ಮಾಲೀಕಯ್ಯ ಬೆಂಬಲಿಗರ ವಿರೋಧದ ನಡುವೆ ನಿತೀನ್‌ ಬಿಜೆಪಿ ಸೇರ್ಪಡೆ

| Published : Apr 11 2024, 12:45 AM IST

ಸಾರಾಂಶ

ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಹೋದರ ಮಾಲೀಕಯ್ಯ ಗುತ್ತೇದಾರ ಸೋಲಿಗೆ ಪ್ರಮುಖ ಕಾರಣವಾಗಿದ್ದ ನಿತೀನ್ ಗುತ್ತೇದಾರ ಹಿರಿಯ ಸಹೋದರ ಮಾಲೀಕಯ್ಯ ಬೆಂಬಲಿಗರ ವಿರೋಧದ ನಡುವೆಯೂ ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ಮತಕ್ಷೇತ್ರದ ವಿಧಾನಸಭೆ ಪರಾಜಿತ ಪಕ್ಷೇತರ ಅಭ್ಯರ್ಥಿ, ಮುಖಂಡ ನಿತೀನ್ ಗುತ್ತೇದಾರ ಅವರು ಹಲವು ರಾಜಕೀಯ ಬೆಳವಣಿಗೆಯ ನಡುವೆ ಕೊನೆಗೂ ಬಜೆಪಿ ಸೇರಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಹೋದರ ಮಾಲೀಕಯ್ಯ ಗುತ್ತೇದಾರ ಸೋಲಿಗೆ ಪ್ರಮುಖ ಕಾರಣವಾಗಿದ್ದ ನಿತೀನ್ ಗುತ್ತೇದಾರ ಹಿರಿಯ ಸಹೋದರ ಮಾಲೀಕಯ್ಯ ಬೆಂಬಲಿಗರ ವಿರೋಧದ ನಡುವೆಯೂ ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಲೋಕಸಭೆ ಚುನಾವಣೆಗಳು ಘೋಷಣೆಯಾದಾಗಿನಿಂದ ಅಫಜಲ್ಪುರ ಮತಕ್ಷೇತ್ರದಲ್ಲಿ ಹೆಚ್ಚು ಜನಬೆಂಬಲ ಹೊಂದಿರುವ ನಿತೀನ್ ಗುತ್ತೇದಾರ ಯಾವ ಪಕ್ಷದ ಪರವಾಗಿ ನಿಲ್ಲುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿದ್ದವು. ಕಾಂಗ್ರೆಸ್‌ ಪಕ್ಷಕ್ಕೆ ಬರುತ್ತಾರೆ, ಬಿಜೆಪಿಗೆ ಹೋಗುತ್ತಾರೆ ಎನ್ನುವ ಊಹಾಪೋಹಗಳು ಎದ್ದು ರಾಜಕೀಯ ಪಡಸಾಲೆಯಲ್ಲಿ ನಿತ್ಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ ಬಿಜೆಪಿ ರಾಜ್ಯ ಮಾಜಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಬೆಂಬಲಿಗರು ನಿತೀನ್ ಗುತ್ತೇದಾರ ಬಿಜೆಪಿಗೆ ಬರುವುದು ಬೇಡ, ಬರುವುದಾದರೆ ಮಾಲೀಕಯ್ಯ ನಾಯಕತ್ವ ಒಪ್ಪಿಕೊಂಡು ಬರಲಿ ಎಂದು ಪಟ್ಟು ಹಿಡಿದಿದ್ದರು.

ಕಾಂಗ್ರೆಸ್‌ ಕಾರ್ಯಕರ್ತರು ನಿತೀನ್ ಕಾಂಗ್ರೆಸ್‌ ಪಕ್ಷಕ್ಕೆ ಬಂದರೆ ಅನುಕೂಲವಾಗಲಿದೆ ಎಂದು ಲೆಕ್ಕಾಚಾರ ಹಾಕಿದ್ದರು. ಆದರೆ ಕಾಂಗ್ರೆಸ್‌ನ ಹಾಲಿ ಶಾಸಕ ಎಂ.ವೈ. ಪಾಟೀಲ್ ಅವರ ಪುತ್ರ ಅರುಣಕುಮಾರ ಪಾಟೀಲ್ ಅವರು ನಿತೀನ್ ಗುತ್ತೇದಾರ ಕಾಂಗ್ರೆಸ್ ಬರುವುದನ್ನು ತಡೆದರು ಎನ್ನುವ ವಾದವು ಇದೆ. ಈ ಎಲ್ಲಾ ಊಹಾಪೋಹಗಳಿಗೆ ಇಂದು ಅಂಕುಶ ಬಿದ್ದಿದ್ದು ಕೊನೆಗೂ ನಿತೀನ್ ಗುತ್ತೇದಾರ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಇದರಿಂದ ಅವರ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದು ತಾಲೂಕಿನಾದ್ಯಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಲ್ಲದೆ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ಈಗ ಮಾಲೀಕಯ್ಯ ಗುತ್ತೇದಾರ ಹಾಗೂ ಅವರ ಬೆಂಬಲಿಗರ ನಡೆ ಏನಾಗಿರಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ನಿತೀನ್ ಗುತ್ತೇದಾರ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಸಿ.ಟಿ ರವಿ, ಅರಗ ಜ್ಞಾನೇಂದ್ರ, ಪಿ. ರಾಜೀವ, ಛಲವಾದಿ ನಾರಾಯಣಸ್ವಾಮಿ, ಶಿವರಾಜ ಪಾಟೀಲ ರದ್ದೇವಾಡಗಿ, ಚಂದು ಪಾಟೀಲ, ವಿಶ್ವನಾಥ ರೇವೂರ, ಬಿ.ವೈ ಪಾಟೀಲ, ಕಲ್ಯಾಣರಾವ ಬಿರಾದಾರ, ಶಿವಪುತ್ರಪ್ಪ ಕರೂರ, ರಮೇಶ ಬಾಕೆ, ಗುರು ಸಾಲಿಮಠ ಸೇರಿದಂತೆ ಅನೇಕರು ಇದ್ದರು.