ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ಖಾಸಗಿ ಕಂಪನಿಗಳಿಗೆ ನೀಡುವ ಕೆಲಸಕ್ಕೆ ಸರ್ಕಾರ ತಡೆವೊಡ್ಡಬೇಕೆಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ಸಿರಿಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಸದ್ಧರ್ಮ ಸಿಂಹಾಸನಾರೋಹಣ ಮಾಡಿ ಶನಿವಾರ ತಡರಾತ್ರಿ ಆಶೀರ್ವಚನ ನೀಡಿದ ಶ್ರೀಗಳು ರಸ್ತೆ ನಿರ್ಮಾಣ ಮತ್ತು ರೇಲ್ವೆ ಮಾರ್ಗಗಳಂತಹ ಸಾರ್ವಜನಿಕ ಕೆಲಸಕ್ಕೆ ಈ ಕೆಲಸ ನಡೆದರೆ ಸರಿ ಎಂದರು.
ಸರ್ಕಾರ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ಖಾಸಗಿ ಕಂಪನಿಗಳಿಗೆ ನೀಡುತ್ತದೆ. ಕೆಲವರು ಉದ್ದೇಶವನ್ನು ಮರೆತು ಅದನ್ನು ಬೇರೆಯವರಿಗೆ ಮಾರಾಟ ಮಾಡಿರುವ ಹಲವು ನಿದರ್ಶನಗಳು ಇವೆ ಎಂದರು.ರೈತರ ಜಮೀನು ವಶಪಡಿಸಿಕೊಳ್ಳುವುದೇ ಆದರೆ ರೈತ ಮತ್ತು ಖಾಸಗಿ ಕಂಪನಿಗಳ ಮಧ್ಯೆ ಒಡಂಬಡಿಗೆ ಮಾಡಿಕೊಳ್ಳಬೇಕು. ರೈತರು ಜಮೀನಿನಲ್ಲಿ ಬೆಳೆಯುವುದಕ್ಕಿಂತ ಐದು ಹತ್ತು ಪಟ್ಟು ಹೆಚ್ಚು ಹಣವನ್ನು ಅವರಿಗೆ ನಿಯಮಿತವಾಗಿ ನೀಡಬೇಕು. ಅಲ್ಲದೆ ಭೂಮಿ ರೈತರ ಹೆಸರಿನಲ್ಲಿಯೇ ಇರಬೇಕು. ಇಂತಹ ಕಾಯ್ದೆಯನ್ನು ಸರ್ಕಾರ ತರಬೇಕು ಎಂದು ಆಗ್ರಹಿಸಿದರು.
ಕಳೆದ ೧೦ ವರ್ಷಗಳ ಅವಧಿಯಲ್ಲಿ ಕಂಪನಿಗಳಿಗೆ ಹಂಚಿಕೆಯಾಗಿರುವ ಭೂಮಿಯ ಬಳಕೆ ಎಷ್ಟಾಗಿದೆ? ಉಳಿದ ಭೂಮಿ ಏನಾಗಿದೆ ಎಂಬುದರ ಅಂಕಿಅಂಶಗಳನ್ನು ಸರ್ಕಾರ ನೀಡಬೇಕು. ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಈ ವಿಚಾರವನ್ನು ಮಂಡಿಸಿ ಸರ್ಕಾರದಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.ರೈತರ ಭೂಮಿಯನ್ನು ವಶಪಡಿಸಿಕೊಂಡು ಸಮುದಾಯವನ್ನು ಅತಂತ್ರಗೊಳಿಸುವಂತಹ ಪ್ರಯತ್ನಕ್ಕೆ ಮುಂದಾಗಬಾರದು. ಇಂತಹ ಕೆಲಸವು ಹಾವು ಒಡೆದು ಹದ್ದಿಗೆ ಹಾಕಿ ದಂತಾಗುತ್ತದೆ ಎಂದು ಹೇಳಿದ ಸ್ವಾಮೀಜಿ ಸಚಿವರು ಮತ್ತು ಸರ್ಕಾರದೊಡನೆ ಈ ವಿಚಾರದಲ್ಲಿ ಚರ್ಚೆ ಮಾಡುವುದಾಗಿಯೂ ಪ್ರಕಟಿಸಿದರು.
ಮುಂದುವರಿದು, ಜನರಲ್ಲಿ ಹಣಕಾಸಿನ ಶ್ರೀಮಂತಿಕೆ ಮಾತ್ರವಲ್ಲದೆ ನೈತಿಕ ಶ್ರೀಮಂತಿಕೆ, ಹೃದಯಶ್ರೀಮಂತಿಕೆ ಬೆಳೆಯಬೇಕು. ನೀತಿವಂತ ಬದುಕು ಸಾಗಿಸಲು ಮುಂದಾಗ ಬೇಕು ಎಂದು ಭಕ್ತರಿಗೆ ಕರೆ ನೀಡಿದರು.ವೀರ ಹುತಾತ್ಮ ಯೋಧ ಕ್ಯಾಪ್ಟನ್ ಎಂ.ಜಿ.ಪ್ರಾಂಜಲ್ ತಾಯಿ ಅನುರಾಧ ಮಾತನಾಡಿ, ದೇಶಕ್ಕೆ ಯೋಧರು ಸಲ್ಲಿಸುತ್ತಿರುವ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸೆ ಮಾಡಿದರು.
ಪ್ರಾಣದ ಹಂಗು ತೊರೆದು ಶತ್ರುಗಳೊಂದಿಗೆ ಹೋರಾಡಿ ದೇಶ ರಕ್ಷಿಸಿ ಹುತಾತ್ಮರಾದ ೬ ಕುಟುಂಬಗಳನ್ನು ಶ್ರೀಗಳು ಗೌರವಿಸಿ ತರಳಬಾಳು ಮಠದಿಂದ ಒಂದು ಲಕ್ಷ ರು.ಗಳ ಆರ್ಥಿಕ ನೆರವು ನೀಡಿದರು.ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಚಿಂತಕ ಕೆ. ಚಿದಾನಂದಗೌಡ, ಕರ್ನಾಟಕ ನೀರಾವರಿ ನಿಗಮದ ವಿಶ್ರಾಂತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಹಿರೇಮಗಳೂರು ಕಣ್ಣನ್, ಪ್ಯಾರಿಸ್‌ನ ಫಿಲಿಯೋಜಾ, ಎಚ್.ಆರ್. ಬಸವರಾಜಪ್ಪ, ಜಿ.ಎಸ್. ಅನಿತ್ ಕುಮಾರ್, ತುಮ್‌ಕೋಸ್‌ನ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಸಿರಿಗೆರೆಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಆಕರ್ಷಣೀಯ ಮಲ್ಲಕಂಬ ಪ್ರದರ್ಶನ ನೀಡಿದರು. ಕೊಟ್ಟೂರು ತರಳಬಾಳು ಹುಣ್ಣಿಮೆಯ ಲೆಕ್ಕಪತ್ರಗಳನ್ನು ಮೂಗಪ್ಪ ಮಂಡಿಸಿದರು.ಗುರುವಿಗೆ ನಮಸ್ಕರಿಸಿದರೆ ಗುಲಾಮಗಿರಿ ಅಲ್ಲ: ತರಳಬಾಳು ಶ್ರೀಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ವಿಚಾರದಲ್ಲಿ ಉಂಟಾಗಿರುವ ವಿಚಾರ ಪ್ರಸ್ತಾಪ ಮಾಡಿದ ಶ್ರೀಗಳು ಸರ್ಕಾರದ ಅನುಮೋದನೆ ಇಲ್ಲದೆ ಅಧಿಕಾರಿಗಳು ಇಂತಹ ಪ್ರಸ್ತಾವ ಮಾಡಲು ಅವಕಾಶ ಇಲ್ಲ. ಬಳಕೆಯಲ್ಲಿರುವ ವಾಕ್ಯದಲ್ಲಿ ಗುಲಾಮಗಿರಿಯ ವ್ಯಾಖ್ಯಾನ ಮಾಡುವ ಅಧಿಕಾರಿಗಳದ್ದು ಮೂರ್ಖತನದ ನಡೆ. ಐಎಎಸ್ ಅಧಿಕಾರಿಗಳು ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು. ಕೈ ಮುಗಿಯುವುದು, ಗುರುಗಳಿಗೆ ನಮಸ್ಕರಿಸುವುದು ಗುಲಾಮಗಿರಿ ಅಲ್ಲ, ಅದು ಭಾರತೀಯ ಸಂಸ್ಕೃತಿ ಎಂದು ಶ್ರೀಗಳು ವಿವರಿಸಿದರು.