ಸಂಘಟನೆಗಳು ಅನಾಥ, ಚಳವಳಿಗಳಿಗೆ ಮಂಕು: ಜನ್ನಿ

| Published : Nov 10 2024, 01:54 AM IST / Updated: Nov 10 2024, 01:55 AM IST

ಸಂಘಟನೆಗಳು ಅನಾಥ, ಚಳವಳಿಗಳಿಗೆ ಮಂಕು: ಜನ್ನಿ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತ ಸಂಘಟನೆಗಳು ದಯನೀಯ ಸ್ಥಿತಿಗೆ ತಲುಪಿವೆ, ಸಂಘಟನೆಗಳು ಅನಾಥವಾಗಿದ್ದು ಚಳವಳಿಗಳು ಮಂಕಾಗಿವೆ ಎಂದು ಮೈಸೂರಿನ ಹಿರಿಯ ರಂಗಕರ್ಮಿ, ಎಚ್‌.ಜನಾರ್ದನ್‌ (ಜನ್ನಿ) ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಲಿತ ಸಂಘಟನೆಗಳು ದಯನೀಯ ಸ್ಥಿತಿಗೆ ತಲುಪಿವೆ, ಸಂಘಟನೆಗಳು ಅನಾಥವಾಗಿದ್ದು ಚಳವಳಿಗಳು ಮಂಕಾಗಿವೆ ಎಂದು ಮೈಸೂರಿನ ಹಿರಿಯ ರಂಗಕರ್ಮಿ, ಎಚ್‌.ಜನಾರ್ದನ್‌ (ಜನ್ನಿ) ಬೇಸರ ವ್ಯಕ್ತಪಡಿಸಿದರು.

ಶನಿವಾರ ಕನ್ನಡ ಭವನದ ಕರ್ನಾಟಕ ನಾಟಕ ಅಕಾಡೆಮಿಯ ರಂಗ ಚಾವಡಿಯಲ್ಲಿ ಆಯೋಜಿಸಿದ್ದ ‘ರಂಗ ಸಂವಾದ-04’ರಲ್ಲಿ ಅತಿಥಿಯಾಗಿ ಅವರು ಮಾತನಾಡಿ, 1970-80ರ ದಶಕದಲ್ಲಿ ಸಂಘಟನೆಗಳ ನಾಯಕರು ಬೇಟೆ ನಾಯಿಗಳಂತೆ ಶೋಷಿತರಿಗೆ, ದಲಿತರಿಗೆ ಅನ್ಯಾಯ ಮಾಡಿದವರ ವಿರುದ್ಧ ವ್ಯವಸ್ಥಿತವಾಗಿ ಪ್ರಬಲ ಹೋರಾಟ ಮಾಡುತ್ತಿದ್ದರು. ಪ್ರಗತಿಪರ, ಜನಪರವಾಗಿ ಕೆಲಸ ಮಾಡುತ್ತಿದ್ದ ನಾಯಕರು ಯುವಕರನ್ನು ಹುರಿದುಂಬಿಸಿ ಎಲ್ಲಿಯೂ ಬಲಹೀನರಾಗದಂತೆ ನೋಡಿಕೊಳ್ಳುತ್ತಿದ್ದರು. ಹೋರಾಟದ ಸಣ್ಣ ಬೀಜ ಬಿತ್ತಿದರೆ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಗೆ ಬರುತ್ತಿದ್ದರು. ಇಂದು ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಸಂಘಟನೆಗೆ ಸೇರಿಕೊಳ್ಳುತ್ತಿರುವುದರಿಂದ ಚಳವಳಿಗಳು ಸೊರಗುತ್ತಿವೆ ಎಂದರು.

1974ರ ಹೊತ್ತಿನಲ್ಲಿ ಎಲ್ಲಿ ನೋಡಿದರೂ ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆ, ಮನುಷ್ಯರನ್ನು ಮನುಷ್ಯರಂತೆ ನೋಡದಂತಹ ಅವ್ಯವಸ್ಥೆಯಿತ್ತು. ನಾವು ಈ ಸಮಾಜದಲ್ಲಿ ಎಲ್ಲರೂ ಕೂಡ ಸರಿಸಮಾನವಾಗಿ ಬದುಕಬೇಕು ಎಂಬ ಇಚ್ಛೆ ನಮ್ಮದಾಗಿತ್ತು. ಹೀಗಾಗಿ ದಲಿತ ಚಳವಳಿಗೆ ಅನಿವಾರ್ಯವಾಗಿ ಪ್ರವೇಶ ಮಾಡಲೇಬೇಕಾಯಿತು. ಸಂವಿಧಾನದಲ್ಲಿ ಹಕ್ಕನ್ನು ಎಲ್ಲರಿಗೂ ಸಮಾನಾಂತರವಾಗಿ ಹಂಚಲಾಗಿದೆ. ಅದನ್ನು ನೋಡಿಕೊಳ್ಳಲು ಸರ್ಕಾರಗಳು ಇವೆ. ಆದರೆ, ಈ ಸರ್ಕಾರಗಳು ತಮ್ಮನ್ನು ತಾವೇ ನೋಡಿಕೊಳ್ಳುತ್ತಿದ್ದವೇ ಹೊರತು ಮತ್ತೊಬ್ಬರ ಕಡೆಗೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಹಾಗಾಗಿ ದಲಿತ ಸಂಘರ್ಷ ಸಮಿತಿಯ ಮೂಲಕ ಹೋರಾಟಕ್ಕೆ ಇಳಿದೆವು ಎಂದು ನೆನಪಿಸಿಕೊಂಡರು.

ನಂತರ ದಲಿತ ಕವಿ ಪ್ರೊ.ಸಿದ್ದಲಿಂಗಯ್ಯ ಅವರ ಒಡನಾಟದಲ್ಲಿ ಸಾಕಷ್ಟು ಹೋರಾಟ, ಚಳವಳಿಗಳಲ್ಲಿ ಪಾಲ್ಗೊಂಡಿದ್ದೇನೆ. ‘ಸಮುದಾಯ’ ಸಾಂಸ್ಕೃತಿಕ ಸಂಘಟನೆಯಲ್ಲಿ ಹಲವಾರು ಬೀದಿ ನಾಟಕ ಸೇರಿದಂತೆ ದೊಡ್ಡ ನಾಟಕಗಳ ಮೂಲಕ ಜನರತ್ತ ರಂಗಭೂಮಿಯನ್ನು ಕೊಂಡೊಯ್ಯಲಾಯಿತು. ವೃತ್ತಿ ರಂಗ ಭೂಮಿಯ ಕಲಾವಿದರ ಗೋಳು, ಬದುಕು, ನೋವು, ಎಲ್ಲವನ್ನೂ ಅರಗಿಸಿಕೊಂಡಿದ್ದೇವೆ. ಅದರ ಆಧಾರದ ಮೇಲೆ ಆಧುನಿಕ ರಂಗಭೂಮಿಯಲ್ಲಿ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ರಂಗಕರ್ಮಿ ರಂಗನಾಥ್‌ ಉಪಸ್ಥಿತರಿದ್ದರು.