ರಾಮನಾಥಪುರ ಬಸ್‌ ನಿಲ್ದಾಣಕ್ಕೆ ಮೂಲಭೂತ ಸೌಲಭ್ಯ ಮರೀಚಿಕೆ

| Published : Dec 31 2024, 01:02 AM IST

ರಾಮನಾಥಪುರ ಬಸ್‌ ನಿಲ್ದಾಣಕ್ಕೆ ಮೂಲಭೂತ ಸೌಲಭ್ಯ ಮರೀಚಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಕಲಗೂಡು ತಾಲೂಕಿನ ಅವಳಿ ಪಟ್ಟಣಗಳಾದ ಕೊಣನೂರು ಮತ್ತು ರಾಮನಾಥಪುರದಲ್ಲಿ ಸುಸಜ್ಜಿತವಾದ ಸಾರಿಗೆ ಬಸ್ ನಿಲ್ದಾಣದ ಕಟ್ಟಡಗಳಿದ್ದರೂ ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತಗೊಂಡಿವೆ. ಬಸ್ ನಿಲ್ದಾಣದಿಂದ 300 ಮೀಟರ್‌ ದೂರದಲ್ಲಿ ಬಸ್ ಘಟಕ ಇದೆ. ಜಾಗದ ಕೊರತೆಯಿಂದ ಇರುವ ಜಾಗವನ್ನು ಅಭಿವೃದ್ಧಿಗೊಳಿಸಲಾಗಿದ್ದರೂ ಕೂಡ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ, ರಕ್ಷಣಾ ವ್ಯವಸ್ಥೆ, ಸಿಸಿ ಕ್ಯಾಮೆರಾ, ಕಾಂಪೌಂಡ್, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ನಿಲ್ದಾಣ ಸುತ್ತಾ ಕಾಂಪೌಂಡ್ ನಿರ್ಮಿಸಿಲ್ಲ. ಇಲ್ಲಿಯೂ ಕೂಡ ಸೆಕ್ಯೂರಿಟಿ, ಸಿಸಿ ಕ್ಯಾಮೆರಾ ಇಲ್ಲ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಅವಳಿ ಪಟ್ಟಣಗಳಾದ ಕೊಣನೂರು ಮತ್ತು ರಾಮನಾಥಪುರದಲ್ಲಿ ಸುಸಜ್ಜಿತವಾದ ಸಾರಿಗೆ ಬಸ್ ನಿಲ್ದಾಣದ ಕಟ್ಟಡಗಳಿದ್ದರೂ ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತಗೊಂಡಿವೆ.

ತಾಲೂಕಿನ ಪ್ರಮುಖ ಪ್ರವಾಸಿತಾಣ ಮತ್ತು ತಂಬಾಕು ವಾಣಿಜ್ಯೋದ್ಯಮವನ್ನು ರಾಮನಾಥಪುರ ಪಟ್ಟಣ ಹೊಂದಿದೆ. ಬಸ್ ಡಿಪೋ ಕೂಡ ಇದೆ. ನಿತ್ಯವೂ 250ಕ್ಕೂ ಹೆಚ್ಚು ಸಾರಿಗೆ ಬಸ್‌ಗಳು ಬಂದುಹೋಗುತ್ತವೆ. ಬಸ್‌ಗಳ ಸಂಖ್ಯೆಗೆ ಅನುಗುಣವಾಗಿ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಏಕಕಾಲದಲ್ಲಿ 5ರಿಂದ 7 ಬಸ್‌ಗಳು ನಿಲುಗಡೆ ಮಾಡಬಹುದಾಗಿದೆ. ಈ ಹಾಸನ, ಮೈಸೂರು, ಪಿರಿಯಾಪಟ್ಟಣ, ಸಾಲಿಗ್ರಾಮ, ಬೆಂಗಳೂರು, ಮಡಿಕೇರಿ, ಸೋಮವಾರಪೇಟೆ, ಹುಣಸೂರು ಸೇರಿದಂತೆ ಇತರೆ ಪಟ್ಟಣಗಳು, ಗ್ರಾಮಗಳಿಗೆ ಬಸ್ ಸಂಚರಿಸುತ್ತಿವೆ. ಬಸ್ ನಿಲ್ದಾಣದಿಂದ 300 ಮೀಟರ್‌ ದೂರದಲ್ಲಿ ಬಸ್ ಘಟಕ ಇದೆ. ಜಾಗದ ಕೊರತೆಯಿಂದ ಇರುವ ಜಾಗವನ್ನು ಅಭಿವೃದ್ಧಿಗೊಳಿಸಲಾಗಿದ್ದರೂ ಕೂಡ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ, ರಕ್ಷಣಾ ವ್ಯವಸ್ಥೆ, ಸಿಸಿ ಕ್ಯಾಮೆರಾ, ಕಾಂಪೌಂಡ್, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ.

ಸ್ವಚ್ಛತೆ ಮರಿಚೀಕೆ: ರಾಮನಾಥಪುರ ಹೋಬಳಿ ಕೇಂದ್ರ ಕೂಡ ಹೌದು. ಬಸ್ ನಿಲ್ದಾಣದಿಂದ 100 ಮೀಟರ್‌ ಅಂತರದಲ್ಲಿ ಗ್ರಾಪಂ ಕಚೇರಿ, ನಾಡ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಲಕಿಯರ ಪದವಿಪೂರ್ವ ಕಾಲೇಜು, ಇತರೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಬಸ್‌ಗಳು ಕೂಡ ರಾಮನಾಥಪುರಕ್ಕೆ ಬಂದೇ ಹೋಗಬೇಕಿರುವ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಅಧಿಕ. ಈ ಸಲುವಾಗಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ನಿಲ್ದಾಣ ಮುಂಭಾಗ ನೂತನ ಕೇಶಿಪ್ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿಗೊಂಡಿದ್ದು, ಸೂಕ್ತ ಚರಂಡಿ ನಿರ್ಮಿಸಿದೇ ಇರುವ ಪರಿಣಾಮ ಮಲೀನ ನೀರು ಮುಂದೆ ಹೋಗಲು ಸಾಧ್ಯವಾಗದೇ ನಿಂತಲ್ಲಿಯೇ ನಿಂತು ದುರ್ವಾಸನೆ ಬೀರುತ್ತಿದೆ. ಒಂದು ಕಡೆ ಕಾಂಪೌಂಡ್ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದರಿಂದ ಅನಗತ್ಯ ತ್ಯಾಜ್ಯಗಳನ್ನು ಹಾಕುತ್ತಿರುವುದು ಅಶುಚಿತ್ವಕ್ಕೆ ಕಾರಣವಾಗುತ್ತಿದೆ.

ಕೊಣನೂರು ಬಸ್ ನಿಲ್ದಾಣ ಸಮಸ್ಯೆಗಳ ಆಗರ: ತಾಲೂಕಿನ ಮತ್ತೊಂದು ಪಟ್ಟಣ ಕೊಣನೂರು. ಇಲ್ಲಿನ ಸಮೀಪದಲ್ಲಿಯೇ ಕಾವೇರಿ ನದಿ ಹರಿಯುತ್ತಿದೆ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಬಸ್ ನಿಲ್ದಾಣದಿಂದ ಅತೀ ಸಮೀಪದಲ್ಲಿ ಇದೆ. ಇಲ್ಲಿನ ನಿಲ್ದಾಣದ ನೆಲ ಹಾಸಿಗೆಗೆ ಸಂಪೂರ್ಣವಾಗಿ ಕಾಂಕ್ರಿಟ್ ಹಾಕಲಾಗಿದೆ. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಮಲ್ಲಿಪಟ್ಟಣ, ಕೊಡ್ಲಿಪೇಟೆ ಹಾಗೂ ಇತರೆ ಗ್ರಾಮಗಳಿಗೆ ನಿತ್ಯವೂ 200ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಏಕ ಕಾಲದಲ್ಲಿ 15ಕ್ಕೂ ಅಧಿಕ ಬಸ್‌ಗಳು ನಿಲ್ದಾಣದಲ್ಲಿ ನಿಲ್ಲಬಹುದಾಗಿದೆ. ನಿಲ್ದಾಣ ಸುತ್ತಾ ಕಾಂಪೌಂಡ್ ನಿರ್ಮಿಸಿಲ್ಲ. ಇಲ್ಲಿಯೂ ಕೂಡ ಸೆಕ್ಯೂರಿಟಿ, ಸಿಸಿ ಕ್ಯಾಮೆರಾ ಇಲ್ಲ.

ಕೊಣನೂರು ಬಸ್ ನಿಲ್ದಾಣ ಮುಂಭಾಗದಲ್ಲಿ ವಿಶಾಲವಾದ ಜಾಗವಿದ್ದು, ಇಂಟರ್‌ಲಾಕ್ ಅಳವಡಿಸಲಾಗಿದೆ. ಕಾಂಪೌಂಡ್ ವ್ಯವಸ್ಥೆ ಇಲ್ಲದ ಪರಿಣಾಮ ನೇರವಾಗಿ ಖಾಸಗಿ ವಾಹನಗಳು ನಿಲ್ದಾಣ ಪ್ರವೇಶಿಸಿ ಪಾರ್ಕಿಂಗ್ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಇದನ್ನು ಸಂಚಾರ ನಿಯಂತ್ರಕರು ಪ್ರಶ್ನಿಸಿದರೇ ವಾಹನ ಸವಾರರು ಉಡಾಫೆಯಿಂದ ನಡೆದುಕೊಳ್ಳುವುದು ಸರ್ವೆ ಸಾಮಾನ್ಯವಾಗಿದೆ.

ಹಳೆಯದಾದ ಶೌಚಾಲಯ ಕಟ್ಟಡ : ಕೊಣನೂರಿನಲ್ಲಿ ಮೊದಲ ಬಾರಿಗೆ ಬಸ್ ನಿಲ್ದಾಣ ನಿರ್ಮಿಸಿದ ಸಂದರ್ಭದಲ್ಲಿ ನಿರ್ಮಿಸಿರುವ ಹಳೆಯ ಶೌಚಾಲಯ ಕಟ್ಟಡವಿದೆ. ಇದು ಅವಸಾನದ ಹಂಚಿನಲ್ಲಿದೆ. ಮಳೆಗಾಲದಲ್ಲಿ ಸೋರುತ್ತದೆ. ಹಳೆಯ ನಿಲ್ದಾಣವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ ವೇಳೆ ನೂತನವಾಗಿ ಶೌಚಾಲಯ ಕಟ್ಟಡ ನಿರ್ಮಿಸಿಲ್ಲ. ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಪ್ರಯಾಣಿಕರು ದುರ್ನಾತ ಬೀರುತ್ತಿದ್ದರೂ ಕೂಡ ಸಂಕಷ್ಟದಲ್ಲಿ ಬಳಕೆ ಮಾಡಿಕೊಳ್ಳುತಿದ್ದಾರೆ.

ಕುಡಿಯಲು ಶುದ್ಧನೀರಿಲ್ಲ: ನೂತನವಾಗಿ ಬಸ್ ನಿಲ್ದಾಣದ ಕಾಮಗಾರಿ ಅಭಿವೃದ್ಧಿಗೊಂಡ ಸಂದರ್ಭದಲ್ಲಿ ವಾಟರ್‌ಲೈಫ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನೀರಿನ ಶುದ್ಧೀಕರಣ ಘಟವನ್ನು ನಿರ್ಮಿಸಿ ಚಾಲನೆ ನೀಡಲಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಈ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸೌಲಭ್ಯವಿಲ್ಲ. ಇದರಿಂದ ಖಾಸಗಿ ಅಂಗಡಿಗಳಿಗೆ ತೆರಳಿ ಹಣತೆತ್ತು ಬಾಟಲ್ ನೀರನ್ನು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಲ್ದಾಣದಲ್ಲಿನ ಹೋಟೆಲ್‌ನವರು ಕೊಳವೆ ಬಾವಿಯ ನೀರನ್ನು ಬಳಕೆ ಮಾಡುತಿದ್ದಾರೆ.

*ಹೇಳಿಕೆ-1

ರಾಮನಾಥಪುರ ಬಸ್ ಘಟಕದಿಂದ ಸುಮಾರು 80 ರೂಟ್‌ಗಳಿಗೆ ಬಸ್‌ಗಳು ಸಂಚರಿಸುತ್ತಿವೆ. ಗ್ರಾಮೀಣ ಭಾಗದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಎದುರಾಗದಂತೆ ಗ್ರಾಮೀಣ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಮನಾಥಪುರ ಮತ್ತು ಕೊಣನೂರು ಬಸ್ ನಿಲ್ದಾಣಗಳಿಗೆ ಕಾಂಪೌಂಡ್ ಕಾಮಗಾರಿ ಬಾಕಿ ಇದೆ. ಸಿಸಿ ಕ್ಯಾಮೆರಾ, ಕುಡಿಯುವ ನೀರು ಅಳವಡಿಕೆಗೆ ಮೇಲಧಿಕಾರಿ ಗಮನಕ್ಕೆ ತರಲಾಗಿದೆ.

- ಮಹೇಂದ್ರ, ಡಿಪೋ ವ್ಯವಸ್ಥಾಪಕ, ರಾಮನಾಥಪುರ ಘಟಕ. (30ಎಚ್ಎಸ್ಎನ್9ಬಿ)

*ಹೇಳಿಕೆ-2

ರಾಮನಾಥಪುರದಲ್ಲಿನ ಬಸ್ ನಿಲ್ದಾಣಕ್ಕೆ ಶುದ್ಧನೀರು ಸರಬರಾಜು ವ್ಯವಸ್ಥೆ ಇಲ್ಲ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ನಿಲ್ದಾಣ ಚಿಕ್ಕದಾಗಿರುವ ಪರಿಣಾಮ ಸಿಸಿ ಕ್ಯಾಮೆರಾ, ಸೆಕ್ಯೂರಿಟಿ ವ್ಯವಸ್ಥೆ ಒದಗಿಸಬೇಕಿದೆ.

- ಮುಗಳೂರು ಕೃಷ್ಣೇಗೌಡ, ರೈತ ಸಂಘದ ಮುಖಂಡ (30ಎಚ್ಎಸ್ಎನ್9ಸಿ)