ಸಾರಾಂಶ
ಶಿವಮೊಗ್ಗ: ಅಬ್ಬಲಗೆರೆ ಗ್ರಾಮದ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಕೆರೆ ಹೂಳು ತೆಗೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಕ್ರಮವಾಗಿ ಹೂಳು ಸಾಗಿಸಿರುವ ಕುರಿತು ಜಿಪಂನ ಕಾರ್ಯಪಾಲಕ ಎಂಜಿನಿಯರ್ ಅವರು ನಡೆಸಿದ ತನಿಖೆಯಲ್ಲಿ ಸಾಭೀತಾಗಿದೆ. ಇವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು.ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರತಿಕ್ರಿಯಿಸಿ, ಕೆರೆಯ ಜಾಗವನ್ನು ತಪಾಸಣೆ ನಡೆಸಲಾಗಿದೆ. ಅಕ್ರಮ ನಡೆದಿರುವ ವರದಿ ತಲುಪಿದೆ. ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜಾಯಿಸಿ ನೀಡಲು ಪ್ರಯತ್ನಿಸಿದರು. ಇದಕ್ಕೆ ಗರಂ ಆದ ಸಚಿವರು, ನಾನು ಸಚಿವನಾಗಿ ಒಂದೂವರೆ ವರ್ಷ ಕಳೆದಿದೆ. ಇಲ್ಲಿಯವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ ? ಮುಖ್ಯಮಂತ್ರಿಗಳು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ಶೀಘ್ರದಲ್ಲೇ ವರದಿ ನೀಡುವಂತೆ ತಾಕೀತು ಮಾಡಿದರು,ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರಿಗೆ ಲೋಕೋಪಯೋಗಿ ಇಲಾಖೆಯಿಂದ ವಸತಿ ಗೃಹವನ್ನು ನೀಡಲಾಗಿದೆ. ವಸತಿ ಗೃಹವನ್ನು 17 ಲಕ್ಷ ರು. ವೆಚ್ಚದಲ್ಲಿ ನವೀಕರಣ ಮಾಡಿದ್ದಾರೆ. ಆದರೆ, 2 ಕೋಟಿ ರು.ಗೂ ಹೆಚ್ಚು ಖರ್ಚಾಗಿದೆ. ಬೇರೆಯವರಿಗೂ ಹಾಗೆ ಅವಕಾಶ ಕೊಡ್ತೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಈ ಬಗ್ಗೆ ಅಧಿಕಾರಿಗಳು ತಪಾಸಣೆ ನಡೆಸಿ, ವರದಿ ನೀಡುವಂತೆ ಸೂಚನೆ ನೀಡಿದರು.
ಶಾಹೀ ಗಾರ್ಮೆಂಟ್ಸ್ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ ?ಇಲ್ಲಿನ ಶಾಹೀ ಗಾರ್ಮೆಂರ್ಟ್‌ನಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಜಿಲ್ಲಾಡಳಿತದ ಸೂಚನೆಯನ್ನು ನಿರ್ಲಕ್ಷಿಸಲಾಗಿದೆ. ರೈತರ ಜಮೀನು ಒತ್ತುವರಿಗೆ ಕೂಡಲೇ ಕ್ರಮ ಜರುಗಿಸಲಾಗುತ್ತದೆ. ಇದೇ ಕ್ರಮ ಶಾಹೀ ಗಾರ್ಮೆಂಟ್ಸ್ ವಿರುದ್ಧ ಏಕೆ ಇಲ್ಲ. ವರದಿ ಬಂದರೂ ಯಾಕೆ ಕ್ರಮ ಕೊಂಡಿಲ್ಲ, ಏನು ಕಣ್ಮುಚ್ಚಿಕೊಂಡಿದ್ದೀರಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಪರಿಸರ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ಕಾರ್ಖಾನೆಯ ಪಕ್ಕದಲ್ಲಿರುವ ಕೆರೆ ಕಲುಷಿತಗೊಳ್ಳದಂತೆ ಎಸ್‌ಇಟಿಪಿ ಹಾಕಲು ಕ್ರಮ ಕೈಗೊಳ್ಳಲಾಗಿದೆ. ನಾನು ಅಧಿಕಾರಿಯಾಗಿ ಬಂದು 6 ತಿಂಗಳಾಗಿದೆ ಎಂದು ಸಮಾಯಿಷಿ ಕೊಡಲು ಮುಂದಾದರು.
ಇದಕ್ಕೆ ಗರಂ ಆದ ಸಚಿವ ಮಧುಬಂಗಾರಪ್ಪ, ನಾನು ಸಚಿವನಾಗಿ ಬಂದು ಒಂದೂವರೆ ವರ್ಷ ಆಗಿದೆ. ನಾನು ಸಂಬಂಧವಿಲ್ಲವೆಂದು ಕೈತೊಳೆದುಕೊಳ್ಳಬಹುದಾ ? ಇಲ್ಲಿ 15,000 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ, ಕಾರ್ಖಾನೆಯನ್ನು ಮುಚ್ಚಲು ಆದೇಶಿಸುವುದಿಲ್ಲ. ಆದರೆ, ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಖಾರವಾಗಿ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಇದ್ದರು.
ನೂತನ ಜಿಲ್ಲಾಡಳಿತ ಭವನ ನಿರ್ಮಿಸಲು ಯೋಜನೆ ಸಿದ್ಧಶಿವಮೊಗ್ಗ: ನಗರದಲ್ಲಿ ಹೊಸ ಜಿಲ್ಲಾಡಳಿತ ಭವನ ನಿರ್ಮಿಸಲು ಸರ್ಕಾರದಿಂದ ಯೋಜನೆ ಸಿದ್ಧಗೊಂಡಿದೆ. ಇಲ್ಲಿನ ಸಾಗರ ರಸ್ತೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿ ಹಿಂಭಾಗ ಭವನ ನಿರ್ಮಿಸಲು ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳಿ ಎಂದು ಸಚಿವ ಮಧುಬಂಗಾರಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು.ಇಲ್ಲಿ ಹೊಸ ಜಿಲ್ಲಾಡಳಿತ ಭವನ ನಿರ್ಮಾಣದಿಂದ ಅನೇಕ ಬದಲಾವಣೆ ಆಗಲಿದೆ. ಜಿಲ್ಲಾ ಪಂಚಾಯಿತಿ ಕಾರ್ಯಾಲಯ ಸೇರಿದಂತೆ, ಸರ್ಕಾರದಡಿಯ ಅನೇಕ ಇಲಾಖೆಗಳು ನೂತನ ಭವನಕ್ಕೆ ಸ್ಥಳಾಂತರಗೊಳ್ಳಲಿವೆ. ಇದರಿಂದ, ಜನಸಾಮಾನ್ಯರಿಗೆ ನೆರವಾಗಲಿದೆ ಎಂದರು.
ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳ ಸಂಗ್ರಹ, ಸಂಸ್ಕರಣೆ ಹಾಗೂ ಉಪ ಉತ್ಪನ್ನಗಳ ತಯಾರಿಕೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಫುಡ್‌ಪಾರ್ಕ್ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಘೋಷಿಸಿದ್ದಾರೆ. ಆದರೂ ಫುಡ್‌ಪಾರ್ಕ್ ನಿರ್ಮಾಣವಾಗಿಲ್ಲ. ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವಾ ಎಂದು ಗುಡುಗಿದರು.ಫುಡ್ ಪಾರ್ಕ್ ವಿಚಾರದಲ್ಲಿ ವಿಳಂಬ ಸಲ್ಲದು. ಈಗ ಬಿಡುಗಡೆಗೊಂಡ ಅನುದಾನ ಬಳಕೆಯಾಗದಿದ್ದರೆ, ಪುನಃ ಹಣ ಬಿಡುಗಡೆಗೊಳ್ಳುವುದಿಲ್ಲ ಎಂದು ಎಚ್ಚರಿಸಿದರು.ಶಿವಮೊಗ್ಗದ ಅಲ್ಲಮ ಪ್ರಭು ಮೈದಾನ (ಫ್ರೀಡಂ ಪಾರ್ಕ್) ಅಭಿವೃದ್ಧಿಗೆ ಮತ್ತು ಶಿಕಾರಿಪುರದ ಬಳ್ಳಿಗಾವಿಯಲ್ಲಿ ಅಲ್ಲಮಪ್ರಭು ಜನ್ಮ ಸ್ಥಳ ಅಭಿವೃದ್ಧಿಗೆ ಅನುದಾನಕ್ಕೆ ಜನವರಿ ಒಳಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಪ್ರಸ್ತುತ ಫ್ರೀಡಂ ಪಾರ್ಕ್‌ಗೆ ೫ ಕೋಟಿ ಹಣ ಬಿಡುಗಡೆಯಾಗಿದೆ. ಅದೇ ರೀತಿ, ಸೊರಬ ತಾಲೂಕಿನ ಚಂದ್ರಗುತ್ತಿ ದೇವಸ್ಥಾನ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಅನುಮತಿ ಬೇಕಿತ್ತು. ಆದರೆ, ಪ್ರಸ್ತುತ ಈ ಸಮಸ್ಯೆ ಕೂಡ ನಿವಾರಣೆಗೊಂಡಿದೆ. ಮುಂದಿನ ದಿನದಲ್ಲಿ ಇಲ್ಲಿ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.ಜನವರಿಯಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಮಸ್ಯೆಯಿಂದ ರಾತ್ರಿ ವೇಳೆ ವಿಮಾನ ಹಾರಾಟಕ್ಕೆ ತೊಡಕಾಗಿತ್ತು. ಇಲ್ಲಿ 2025ರ ಜನವರಿಯಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದರು.ಶಿರಾಳಕೊಪ್ಪ, ಆನವಟ್ಟಿ ಮತ್ತು ಸೊರಬ ವ್ಯಾಪ್ತಿಗೆ ಕುಡಿಯುವ ನೀರು ಒದಗಿಸಲು 660 ಕೋಟಿ ರು. ಹಣ ಮೀಸಲಿಡಲಾಗಿದೆ. ಕಾಮಗಾರಿ ಆರಂಭಗೊಳ್ಳಲಿದೆ ಎಂದರು.