ಸಾರಾಂಶ
ಮುಂಡರಗಿ: ಜಿಲ್ಲೆಯಲ್ಲಿಯೇ ತೀವ್ರ ಕುತೂಹಲ ಕೆರಳಿಸಿದ್ದ ಮುಂಡರಗಿ ಪುರಸಭೆಯ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಗುರುವಾರ ಜರುಗಿದ್ದು, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮತದಾನ ಮಾಡಿದರೂ ಬಿಜೆಪಿ ಅಧಿಕೃತ ಅಭ್ಯರ್ಥಿ ಸೋಲು ಕಂಡಿದ್ದು, ಹಾಲಿ ಶಾಸಕರು ತೀವ್ರ ಮುಖಭಂಗ ಅನುಭವಿಸುವಂತಾಯಿತು.
12 ಮತ ಪಡೆದುಕೊಂಡ ಬಿಜೆಪಿಯ ಬಂಡಾಯ ಅಭ್ಯರ್ಥಿ ನಿರ್ಮಲಾ ಕೊರ್ಲಹಳ್ಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿಯ ನಾಗೇಂದ್ರಪ್ಪ ತಿರಕಪ್ಪ ಹುಬ್ಬಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂಡರಗಿ ಪುರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಬಂಡಾಯ ಅಭ್ಯರ್ಥಿ ನಿರ್ಮಲಾ ಕೊರ್ಲಹಳ್ಳಿ ಹಾಗೂ ಬಿಜೆಪಿಯ ಅಧಿಕೃತ ಅಭ್ಯರ್ಥಿ ಜ್ಯೋತಿ ಹಾನಗಲ್ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನಾಗೇಂದ್ರ ಹುಬ್ಬಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾದರು.ಬಿಜೆಪಿಗೆ ಬಂಡಾಯದ ಬಿಸಿ: ಮುಂಡರಗಿ ಪುರಸಭೆಯಲ್ಲಿ ಒಟ್ಟು 23 ಜನ ಸದಸ್ಯರಿದ್ದು, ಓರ್ವ ಮಹಿಳಾ ಸದಸ್ಯೆ ಗೈರಾದ ಹಿನ್ನೆಲೆಯಲ್ಲಿ ಒಟ್ಟು 22 ಜನ ಮತದಾನ ಮಾಡಿದ್ದು, ಸ್ಥಳೀಯ ಸಂಸ್ಥೆಯಲ್ಲಿ ಮತದಾನಕ್ಕೆ ಅವಕಾಶ ಹೊಂದಿದ್ದ ಸ್ಥಳೀಯ ಶಾಸಕರು ಮತದಾನ ಮಾಡಿದರು. ಬಿಜೆಪಿ ಅಧಿಕೃತ ಅಭ್ಯರ್ಥಿ ಗೆಲುವು ಸಾಧಿಸಲಿಲ್ಲ. ಮತದಾನದಲ್ಲಿ ಬಿಜೆಪಿಯ 7 ಜನ ಸದಸ್ಯರು ಹಾಗೂ 5 ಜನ ಕಾಂಗ್ರೆಸ್ ಸದಸ್ಯರು ಬಂಡಾಯ ಅಭ್ಯರ್ಥಿಯನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ಒಟ್ಟು12 ಮತ ಪಡೆದ ಬಿಜೆಪಿ ಬಂಡಾಯ ಅಭ್ಯರ್ಥಿ ನಿರ್ಮಲಾ ಅಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿಯ ಅಧಿಕೃತ ಅಭ್ಯರ್ಥಿ ಜ್ಯೋತಿ ಹಾನಗಲ್ ಅವರಿಗೆ ಬಿಜೆಪಿಯ 7 ಜನ, ಕಾಂಗ್ರೆಸ್ ನ 2 ಮತ್ತು ಒರ್ವ ಪಕ್ಷೇತರರು ಹಾಗೂ ಸ್ಥಳೀಯ ಶಾಸಕ ಡಾ. ಚಂದ್ರು ಲಮಾಣಿ ಅವರ ಮತ ಸೇರಿಯೂ 11 ಮತಗಳನ್ನಷ್ಟೇ ಪಡೆದು ಒಂದು ಮತದ ಅಂತರಿಂದ ಪರಾಭವಗೊಂಡರು.
ಕಾಂಗ್ರೆಸ್ ನಲ್ಲಿಯೂ ಬಂಡಾಯ: ಮುಂಡರಗಿ ಪುರಸಭೆಯಲ್ಲಿ 7 ಜನ ಕಾಂಗ್ರೆಸ್ ಸದಸ್ಯರಿದ್ದರೂ ಅವರಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗೆ 5 ಜನ ಹಾಗೂ ಅಧಿಕೃತ ಬಿಜೆಪಿ ಅಭ್ಯರ್ಥಿಗೆ ಇಬ್ಬರು ಮತ ನೀಡಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮುಂಡರಗಿ ಕಾಂಗ್ರೆಸ್ ನಲ್ಲಿಯೂ ಬಂಡಾಯವಿದೆ. ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ಗುರುವಾರದ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಉತ್ತಮ ಉದಾಹರಣೆಯಾಗಿದೆ.ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಿರ್ಮಲಾ ಕೊರ್ಲಹಳ್ಳಿ ಮಾತನಾಡಿ, ನನಗೆ ಮತ ನೀಡಿ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ, ಬೆಂಬಲಿಸಿದ ಪಕ್ಷದ ಮುಖಂಡರಿಗೆ ಕೃತಜ್ಞತೆಗಳು. ಮುಂಬರುವ ದಿನಗಳಲ್ಲಿ ಉಪಾಧ್ಯಕ್ಷರು ಸೇರಿದಂತೆ ಎಲ್ಲ ವಾರ್ಡುಗಳ ಸದಸ್ಯರನ್ನು ಒಳಗೊಂಡು ಪಟ್ಟಣದ ಅಭಿವೃದ್ದಿಗೆ ಶ್ರಮಿಸುವೆ ಎಂದರು.
ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಾಗೇಂದ್ರಪ್ಪ ಹುಬ್ಬಳ್ಳಿ ಮಾತನಾಡಿ, ನಮ್ಮ ಪಕ್ಷ ನನ್ನನ್ನು ಪುರಸಭೆ ಉಪಾಧ್ಯಕ್ಷರನ್ನಾಗಿ ಮಾಡಿದ್ದು, ಎಲ್ಲ ಸದಸ್ಯರಿಗೆ, ಪಕ್ಷದ ಅಧ್ಯಕ್ಷರಿಗೆ, ಬೆಂಬಲಿಸಿದ ಕಾಂಗ್ರೆಸ್ ಪಕ್ಷದ ಸದಸ್ಯರಿಗೂ ಸಹ ಅಭಿನಂದಿಸುವೆ ಎಂದರು.ನಾವು ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಜ್ಯೋತಿ ಹಾನಗಲ್ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಿದ್ದೆವು, ಅವರಿಗೆ ಮತ ನೀಡುವಂತೆ ಎಲ್ಲ ಬಿಜೆಪಿ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದೇವು. ಆದರೆ ಅವರಿಗೆ 11 ಮತಗಳು ಬಂದಿದ್ದು, ನಮ್ಮ ಪಕ್ಷದವರೇ ಆಗಿರುವ ನಿರ್ಮಲಾ ಕೊರ್ಲಹಳ್ಳಿ 12 ಮತಗಳನ್ನು ಪಡೆದುಕೊಂಡು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಪ್ ಉಲ್ಲಂಘನೆ ಮಾಡಿದವರ ಬಗ್ಗೆ ನಂತರ ಯೋಚಿಸಲಾಗುವುದು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರೂ ನಮ್ಮ ಪಕ್ಷದವರೇ, ಅದರಲ್ಲಿಯೇ ಒಬ್ಬರು ಅಧ್ಯಕ್ಷರಾಗಿದ್ದಾರೆ ಎಂದು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ತಿಳಿಸಿದ್ದಾರೆ.