ಕಾಪು: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಪಕ್ಷದ ಕಾರ್ಯಕರ್ತರಿಗೆ ಮೂರು ಟಾಸ್ಕ್‌ಗಳನ್ನು ನೀಡಿದ್ದಾರೆ.

ಶನಿವಾರ ಇಲ್ಲಿನ ಉಚ್ಚಿಲ ಮಹಾಲಕ್ಷ್ಮೀ ದೇವಾಲಯದ ಸಭಾಭವನದಲ್ಲಿ 2 ದಿನಗಳ ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಹರಡಲಾಗುತ್ತಿರುವ ಸುಳ್ಳು ಸುದ್ದಿಗಳ ಬಗೆಗಿನ ಸತ್ಯವನ್ನು ಜನರಿಗೆ ತಿಳಿಸುವ, ಎಲ್ಲ ಸಂಕಷ್ಟಗಳ ಮಧ್ಯೆಯೂ ಭಾರತದ ಆರ್ಥಿಕ ಪರಿಸ್ಥಿತಿ ಮತ್ತು ಜಿಡಿಪಿ ಅತೀ ವೇಗದಲ್ಲಿ ಸುಧಾರಿಸುತ್ತಿರುವುದನ್ನು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ 2047ರಲ್ಲಿ ಭಾರತವನ್ನು ಸಂಪೂರ್ಣ ವಿಕಸಿತ ದೇಶವನ್ನಾಗಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವ ಮೂರು ಕೆಲಸಗಳನ್ನು ಮಾಡಬೇಕು ಎಂದರು.ಸಾಮಾಜಿಕ ಜಾಲತಾಣಗಳಿಗೆ ದೇಶದ ಹೊರಗಿನಿಂದ ಹಣ ಪೂರೈಕೆ ಮಾಡಿ, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವ್ಯವಸ್ಥಿತವಾಗಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ, ಕ್ರಮೇಣ ಈ ಸುಳ್ಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿತ್ತಸಚಿವೆ, ಬಿಜೆಪಿ ಕಾರ್ಯಕರ್ತರು ಈ ಸುದ್ಧಿಗಳ ಅಧಿಕೃತತೆಯನ್ನು ಪರೀಕ್ಷಿಸಿ, ಸುಳ್ಳು ಸುದ್ದಿ ಎಂದು ಗೊತ್ತಾದಾಗ ಸುಮ್ಮನಿರಬೇಡಿ, ಆದರೇ ಜಗಳವಾಡಬೇಡಿ, ಸರ್ಕಾರ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಜನರಿಗೆ ಮುಂದಿಡಿ ಎಂದು ಕರೆ ನೀಡಿದರು. ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವುದಕ್ಕೆ ಕಾಂಗ್ರೆಸ್ ಯಾವ ಮಟ್ಟಕ್ಕೂ ಇಳಿಯುತ್ತಿದೆ, ಬಿಜೆಪಿ ಕಾರ್ಯಕರ್ತರು ಇದನ್ನೆಲ್ಲಾ ಎದುರಿಸಿ ನಿಲ್ಲುವುದಕ್ಕೆ ಸದಾ ಸಿದ್ದರಿರಬೇಕು ಎಂದರು.ಮಧ್ಯಪ್ರಾಚ್ಯ ಚಿಕ್ಕಟ್ಟಿನ ಮಧ್ಯೆಯೂ ಭಾರತದ ಜಿಡಿಪಿ ಶೇ 7.7ರ ದರದಲ್ಲಿ ಹೆಚ್ಚುತ್ತಿದೆ, ದೇಶದ ಆರ್ಥಿಕತೆ ಸಬಲವಾಗಿದೆ ಎಂದು ಸ್ವತಃ ವಿಶ್ವ ಬ್ಯಾಂಕ್ ಹೇಳಿದೆ, ವಿದೇಶಿ ಮಾರುಕಟ್ಟೆಯೂ ಅತ್ಯುತ್ತಮವಾಗಿದೆ ಎಂದು ಎಲ್ಲ ಸೂಚಕಗಳು ತಿಳಿಸುತ್ತಿವೆ, ದೇಶದ ಕೈಗಾರಿಕಾ ಹೂಡಿಕೆಯೂ ಶೇ 60ರಷ್ಟು ಹೆಚ್ಚಾಗಿದೆ, ಆದರೆ ಕಾಂಗ್ರೆಸ್ ಇದನ್ನು ಒಪ್ಪಲು ತಯಾರಿಲ್ಲ, ದೇಶದ ಜಿಡಿಪಿ ಹೆಚ್ಚುತ್ತಿದೆ ಎಂದರೇ ದೇಶದೊಳಗಿನ ಕೈಗಾರಿಕಾ, ಕೃಷಿ, ಬ್ಯಾಂಕಿಂಗ್, ಸೇವಾ ಸೇರಿ ಎಲ್ಲ ವಲಯಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದೇ ಅರ್ಥ, ಆದ್ದರಿಂದ ಕಾರ್ಯಕರ್ತರು ಇದನ್ನು ಜನತೆಗೆ ಮನವರಿಕೆ ಮಾಡಬೇಕು ಎಂದು ಸಲಹೆ ಮಾಡಿದರು.

ಸಬ್‌ ಕಾ ಪ್ರಯಾಸ್ ಬೇಕು: ಇತ್ತೀಚೆಗೆ ನಡೆದ ದೇಶದ ನೀತಿ ಆಯೋಗದ ಸಭೆಯಲ್ಲಿ ದೇಶದ ಎಲ್ಲ ಮುಖ್ಯಮಂತ್ರಿಗಳು ಭಾಗವಹಿಸಿದ್ದು, ಅಧ್ಯಕ್ಷತೆ ವಹಿಸಿದ್ದ ಪಿಎಂ ಮೋದಿ ಅವರು, 2047ರಲ್ಲಿ ದೇಶವೂ ಸಂಪೂರ್ಣ ವಿಕತಸಿತ ಭಾರತವನ್ನಾಗಿ ಮಾಡಲು ಸಬ್‌ ಕಾ ಸಾತ್, ಸಬ್‌ ಕಾ ವಿಕಾಸ್ ಗೆ ಸಬ್‌ ಕಾ ಪ್ರಯಾಸ್ (ಪ್ರಯತ್ನ) ಅಗತ್ಯ ಎಂದು ಹೇಳಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರು ವಿಕಸಿತ ಭಾರತ್ ನಿರ್ಮಾಣಕ್ಕೆ ಸರ್ಕಾರದ ಜೊತೆ ಪ್ರಯತ್ನ ಮಾಡಬೇಕು ಎಂದು ನಿರ್ಮಲಾ ಸೀತಾರಾಮನ್ ಸೂಚಿಸಿದರು.

ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ವಹಿಸಿದ್ದು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್ ಕುಮಾರ್, ಯಶ್‌ಪಾಲ್ ಸುವರ್ಣ, ಕಿರಣ್ ಕೊಡ್ಗಿ, ಸುರೇಶ್‌ ಶೆಟ್ಟಿ, ಗುರುರಾಜ ಗಂಟಿಹೊಳೆ ಮತ್ತು ಡಾ. ಧನಂಜಯ ಸರ್ಜಿ, ಪ್ರಮುಖರಾದ ಉದಯಕುಮಾರ್ ಶೆಟ್ಟಿ ಮತ್ತು ಶಿಲ್ಪ ಸುವರ್ಣ ವೇದಿಕೆಯಲ್ಲಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್ ಸ್ವಾಗತಿಸಿದರು, ದಿನಕರ ಶೆಟ್ಟಿ ಹೆರ್ಗ ವಂದಿಸಿದರು, ಪ್ರಶಿಕ್ಷಣ ವರ್ಗ ಸಂಯೋಜಕ ಕೆ ಬಿ ಶೆಟ್ಟಿ ವಂದಿಸಿದರು.


ಜಿಎಸ್‌ಡಿಪಿ ಕೂಡ ಹೆಚ್ಚಾಗಬೇಕು: ಕೇಂದ್ರ ಸರ್ಕಾರ ಹಂತದಲ್ಲಿ ಜಿಡಿಪಿ ಏರಿಕೆಯಾದರೆ ಸಾಲದು, ರಾಜ್ಯ ಮಟ್ಟದಲ್ಲಿ ಜಿಎಸ್‌ಡಿಪಿ ಕೂಡ ಹೆಚ್ಚಾಗಬೇಕು, ಅದಕ್ಕಾಗಿ ಉತ್ತರಪ್ರದೇಶ ರಾಜ್ಯದಲ್ಲಿ ಅಭಿವೃದ್ಧಿಯ ಬಗ್ಗೆ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ, ಜಿಲ್ಲಾ ಮಟ್ಟದಲ್ಲಿ ಯೋಜನೆಗಳು ತಯಾರಾಗುತ್ತಿವೆ. ಇದು ಕ್ಷೇತ್ರ ಮಟ್ಟದಲ್ಲಿಯೂ ಆಗಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಕಾರ್ಯಕರ್ತರು ನಿಮ್ಮ ವ್ಯಾಪ್ತಿಯ ಮನೆಮನೆಗೆ ಹೋಗಿ, ಅವರ ಬೇಡಿಕೆಗಳನ್ನು ಸಂಗ್ರಹಿಸಿ ಶಾಸಕ ಸಂಸದರಿಗೆ ತಲುಪಿಸಿ, ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ಪ್ರಜೆಗೆ ನೂರಾರು ಯೋಜನೆಗಳನ್ನು ಜಾರಿಗೆ ತಂದಿದೆ, ಈ ಯೋಜನೆಗಳಿಂದ ಯಾರೂ ವಂಚಿತರಾಗದಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.