ಸಾರಾಂಶ
ಶಿವಮೊಗ್ಗದಲ್ಲಿ ಆರಂಭಗೊಂಡ ಎಸ್‌ಐಡಿಬಿಐ ಶಾಖೆಯ ಉದ್ಘಾಟನೆಯನ್ನು ಸಂಸದ ಬಿ.ವೈ.ರಾಘವೇಂದ್ರ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾದ (SIDBI)ನ ನೂತನ ಶಾಖೆಯನ್ನು ವರ್ಚುವಲ್ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಶಿವಮೊಗ್ಗ ಕಚೇರಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.ಶಿವಮೊಗ್ಗದಲ್ಲಿ ಆರಂಭಗೊಂಡ ಶಾಖೆಯನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮ್ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದರೆ, ಇತ್ತ ಸಂಸದ ರಾಘವೇಂದ್ರ ಅವರು ಕಚೇರಿಯಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿದರು.
ಶಾಖೆಯ ಆರಂಭದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಶಕ್ತಿ ತುಂಬಲು ಸಹಕಾರಿಯಾಗುತ್ತದೆ. ಕೇಂದ್ರಸರ್ಕಾರ ಮತ್ತು ಹಣಕಾಸು ಸಚಿವರ ಈ ನಿರ್ಧಾರ ಅಭಿವೃದ್ಧಿಯ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ. ಅವರ ಮಾರ್ಗದರ್ಶನದ ಮೂಲಕ ಈ ಯೋಜನೆಗೆ ಜೀವ ತುಂಬಲಾಗಿದೆ. ಇದರಿಂದ ಜಿಲ್ಲೆಯ MSME ಮತ್ತು ಸ್ಟಾರ್ಟಪ್‌ಗಳಿಗೆ ಅಗತ್ಯವಿರುವ ಹಣಕಾಸಿನ ಬೆಂಬಲವನ್ನು ಸಮೀಪಕ್ಕೆ ತರುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಎಸ್ಐಡಿಬಿಐ ಸ್ಥಾಪನೆಯು ಅಭಿವೃದ್ಧಿಯ ವಿಸ್ತರಣೆಯಲ್ಲಿ ಪ್ರಧಾನಿ ಮತ್ತು ಹಣಕಾಸು ಸಚಿವರ ದೃಷ್ಟಿಯುನ್ನು ತೋರಿಸುತ್ತದೆ. ಇದು ಸ್ಥಳೀಯ ಅಭಿವೃದ್ಧಿ, ಆರ್ಥಿಕತೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಸಮಗ್ರ ಬೆಳವಣಿಗೆಗೆ ಬದ್ಧತೆಯನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.
ಈ ಸಾಧನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೇರಣಾದಾಯಕ ಹಾಗೂ ದೂರದೃಷ್ಟಿಯಿಂದ ಸಮನ್ವಯಗೊಂಡಿದ್ದು, ಅವರ ‘ವೈಬ್ರಂಟ್ ಇಂಡಿಯಾ’ ಮತ್ತು ‘ಆತ್ಮನಿರ್ಭರ್ ಭಾರತ್’ ಮಿಷನ್ ದೇಶವ್ಯಾಪಿ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿದೆ. ಶಿವಮೊಗ್ಗದಲ್ಲಿ SIDBI ಶಾಖೆಯ ಉದ್ಘಾಟನೆಯು ಭಾರತವನ್ನು ಆರ್ಥಿಕ ಶಕ್ತಿಯುಳ್ಳ ರಾಷ್ಟ್ರವನ್ನಾಗಿ ರೂಪಿಸುವ ಅವರ ಬದ್ಧತೆಯನ್ನು ದೃಢಪಡಿಸುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮತ್ತು ಮಾಜಿ ಶಾಸಕರಾದ ರುದ್ರೇಗೌಡ ಹಾಗೂ ಬ್ಯಾಂಕಿನ ಡಿಜಿಎಂ ಕುಲಶೇಖರನ್ ಮತ್ತು ಶಾಖಾ ವ್ಯವಸ್ಥಾಪಕರಾದ ಶಿವಕುಮಾರ್ ಬಿಲ್ಲು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲಾ ಇಂಡಸ್ಟ್ರೀಸ್ ಅಸೋಷಿಯೇಷನ್ ಪದಾಧಿಕಾರಿಗಳು ಹಾಜರಿದ್ದರು.
ಶಿವಮೊಗ್ಗದ MSME ಕ್ಷೇತ್ರಕ್ಕೆ SIDBIನ ಲಾಭಗಳು:
SIDBI ಕನಿಷ್ಟ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತದೆ. ಇದು ಕಾರ್ಯನಿಧಿ ಬೆಂಬಲ, ರಫ್ತು, ಕ್ರೆಡಿಟ್, ತಂತ್ರಜ್ಞಾನ ನವೀಕರಣ ಮತ್ತು ದೀರ್ಘಾವಧಿ ಹೂಡಿಕೆಗಳಿಗಾಗಿ ಸಹಾಯ ಮಾಡುತ್ತದೆ. SIDBI ತನ್ನ ವಿಶೇಷ ಯೋಜನೆಗಳ ಮೂಲಕ ಹೊಸ ಮತ್ತು ಮಹಿಳಾ ಮಾಲೀಕತ್ವದ ಸಂಸ್ಥೆಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸುತ್ತದೆ. ವೃದ್ಧಿಗೊಳ್ಳುವ ಸಾಲದ ಪ್ರವಾಹವು ಸ್ಥಳೀಯ ಉದ್ಯೋಗ ಸೃಷ್ಟಿಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಶಿವಮೊಗ್ಗದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.