ನಿರ್ದಿಗಂತ ಉತ್ಸವ ಚಿಂತನೆಗೆ ಹಚ್ಚುವ ನಾಟಕಗಳು, ಅದ್ಭುತ ರಂಗ ಚಿಂತನೆಗಳ ಸಂಗಮ

| Published : Feb 24 2025, 12:32 AM IST

ನಿರ್ದಿಗಂತ ಉತ್ಸವ ಚಿಂತನೆಗೆ ಹಚ್ಚುವ ನಾಟಕಗಳು, ಅದ್ಭುತ ರಂಗ ಚಿಂತನೆಗಳ ಸಂಗಮ
Share this Article
  • FB
  • TW
  • Linkdin
  • Email

ಸಾರಾಂಶ

ವರ್ತಮಾನದ ತಲ್ಲಣಗಳಿಗೆ ಮಿಡಿಯುವಂತಹ ಅನಾಮಿಕನ ಸಾವು ನಾಟಕದ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ಪೌರತ್ವ ಕಾಯ್ದೆಯ ಸಂಕಟಗಳನ್ನು ಈ ನಾಟಕ ಪ್ರಸ್ತುತ ಪಡಿಸಿದ ಬಗ್ಗೆ ಚರ್ಚೆಗಳು ನಡೆದವು.

ಧಾರವಾಡ: ಕಳೆದ ಎರಡು ದಿನಗಳಿಂದ ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿರುವ ನಿರ್ದಿಗಂತ ಉತ್ಸವವು ಉತ್ತರ ಕರ್ನಾಟಕಕ ಭಾಗದ ರಂಗಕರ್ಮಿಗಳು, ರಂಗ ತರಬೇತಿ ಪಡೆಯುತ್ತಿರುವರು ಹಾಗೂ ರಂಗಾಸಕ್ತರಿಗೆ ಅತ್ಯದ್ಭುತ ರಂಗ ಭೋಜನ ಒದಗಿಸುತ್ತಿದೆ.

ಉತ್ಸವದ ಮೊದಲ ದಿನ ನಡೆದ ಶಕೀರ ಅಹಮ್ಮದ ನಿರ್ದೇಶನದ ಅನಾಮಿಕನ ಸಾವು ಹಾಗೂ ಅಮಿತ್‌ ರೆಡ್ಡಿ ನಿರ್ದೇಶನದ ಮೈ ಮನಗಳ ಸುಳಿಯಲ್ಲಿ ನಾಟಕ ಕುರಿತು ಭಾನುವಾರ ಮೊದಲ ಗೋಷ್ಠಿಯು ಕರ್ನಾಟಕ ಕಾಲೇಜಿನ ಬಿಬಿಎ ಸಭಾಂಗದಲ್ಲಿ ಸುಮಾರು ಒಂದೂವರೆ ಗಂಟೆ ನಡೆಯಿತು.

ವರ್ತಮಾನದ ತಲ್ಲಣಗಳಿಗೆ ಮಿಡಿಯುವಂತಹ ಅನಾಮಿಕನ ಸಾವು ನಾಟಕದ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ಪೌರತ್ವ ಕಾಯ್ದೆಯ ಸಂಕಟಗಳನ್ನು ಈ ನಾಟಕ ಪ್ರಸ್ತುತ ಪಡಿಸಿದ ಬಗ್ಗೆ ಚರ್ಚೆಗಳು ನಡೆದವು. ಮೈ ಮನಗಳ ಸುಳಿಯಲ್ಲಿ ನಾಟಕ ಇಡೀ ಕಾದಂಬರಿಯನ್ನು ತೆರೆದಿಡುವಲ್ಲಿ ಹಿಂದೆ ಬಿದ್ದಿರುವ ಬಗ್ಗೆ ಪ್ರೇಕ್ಷಕರು ನಿರ್ದೇಶಕರನ್ನು ಪ್ರಶ್ನಿಸಿದರು.

ನಂತರ ಸಮಕಾಲೀನ ರಂಗಭೂಮಿ-ಕಸುಬುಗಾರಿಕೆಯ ಹುಡುಕಾಟ ವಿಷಯವಾಗಿ ನಾಟಕಕಾರ ನಾರಾಯಣಸ್ವಾಮಿ ಮಾತನಾಡಿದರು. ರಂಗಭೂಮಿಗೆ ಎದುರಾಗುತ್ತಿರುವ ಅದರಲ್ಲೂ ನಾಟಕಕಾರನ ಅಸ್ತಿತ್ವದ ಬಗ್ಗೆ ಅವರು ಪ್ರಶ್ನೆ ಎತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ನಾಟಕಕಾರ, ಕೃತಿಕಾರ ನಾಟಕಗಳಲ್ಲಿ ನಿಧಾನವಾಗಿ ಮರೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇವರ ಮಾತಿನ ನಂತರ ನಡೆದ ಸಂವಾದದಲ್ಲಿ ರಂಗಕರ್ಮಿ ಶಕೀಲ ಅಹಮ್ಮದ, ಪ್ರಕಾಶ ಗರುಡ, ವಿಕ್ರಮ ವಿಸಾಜಿ, ಡಿ.ಎಸ್‌. ಚೌಗಲಾ ಮತ್ತಿತರರು ಹಲವು ಪ್ರಶ್ನೆಗಳನ್ನು ಎತ್ತಿದರು.

ಕಂಬಾರರು, ಶಿವಪ್ರಕಾಶರು, ಕಾರ್ನಾಡರ ನಾಟಕಗಳನ್ನು ಹೊರತುಪಡಿಸಿ ಇತ್ತೀಚಿನ ನಾಟಕಗಳ, ನಾಟಕಕಾರರ ಬಗ್ಗೆಯೂ ಚರ್ಚೆಯಾಗಲಿ. ರಂಗಭೂಮಿಗೆ ಹೊಸ ರಂಗಚಿಂತನೆಗಳು, ವಿಸ್ತಾರ ಹರಿದು ಬರಲಿ. ಕನ್ನಡದಲ್ಲಿಯೇ ಸಾಕಷ್ಟು ನಾಟಕಗಳಿದ್ದು ಅವುಗಳ ಪ್ರಯೋಗಗಳು ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ನಂತರ ನಡೆದ ಕಥಾ-ಕಾವ್ಯ ಕಾರಣ ಗೋಷ್ಠಿಯಲ್ಲಿ ಯುವ ಸಾಹಿತಿ ಆರೀಫ್‌ ರಾಜಾ ಹಾಗೂ ಅನಸೂಯಾ ಕಾಂಬ್ಳೆ ಕಾವ್ಯವನ್ನು ಓದಿದರು. ಯುವ ಕಥೆಗಾರ ಟಿ.ಎಸ್‌. ಗೊರವರ ಕಥಾ ವಾಚನ ಮಾಡುವ ಮೂಲಕ ಓದುಗರ ಜೊತೆಗೆ ಕಾವ್ಯ, ಕಥೆ ಕುರಿತಾಗಿ ಸಂವಾದ ಮಾಡಿದರು.

ತದ ನಂತರ ವಿನಯ ಒಕ್ಕುಂದ ಅವರು ಸಮಕಾಲೀನ ಸೃಜನಶೀಲತೆಯ ಸ್ವರೂಪ ಕುರಿತು ಉಪನ್ಯಾಸ ನೀಡಿದರು. ಇತ್ತೀಚೆಗೆ ಯುವ ಲೇಖಕ-ಲೇಖಕಿಯರಿಂದ ಸೃಜನಾತ್ಮಕ ಸಾಹಿತ್ಯ ಬರುತ್ತಿದೆ ಎಂದರು.

ಸಂಜೆ ಕಲಬುರ್ಗಿಯ ಕಲ್ಯಾಣ ಕರ್ನಾಟಕ ಸೂಫಿಯಾನ್‌ ಗ್ರುಪ್‌ನಿಂದ ಖವ್ಯಾಲಿ ಮೂಡಿಬಂತು. ಹಾಗೆಯೇ, ಸಂಜೆ 7ರ ನಂತರ ಶಕೀಲ ಅಹಮ್ಮದ ನಿರ್ದೇಶನದಲ್ಲಿ ನಿರ್ದಿಂಗತ ತಂಡವು ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನಗೊಂಡಿತು. ಒಟ್ಟಾರೆ, ನಿರ್ದಿಗಂತ ಉತ್ಸವದಲ್ಲಿ ರಂಗ ಚಿಂತನೆಗೆ ಹಚ್ಚುವ ನಾಟಕಗಳು, ಅವುಗಳ ಬಗ್ಗೆ ಚರ್ಚೆ, ಸಂವಾದ ನಡೆಯುತ್ತಿದೆ.

ಫೆ. 24ರ ಸೋಮವಾರ ಮತ್ತೆ ಭಾನುವಾರ ನಡೆದ ಎರಡು ನಾಟಕಗಳ ಚರ್ಚೆ ಮೊದಲಿಗೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ವೃತ್ತಿ ರಂಗಭೂಮಿಯ ಸಾರ್ಥಕತೆಯ ಪ್ರಶ್ನೆ ಕುರಿತು ಪ್ರಕಾಶ ಗರುಡ ಬಿಬಿಎ ಸಭಾಂಗಣದಲ್ಲಿ ಮಾತನಾಡಲಿದ್ದಾರೆ. ಮಧ್ಯಾಹ್ನ 12ಕ್ಕೆ ಸೃಜನಾದಲ್ಲಿ ಸಹನಾ ಪಿಂಜರ್ ನಿರ್ದೇಶನದ ಹೂ ಎಂ ಐ ನಾಟಕ ಪ್ರದರ್ಶನ, ಮಧ್ಯಾಹ್ನ 3ಕ್ಕೆ ಅದ್ಭುತ ರಾಮಾಯಣ ಎಂಬ ತೊಗಲು ಗೊಂಬೆಯಾಟ ನಡೆಯಲಿದ್ದು, ಸಂಜೆ 4ಕ್ಕೆ ತತ್ವಪದ-ಅಂತರಂಗಂ ಕುರಿತು ರಹಿಮತ್‌ ತರೀಕೆರೆ ಮಾತನಾಡುತ್ತಾರೆ. ಇನ್ನು, ಸಂಜೆ 7ಕ್ಕೆ ಅರುಣ ಲಾಲ್‌ ನಿರ್ದೇಶನದಲ್ಲಿ ಮತ್ತಾಯ ನಾಟಕ ಪ್ರದರ್ಶನಗೊಳ್ಳಲಿದೆ.