ಎಲ್‌ಎಲ್‌ಬಿ ವಿದ್ಯಾರ್ಥಿಗಳು ಗ್ರಾಮೀಣ ಜನರಿಗೆ ಕಾನೂನು ಸಲಹೆ ನೀಡಿ

| Published : Nov 10 2024, 01:54 AM IST

ಎಲ್‌ಎಲ್‌ಬಿ ವಿದ್ಯಾರ್ಥಿಗಳು ಗ್ರಾಮೀಣ ಜನರಿಗೆ ಕಾನೂನು ಸಲಹೆ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ನೆರವು ದೊರೆಯಬೇಕು ಮತ್ತು ತಾರತಮ್ಯ ಹಾಗೂ ವಂಚನೆಗೆ ಒಳಗಾಗಬಾರದು ಎಂಬ ದೃಷ್ಠಿಯಿಂದ ಎಲ್ಲರೂ ಸಮಾನರು ಎಂದು ಪರಿಗಣಿಸಿ, ಅಗತ್ಯ ಸೌಲಭ್ಯವನ್ನು ಕಲ್ಪಿಸಿದೆ. ಪುಟ್ಟ ಮಕ್ಕಳಿಗೆ, ಶಿಕ್ಷಣವಿಲ್ಲದ ಜನರಿಗೆ ಕಾನೂನಿನ ಅರಿವು ಮೂಡಿಸಲು ಸಾಧ್ಯವಿಲ್ಲ, ಆದ್ದರಿಂದ ವಿದ್ಯಾರ್ಥಿಗಳಾದ ನಿಮಗೆ ಈ ವಿಷಯದಲ್ಲಿ ಅಗತ್ಯ ಅರಿವು ಮೂಡಿಸುವ ಕಾರ್ಯಕ್ರಮ ಉಪಯುಕ್ತವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿ ಮಠ್ ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ನೆರವು ದೊರೆಯಬೇಕು ಹಾಗೂ ಅರಿವು ಇರಬೇಕು ಎಂಬ ದೃಷ್ಠಿಯಿಂದ ಕಾನೂನು ಅರಿವಿನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಜನರಿಗೆ ಕಾನೂನು ವಿದ್ಯಾರ್ಥಿಗಳಾದ ನೀವುಗಳು ನೀಡುವ ಮಾರ್ಗದರ್ಶನ ಅಥವಾ ಅರಿವು ಅವರಲ್ಲಿ ಸಮಸ್ಯೆಗೆ ನಿವಾರಣೆಗೆ ಅಗತ್ಯ ಸಲಹೆ ಸಿಕ್ಕಿತು ಎಂಬ ತೃಪ್ತಿ ನಿಮ್ಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿ ಮಠ್ ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಕಾನೂನು ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಸಾಮಾನ್ಯರಿಗೆ ಉಚಿತ ಕಾನೂನು ನೆರವು ದೊರಕಿಸಿ ಕೊಡುವ ನಿಟ್ಟಿನಲ್ಲಿ ಅಗತ್ಯ ಸಲಹೆ ನೀಡಿದಾಗ ಮಾತ್ರ ಸಾಮಾನ್ಯ ಜನರಿಗೆ ಈ ಯೋಜನೆಯ ಸೌಲಭ್ಯ ದೊರೆಯಲು ಸಾಧ್ಯವೆಂದು ತಿಳಿಸಿ, ಕಾನೂನು ಅರಿವು ಸಂಬಂಧಿಸಿದ ವಿಷಯಗಳ ಕುರಿತಂತೆ ಸಲಹೆ ನೀಡಿದರು. ಸಿವಿಲ್ ನ್ಯಾಯಾಧೀಶರಾದ ಚೇತನಾ ಅವರು ಮಾತನಾಡಿ, ಭಾರತೀಯ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ನೆರವು ದೊರೆಯಬೇಕು ಮತ್ತು ತಾರತಮ್ಯ ಹಾಗೂ ವಂಚನೆಗೆ ಒಳಗಾಗಬಾರದು ಎಂಬ ದೃಷ್ಠಿಯಿಂದ ಎಲ್ಲರೂ ಸಮಾನರು ಎಂದು ಪರಿಗಣಿಸಿ, ಅಗತ್ಯ ಸೌಲಭ್ಯವನ್ನು ಕಲ್ಪಿಸಿದೆ. ಪುಟ್ಟ ಮಕ್ಕಳಿಗೆ, ಶಿಕ್ಷಣವಿಲ್ಲದ ಜನರಿಗೆ ಕಾನೂನಿನ ಅರಿವು ಮೂಡಿಸಲು ಸಾಧ್ಯವಿಲ್ಲ, ಆದ್ದರಿಂದ ವಿದ್ಯಾರ್ಥಿಗಳಾದ ನಿಮಗೆ ಈ ವಿಷಯದಲ್ಲಿ ಅಗತ್ಯ ಅರಿವು ಮೂಡಿಸುವ ಕಾರ್ಯಕ್ರಮ ಉಪಯುಕ್ತವಾಗಲಿದೆ ಎಂದರು.

ಮಾಹಿತಿ ಕೊರತೆ, ಹಣಕಾಸು, ಶೋಷಣೆ ಅಥವಾ ಹಲವಾರು ಸಮಸ್ಯೆಗಳಿಂದ ಕಾನೂನು ನೆರವಿನಿಂದ ವಂಚಿತರಾಗಬಹುದು. ಇಂತಹ ಜನರಿಗೆ ಸಲಹೆ ಅಥವಾ ಸೂಕ್ತ ತಿಳಿವಳಿಕೆ ನೀಡುವುದು ಅಗತ್ಯವಾಗಿದೆ ಎಂದರು. ಭ್ರೂಣ ಲಿಂಗ ಪತ್ತೆ ಅಥವಾ ಭ್ರೂಣ ಹತ್ಯೆ, ಬಾಲ ಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆ, ವರದಕ್ಷಿಣೆ, ಬಾಲ್ಯ ವಿವಾಹ ಹಾಗೂ ದೈಹಿಕ ಹಾಗೂ ಮಾನಸಿಕ ಶೋಷಣೆ ಕುರಿತು ಸವಿಸ್ತಾರವಾಗಿ ವಿವರಿಸಿ, ಕಾನೂನು ಸೇವೆಗಳ ಸಮಿತಿ ಅಡಿಯಲ್ಲಿ ಅಗತ್ಯ ನೆರವು ಪಡೆಯಬಹುದು ಎಂದರು.

ಜನತಾ ನ್ಯಾಯಾಲಯ ಅಥವಾ ಲೋಕ ಅದಾಲತ್‌ದಲ್ಲಿ ಆಸ್ತಿ ವಿವಾದ, ಪತಿ ಪತ್ನಿ ವಿಚ್ಛೇದನ, ಜೀವನಾಂಶ, ಅಪಘಾತ ವಿಮೆ ಹಾಗೂ ಕೆಲವು ವ್ಯಾಜ್ಯಗಳಿಗೆ ರಾಜಿ ಸಂಧಾನ ಮೂಲಕ ಸಮಸ್ಯೆ ಬಗೆಹರಿಸಿಕೊಂಡಲ್ಲಿ ಸಮಯದ ಉಳಿತಾಯ, ಕೋರ್ಟ್‌ ಶುಲ್ಕ ಉಳಿತಾಯ ಮತ್ತು ಇತರೆ ಪ್ರಯೋಜನವಿದೆ ಎಂದು ತಿಳಿಸಿ, ರಾಷ್ಟ್ರೀಯ ಕಾನೂನು ಸೇವಾ ಸಮಿತಿಯ ನೆರವು ಹಾಗೂ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು. ತಾ. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್‌ ಮಾತನಾಡಿ, ಸ್ವಾರ್ಥದನ್ನು ತ್ಯಜಿಸಿ, ಮೊದಲಿಗೆ ನಾವು ಆತ್ಮಾಭಿಮಾನ ಹಾಗೂ ಇತರರಿಗೆ ಒಳಿತನ್ನು ಬಯಸುವ ಮನಸ್ಥಿತಿ ಮತ್ತು ತಪ್ಪನ್ನು ಖಂಡಿಸುವ ಬೆಳೆಸಿಕೊಳ್ಳಬೇಕು. ಈ ರೀತಿಯ ಜೀವನ ರೂಪಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣದಲ್ಲಿ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಲು ಸಾಧ್ಯವೆಂದು ತಿಳಿಸಿದರು.ಉಪನ್ಯಾಸಕರಾದ ಶ್ರೀವತ್ಸ ಪ್ರಾರ್ಥಿಸಿದರು, ರೇಖಾ ಚೌಹಾಣ್ ಸ್ವಾಗತಿಸಿ, ವಂದಿಸಿದರು ಹಾಗೂ ಹರೀಶ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ಭಾಗ್ಯಲಕ್ಷ್ಮಿ ಎಚ್., ಉಪನ್ಯಾಸಕರಾದ ಜಯರಾಮ್, ಶ್ರೀಲಕ್ಷ್ಮಿ, ನ್ಯಾಯಾಲಯದ ನೌಕರ ಯಶವಂತ್, ಇತರರು ಇದ್ದರು.