ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಮಹಜರ್ ಪ್ರಕ್ರಿಯೆಯಲ್ಲಿ ಉಂಟಾದ ನ್ಯೂನ್ಯತೆಯ ಸ್ಟಷ್ಟೀಕರಣಕ್ಕೆ ಜಿಲ್ಲಾಧಿಕಾರಿಯಿಂದ ಉತ್ತರ ಬಂದಿಲ್ಲ. ಹಾಗಾಗಿ ಶೀಘ್ರದಲ್ಲಿ ನ್ಯೂನ್ಯತೆ ಮಹಜರ್ ಸರಿಪಡಿಸಲು ಹೋರಾಟಗಾರರ ವೇದಿಕೆಯು ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಮಹಜರ್ ಪ್ರಕ್ರಿಯೆಯಲ್ಲಿ ಉಂಟಾದ ನ್ಯೂನ್ಯತೆಯ ಸ್ಟಷ್ಟೀಕರಣಕ್ಕೆ ಜಿಲ್ಲಾಧಿಕಾರಿಯಿಂದ ಉತ್ತರ ಬಂದಿಲ್ಲ. ಹಾಗಾಗಿ ಶೀಘ್ರದಲ್ಲಿ ನ್ಯೂನ್ಯತೆ ಮಹಜರ್ ಸರಿಪಡಿಸಲು ಹೋರಾಟಗಾರರ ವೇದಿಕೆಯು ಆಗ್ರಹಿಸಿದೆ.ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ಮಹಜರ್ ಪ್ರಕ್ರಿಯೆ ಜರುಗುತ್ತಿರುವುದಕ್ಕೆ ಜಿಲ್ಲಾಧಿಕಾರಿಗೆ ಪತ್ರ ನೀಡಿ ೩ ತಿಂಗಳಾದರೂ ಉತ್ತರಬಾರದ ಹಿನ್ನೆಲೆ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಿದ್ದಾಪುರ ತಹಶೀಲ್ದಾರ ಎಂ.ಆರ್. ಕುಲಕರ್ಣಿಯವರೊಂದಿಗೆ ನಡೆಸಿದ ಸೌಹಾರ್ದಯುತ ಚರ್ಚೆಯ ಸಂದರ್ಭದಲ್ಲಿ ನ್ಯೂನ್ಯತೆಯನ್ನು ಸರಿದೂಗಿಸಿ ಮಹಜರ್ ಪ್ರಕ್ರಿಯೆ ಮುಂದುವರೆಸಬೇಕೆಂದು ಜಿಲ್ಲಾಡಳಿತಕ್ಕೆ ಹೋರಾಟದ ಪ್ರಮುಖರು ಆಗ್ರಹಿಸಿದರು.
ಮಹಜರ್ ಅಧಿಕಾರಿ ತಂಡವು ಕೆಲವು ಕಡೆ ಅರಣ್ಯವಾಸಿ ಸಹಿ ಮಾತ್ರ ತೆಗೆದುಕೊಂಡು, ಮಾಹಿತಿ ತುಂಬದ, ಅಧಿಕಾರಿ ವರ್ಗದವರು ಸಹಿ ಮಾಡದ ಮಹಜರ್ ಪ್ರತಿ ಒಯ್ಯುತ್ತಿರುವುದು, ಮಹಜರ್ ಸಂದರ್ಭದಲ್ಲಿ ಅವಶ್ಯ ಅಧಿಕಾರಗಳು ಉಪಸ್ಥಿತರಿರುವುದಿಲ್ಲದಿರುವುದು, ಸಾಗುವಳಿ ಮತ್ತು ವಾಸ್ತವ್ಯಕ್ಕೆ ಸಂಬಂಧಿಸಿದ ಅರಣ್ಯವಾಸಿ ಮತ್ತು ಗ್ರಾಮದಲ್ಲಿ ಜನವಸತಿ ಇರುವ ಕುರಿತು ಸಾಂರ್ಭಿಕ ದಾಖಲೆಗಳನ್ನ ಸಂಗ್ರಹಿಸದೇ ಇರುವುದು, ಈ ನ್ಯೂನ್ಯತೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ್ಯೂ ಉತ್ತರಿಸದ ಕುರಿತು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭ ನೋಡಲ್ ಅಧಿಕಾರಿ ಕೇಶವ ಮೂರ್ತಿ ಹಿಮ್ಮಡಿ, ಶಿವರಾಯಪ್ಪ ಉಪಸ್ಥಿತರಿದ್ದರು. ಹೋರಾಟಗಾರರಾದ ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಹರಿಹರ ನಾಯ್ಕ ಓಂಕಾರ ಹೆಗ್ಗರಣೆ, ಸೀತಾರಾಮ ನಾಯ್ಕ ಹುಕ್ಕಳಿ, ಕೆ.ಟಿ. ನಾಯ್ಕ ಹೆಗ್ಗೇರಿ, ಮಂಜುನಾಥ ಮಡಿವಾಳ ಕಿಲಾರ, ಬಿ.ಡಿ. ನಾಯ್ಕ ಕುರಗೆತೋಟ, ಅಬ್ದುಲ್ ಸುಭಾನ ಅರೆಂದೂರು, ನಾರಾಯಣ ನಾಯ್ಕ ಗಾಳಮಾಂವ, ಸುಧಾಕರ್ ಮಡಿವಾಳ ಬಿಳಗಿ, ರಾಮಚಂದ್ರ ನಾಯ್ಕ ಬೇಡ್ಕಣಿ, ಎಂ.ಟಿ. ಗೌಡ ಹೆಗ್ಗರಣಿ, ಆರ್.ಟಿ. ನಾಯ್ಕ ಅರಳಿಮಕ್ಕಿ, ಶ್ರೀಧರ ಹೆಗಡೆ ಕೆರೆಮನೆ, ಚಂದ್ರಶೇಖರ ಕೊಡಿಯಾ ಅಳಗೋಡ, ಹಾಜಿರಾ ಬೇಗಂ ಕಾನಗೋಡ, ಜಗದೀಶ್ ನಾಯ್ಕ ಶಿರಳಗಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.