಟ್ರೋಗೆ ಸೇರಿದ ಕಟ್ಟಡಗಳಿಂದ ₹18.90 ಕೋಟಿ, ಇಸ್ರೋ ₹15.55 ಕೋಟಿ, ವಿಧಾನಸೌಧ ಮತ್ತು ವಿಕಾಸಸೌಧದಿಂದ ₹6.64 ಕೋಟಿ, ಎಂಎಸ್ ಕಟ್ಟಡದಿಂದ ₹3.38 ಕೋಟಿ, ಪೊಲೀಸ್ ಇಲಾಖೆಯಿಂದ ₹21.95 ಲಕ್ಷ, ರಾಜ್ಯ ಶಸಸ್ತ್ರ ಪೊಲೀಸ್ ₹22 ಲಕ್ಷ, ಬಿಎಸ್‌ಎನ್‌ಎಲ್ ₹1.43 ಕೋಟಿ, ಪಂಚಾಯತ್ ರಾಜ್ ₹3 ಲಕ್ಷ, ಆರೋಗ್ಯ ಮತ್ತು ಕುಟುಂಬ ಕಲ್ಯಾಣದಿಂದ ₹4.08 ಕೋಟಿ, ಆಟೋಮಿಕ್ ಇನ್ಸಿಟ್ಯೂಟ್ ₹92.01 ಕೋಟಿ, ಸಿಬಿಇಸಿ ₹2.73 ಲಕ್ಷ, ಇಎಸ್ಐಸಿ ₹1.64 ಕೋಟಿ, ಎಪಿಎಂಸಿ ₹40.85 ಲಕ್ಷ, ₹ಪಿಡಬ್ಲ್ಯೂಡಿ 89.56 ಲಕ್ಷ, ವಾಣಿಜ್ಯ ತೆರಿಗೆ ₹54.24 ಲಕ್ಷ, ಆದಾಯ ತೆರಿಗೆ ₹1.22 ಕೋಟಿ. ಕೆಪಿಸಿಎಲ್ ₹3.78 ಕೋಟಿ, ಯುವಜನ ಸಬಲೀಕರಣ ₹1.33 ಕೋಟಿ, ವಿವಿ ಟವರ್ ₹1.18 ಕೋಟಿ ಈ ರೀತಿ ವಿವಿಧ ಇಲಾಖೆಗಳು ಸೇವಾ ಶುಲ್ಕ ಪಾವತಿ ಮಾಡಿವೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.