ಸಾರಾಂಶ
ಶಿರಹಟ್ಟಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವೆ ಅನನ್ಯ. ಸರ್ಕಾರ ಮಾಡಲಾರದಂತಹ ಉತ್ತಮ ಕೆಲಸ ಸಂಸ್ಥೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ. ಕಳೆದ ೧೫ ವರ್ಷಗಳ ಕಾಲಾವಧಿಯಲ್ಲಿ ಲಕ್ಷಾಂತರ ಮಹಿಳೆಯರಲ್ಲಿ ಒಗ್ಗಟ್ಟನ್ನು ಮೂಡಿಸಿ ಸ್ವಸಹಾಯ ಸಂಘಗಳ ಮೂಲಕ ಸಮಾಜದಲ್ಲಿ ತಲೆದೋರಿದ ಅನೇಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಉತ್ತಮ ಸೇವೆಗೈದಿದೆ ಎಂದು ರಾಜ್ಯ ಅಂಗವಿಕಲರ ರಾಜ್ಯ ಒಕ್ಕೂಟದ ರಾಜ್ಯಾಧ್ಯಕ್ಷ ಶಶಿಧರ ಶಿರಸಂಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಫಕೀರೇಶ್ವರ ನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ವತಿಯಿಂದ ಸಮುದಾಯ ಅಭಿವೃದ್ಧಿ ವಿಭಾಗದ ಜನಮಂಗಲ ಕಾರ್ಯಕ್ರಮದಡಿ ಜರುಗಿದ ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ನೀಡಲಾದ ವ್ಹೀಲ್ ಚೇರ್, ವಾಕ್ ಸ್ಟಿಕ್ ಹಾಗೂ ಕಮೋಡ್ ಕಮ್ ವ್ಹೀಲ್ ಚೇರ್ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ರಾಜ್ಯದಲ್ಲಿ ಬಡಜನರು, ನಿರ್ಗತಿಕರು, ದುರ್ಬಲ ವರ್ಗದವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೆರವು ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿರುವುದು ಹೆಮ್ಮೆ ತರಿಸಿದೆ.ಅನೇಕ ಸಮಾಜಮುಖಿ ಕೆಲಸ ಮಾಡಿ ಪ್ರತಿಯೊಂದು ಬಡ ಕುಟುಂಬಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಲಕ್ಷಾಂತರ ಕುಟುಂಬಗಳು ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಳಿಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ ಕೊಡಿಸುತ್ತಿವೆ. ಶಿಷ್ಯ ವೇತನ, ಹಿರಿಯ ನಾಗರಿಕರಿಗೆ ಮಾಶಾಸನ ಸೇರಿದಂತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಂಸ್ಥೆಯವರು ಕಾರಣರಾಗಿದ್ದಾರೆ ಎಂದು ಹೇಳಿದರು.ಧರ್ಮಸ್ಥಳ ಸಂಸ್ಥೆ ಸಾಮಾಜಿಕ ಕಾರ್ಯ ಕೈಗೊಳ್ಳುವ ಮೂಲಕ ಮಾದರಿ ಸಂಸ್ಥೆಯಾಗಿದೆ. ಕೆರೆಗಳ ಪುನರುಜ್ಜೀವನ, ಮಂದಿರ, ಮಸೀದಿ, ಚರ್ಚಗಳ ಅಭಿವೃದ್ಧಿಗೆ ಅನುದಾನ, ಗ್ರಾಮಗಳ ನೈರ್ಮಲ್ಯೀಕರಣ ಕಾರ್ಯಕ್ರಮಗಳ ಮೂಲಕ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜತೆಗೆ ಗ್ರಾಮೀಣಾಭಿವೃದ್ಧಿ ಯೋಜನೆಯ ಸದಸ್ಯತ್ವ ಹೊಂದಿಲ್ಲದ ಯಾವುದೇ ಅರ್ಹ ವಿಕಲಚೇತನರು ತಮಗೆ ಅವಶ್ಯಕತೆ ಇರುವ ಸಾಧನ ಸಲಕರಣೆಗಳ ಉಚಿತ ಪೂರೈಕೆ ಬಗ್ಗೆ ತಮ್ಮ ಇತ್ತೀಚಿನ ವಿಕಲತೆಯ ಭಾವಚಿತ್ರ, ಆಧಾರ್ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರಗಳ ನಕಲು ಪ್ರತಿ ಸಲ್ಲಿಸಿದರೆ ಯಾವುದೇ ರೀತಿಯ ಶುಲ್ಕವಿಲ್ಲದೆ ಉಚಿತವಾಗಿ ಸಾಧನೆ ಸಲಕರಣೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿ, ಸಾಮಾಜಿಕ, ಆರ್ಥಿಕ ಪ್ರಗತಿಗೆ ಹಾಗೂ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅನೇಕ ಯೋಜನೆಗಳ ಮೂಲಕ ಪ್ರಶಂಸನೀಯ ಕಾರ್ಯ ಕೈಗೊಂಡಿದೆ. ರಾಜ್ಯದ ಅನೇಕ ಗ್ರಾಮಗಳಲ್ಲಿ ಗ್ರಾಮಾಭಿವೃದ್ದಿಗಾಗಿ ಧರ್ಮಸ್ಥಳ ಸಂಸ್ಥೆ ಅನೇಕ ಯೋಜನೆ ಅನುಷ್ಠಾನಗೊಳಿಸಿ, ಅದರಂತೆ ಕಾರ್ಯಕೈಗೊಳ್ಳುತ್ತಿದೆ ಎಂದರು.ತಾಲೂಕಿನಲ್ಲಿ ಸಾವಿರಾರು ಸದಸ್ಯರನ್ನು ಒಳಗೊಂಡ ಸಂಸ್ಥೆ ಜನರಲ್ಲಿ ಶೌಚಾಲಯ ಬಳಕೆ, ಪರಿಸರ ರಕ್ಷಣೆ, ಹೈನುಗಾರಿಕೆ, ಕೃಷಿ ಚಟುವಟಿಕೆ, ಬ್ಯಾಂಕಿಂಗ್ ವ್ಯವಹಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಮಹಿಳಾ ಸಬಲೀಕರಣ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯೇ ಸಂಸ್ಥೆಯ ಗುರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಾದ ವಿಠ್ಠಲ ಮಹೇಂದ್ರಕರ, ಸುಗಂಧವ್ವ ದಳವಿ, ಹಾಲಪ್ಪ ಬಕ್ಕಸದ, ಮಹಾಂತೇಶ ದಶಮನಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಯೋಜನಾಧಿಕಾರಿ ಪುನೀತ್ ತಳವಾರ, ಶಕುಂತಲಾ ಕಲ್ಯಾಣಿ, ರೇವತಿ ಕಲ್ಯಾಣಿ, ರೇಖಾ ಅಕ್ಕಿ, ನಿರ್ಮಲಾ ಗೌಳಿ, ಶಾಜೀದಾ ಹೆಸರೂರ, ಮಾಲಾ ಮುಧೋಳಕರ, ಪ್ರಭಾವತಿ ಸರ್ಜಾಪೂರ, ಶೇಖಮ್ಮ ಕಲ್ಲಪ್ಪನವರ, ದೀಪಾ ಬಕ್ಕಸದ, ಶೈಲಾ ಬಡಭೀಮಪ್ಪನವರ, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಮರಿಯಪ್ಪ, ಕೃಷಿ ಮೇಲ್ವಿಚಾರಕ ಭೀಮೇಶ, ಈರಣ್ಣ ಚಿಕ್ಕತೋಟದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.