ಬಹುತ್ವದ ಸಂಸ್ಕೃತಿ ಸಮನ್ವಯಗೊಂಡಾಗ ಮಾತ್ರ ಜಾನಪದ ಮೂಲ ಸಂಸ್ಕೃತಿಯ ಬೇರು ಉಳಿಯುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರುಜಾನಪದ ಕಲೆಯಲ್ಲಿ ಆಸ್ಥೆ ವಹಿಸಿದಾಗ ಮಾತ್ರ ಜೀವನದಲ್ಲಿ ಶಿಸ್ತು, ತಾಳ್ಮೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಅಭಿಪ್ರಾಯಪಟ್ಟರು.ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಜಾನಪದ ಮಡಿಲು ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜಾನಪದ ಸಂಭ್ರಮ ಹಾಗೂ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.ಬಹುತ್ವದ ಸಂಸ್ಕೃತಿ ಸಮನ್ವಯಗೊಂಡಾಗ ಮಾತ್ರ ಜಾನಪದ ಮೂಲ ಸಂಸ್ಕೃತಿಯ ಬೇರು ಉಳಿಯುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾನಪದ ಕಲಿಗೆಗೆ ತೊಡಗಿಸಿಕೊಂಡಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಜಾನಪದ ಮಡಿಲು ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಪದಾಧಿಕಾರಿಗಳು ಮೈಸೂರು ವಿವಿ ಜಾನಪದ ವಿಭಾಗದ ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳ ಕಲಿಕೆಗೆ ಆದ್ಯತೆ ನೀಡಿರುವುದು ಸಂತಸ ಸಂಗತಿ ಎಂದರು.ಜನಪದ ಗಾಯಕಿ ಎಂ. ಕೆಂಪಮ್ಮ ಕಾರ್ಕಳ್ಳಿ, ರಂಗ ನಿರ್ದೇಶಕ ಕೆ.ಜೆ. ನಾರಾಯಣ, ಜನಪದ ಗಾಯಕರಾದ ಲಕ್ಷ್ಮಿರಾಮ್, ವಿಶ್ವನಾಥ್ ಎಲ್. ಚಂಗಚಹಳ್ಳಿ, ಅನಿಲ್ ರಾಜ್ ಸಿ. ಮಹದೇವಪುರ, ವೀರಭದ್ರ ಕುಣಿತ ಕಲಾವಿದ ಕಿರಾಳು ಮಹೇಶ್, ತಮಟೆ ಕಲಾವಿದ ಎಂ.ಆರ್. ಮನೋಜ್ ಕುಮಾರ್ ಅವರಿಗೆ ಜಾನಪದ ಜೀವಾಳ ಪ್ರಶಸ್ತಿ ಪ್ರದಾನ ಮಾಡಲಾಯಿತು.ಬಳಿಕ ಕಾಡಕೊತ್ತನಹಳ್ಳ ಅಂಬೇಡ್ಕರ್ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಸಿ. ಚಂದ್ರಶೇಖರ್, ಎಸ್. ಕೃಷ್ಣಪ್ಪ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು, ಹಿರಿಯ ಜಾನಪದ ಕಲಾವಿದ ಡಾ. ಕ್ಯಾತನಹಳ್ಳಿ ರಾಮಣ್ಣ, ನಿವೃತ್ತ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಜಾನಪದ ವಿದ್ವಾಂಸರಾದ ವ.ನಂ. ಶಿವರಾಮು, ಡಾ.ಸಿ. ಸುಂದರೇಶ್, ಆರ್.ಸಿ. ಸಿದ್ದರಾಜು ಇದ್ದರು. ಕೆ. ವಿನುತಾ ಕಾರ್ಯಕ್ರಮ ನಿರೂಪಿಸಿದರು.