ಆಲಮಟ್ಟಿ 224ಕ್ಕೆ ಏರಿಸಲು ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್‌

| Published : Apr 03 2025, 12:30 AM IST

ಆಲಮಟ್ಟಿ 224ಕ್ಕೆ ಏರಿಸಲು ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಿದೆ. ನಮ್ಮ ನೀರು ನಮ್ಮ ಹಕ್ಕು ಹೋರಾಟ ಪ್ರಾರಂಭಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಿದೆ. ನಮ್ಮ ನೀರು ನಮ್ಮ ಹಕ್ಕು ಹೋರಾಟ ಪ್ರಾರಂಭಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.ನಗರದಲ್ಲಿ ಬುಧವಾರ ನೂತನ ಅರ್ಬನ್ ಬ್ಯಾಂಕಿನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ. 524 ಮೀಟರ್ ನೀರು ಹಿಡಿದಿಟ್ಟುಕೊಳ್ಳಲು ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಆದ್ದರಿಂದ ಯೋಜನೆ ವಿಳಂಬವಾಗಿದೆ. ಗೆಜೆಟ್‌ ನೋಟಿಫಿಕೇಶನ್ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡು ರೈತರ ಬದುಕು ಹಸನಾಗಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.

ನೀರು ಸಮುದ್ರದ ಪಾಲಾಗಬಾರದು ಎಂಬ ಉದ್ದೇಶದಿಂದ ನೀರಾವರಿ ಇಲಾಖೆಗೆ ₹22 ಸಾವಿರ ಕೋಟಿ ನೀಡಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವುದು, ಏತ ನೀರಾವರಿ ಯೋಜನೆಗಳಿಗೆ ₹216 ಕೋಟಿ ನೀಡಲಾಗಿದೆ. ವೆಂಕಟೇಶ್ವರ ಏತ ನೀರಾವರಿ, ಮುಳವಾಡ ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿವೆ. ಅಥಣಿ ತಾಲೂಕಿನಲ್ಲಿ ₹1480 ಕೋಟಿ ಏತ ನೀರಾವರಿ ಯೋಜನೆಯ ಕಾರ್ಯ ಪ್ರಗತಿಯಲ್ಲಿದ್ದು 9950 ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ. ತಾಲೂಕಿನ ಹಿಪ್ಪರಗಿ ಸೇತುವೆ ಕಾಮಗಾರಿ ನಡೆದಿದ್ದು ₹60 ಕೋಟಿ ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.

1.22 ಲಕ್ಷ ಮಹಿಳೆಯ ಬದುಕು ಬದಲಾವಣೆ:

ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ ₹52 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಇದರಿಂದ ರಾಜ್ಯದ ಬಡ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಿದೆ. ಅನೇಕರ ಶಿಕ್ಷಣ, ಉದ್ಯೋಗ, ಸ್ವಾವಲಂಬಿ ಬದುಕಿಗೆ ಸಹಾಯವಾಗಿದೆ. ಮಹಿಳೆಯರು ತಿಂಗಳಿಗೆ ₹20 ಸಾವಿರ ಆದಾಯ ರೊಟ್ಟಿ ಮಾರಾಟ ಮಾಡಿ ಗಳಿಸುತ್ತಿದ್ದಾರೆ. 1.22 ಲಕ್ಷ ಮಹಿಳೆಯ ಬದುಕು ಬದಲಾವಣೆಯಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹4 ಲಕ್ಷ ಕೋಟಿ ದಾಖಲೆ ಬಜೆಟ್ ನೀಡಿದ್ದು, ಇತಿಹಾಸ ಸೃಷ್ಟಿಯಾಗಿದೆ. ಎಲ್ಲರಿಗೂ ಸಮಬಾಳು ಸಮಪಾಲು ಎನ್ನುವ ಸಹಕಾರಿ ತತ್ವದ ಮೇಲೆ ಪಕ್ಷ ಆಡಳಿತ ನಡೆಸುತ್ತಿದೆ. ರಾಜ್ಯದ ರೈತರ ಉತ್ಪಾದನೆಯ ನಂದಿನಿ ಹಾಲು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಶೇ.90ರಷ್ಟು ಹಾಲನ್ನು ಸಹಕಾರ ಸಂಘಗಳಿಂದ ಹಂಚಿಕೆ ಮಾಡಲಾಗುತ್ತಿದ್ದು, ರೈತ ವರ್ಗಕ್ಕೆ ಅನುಕೂಲ ಕಲ್ಪಿಸಲಾಗಿದೆ. ಹೈನುಗಾರಿಕೆಗೆ ಉತ್ತೇಜನ ನೀಡಲಾಗಿದೆ ಎಂದರು.

ರೇಷ್ಮೆ ಬೆಳೆದು ಆದಾಯ ಗಳಿಸಿ:

ರೇಷ್ಮೆ ಬೆಳೆದು ಹೆಚ್ಚು ಆದಾಯ ಗಳಿಸಬಹುದಾಗಿದ್ದು, ರೈತರು ರೇಷ್ಮೆ ಬೆಳೆಯಲು ಮುಂದಾಗಬೇಕು. ಇದರಿಂದ ರೈತರ ಆರ್ಥಿಕ ಶಕ್ತಿ ಹೆಚ್ಚಲಿದೆ. ಸರ್ಕಾರ ರೇಷ್ಮೆ ಬೆಳೆಗೆ ಸಾಕಷ್ಟು ಸಹಾಯ ನೀಡುತ್ತಿದೆ ಎಂದು ತಿಳಿಸಿದರು.

ಸಚಿವರಾದ ಆರ್‌.ಬಿ.ತಿಮ್ಮಾಪೂರ, ಶಿವಾನಂದ ಪಾಟೀಲ, ಶಾಸಕರಾದ ಲಕ್ಷ್ಮಣ ಸವದಿ, ಜಗದೀಶ ಗುಡಗುಂಟಿ, ಮಹಮದ್‌ ಹ್ಯಾರಿಸ್‌ ನಡಪಾಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ಜಿ.ಎಸ್‌. ನ್ಯಾಮಗೌಡ, ಮಾಜಿ ಸಚಿವ ಮುರುಗೇಶ ನಿರಾಣಿ, ಎಸ್‌.ಆರ್‌. ಪಾಟೀಲ, ಕೊಲ್ಲಾಪುರ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ಹುಲ್ಯಾಳದ ಹರ್ಷಾನಂದ ಸ್ವಾಮೀಜಿ, ಕಲ್ಯಾಣ ಮಠದ ಗೌರಿಶಂಕರ ಸ್ವಾಮೀಜಿ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ರಾಹುಲ್‌ ಕಲೂತಿ, ಉಪಾಧ್ಯಕ್ಷ ಮಾಮೂನ ರಶೀದ ಪಾರ್ಥನಳ್ಳಿ, ನಿರ್ದೇಶಕರು, ಸಿಬ್ಬಂದಿ, ಗಣ್ಯರು ವೇದಿಕೆಲ್ಲಿದ್ದರು.

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ: ಬರುವ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಉತ್ತರ ಕರ್ನಾಟಕದ ಜನ ಹೃದಯ ಶ್ರೀಮಂತರು. ಮಾಜಿ ಶಾಸಕ ದಿ.ರಾಮಣ್ಣ ಕಲೂತಿ, ದಿ.ಸಿದ್ದು ನ್ಯಾಮಗೌಡರು ಬಹಳ ಆತ್ಮೀಯರಾಗಿದ್ದರು. ಅವರೊಂದಿಗೆ ಉತ್ತಮವಾದ ಒಡನಾಟವಿತ್ತು, ಸಹಕಾರ ಸಚಿವನಾಗಿದ್ದಾಗ ಹಾಗೂ ಜಮಖಂಡಿ ಶುಗರ್ಸ್‌ ಕಾರ್ಖಾನೆಯ ಉದ್ಘಾಟನೆಗೆ ಬಂದಿದ್ದು ನೆನಪಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.