ಕುಣಿಕೇರಿ ತಾಂಡಾ ಕ್ಯಾನ್ಸರಮಯವಾಗಿದೆ: ಹೈಸ್ಕೂಲ್ ವಿದ್ಯಾರ್ಥಿನಿ ಕಣ್ಣೀರು

ಕೊಪ್ಪಳ: ನಗರಸಭೆ ಮುಂದೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ೩೮ ದಿನಗಳಿಂದ ನಡೆಯುತ್ತಿರುವ ಬಲ್ದೋಟ್‌ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ, ಅಲ್ಟ್ರಾಟೆಕ್ ಸಿಮೆಂಟ್ ಮುಂತಾದ ಕಾರ್ಖಾನೆಗಳ ವಿಸ್ತರಣೆ, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆ ಸೀಜ್ ಮಾಡಬೇಕು ಎಂಬ ಹೋರಾಟ ಬೆಂಬಲಿಸಿ ಆರ್ಯ ವೈಶ್ಯ ಸಮಾಜ ಸಂಘಟನೆಯ ಉಪಾಧ್ಯಕ್ಷ ನಾರಾಯಣ ಕುರುಗೋಡ ಹೇಳಿದರು.

ಬಲ್ಡೋಟಾ ವಿರುದ್ಧದ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ವ್ಯಾಪಾರದಲ್ಲಿ ತಲ್ಲೀನರಾದವರು. ನಮಗೆ ಗೊತ್ತಿಲ್ಲದೇನೆ ಏನೆಲ್ಲ ವಿದ್ಯಮಾನಗಳು ಬೆಳೆದು ನಮ್ಮ ಮೇಲೆ ಮತ್ತು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿವೆ. ಈ ಕಾರ್ಖಾನೆಗಳು ಜನರ ಆರೋಗ್ಯ ಕಸಿದಾಗಲೂ ಎಚ್ಚರವಾಗಲಿಲ್ಲ, ಈಗ ದುಡಿದು ಗಳಿಸಿದ್ದನ್ನು ತಿನ್ನಲಾಗದಿದ್ದರೆ, ಮುಂದಿನ ಪೀಳಿಗೆ ಆರೋಗ್ಯದಿಂದ ಇರಲು ಸಾಧ್ಯವಾಗದಿದ್ದರೆ ಏನು ಗಳಿಸಿ ಏನು ಪ್ರಯೋಜನ. ಈ ಹೋರಾಟ ಭವಿಷ್ಯದ ಕಾಳಜಿಗಾಗಿ ಹುಟ್ಟಿಕೊಂಡಿದೆ. ಇದರ ದಿಟ್ಟ ನಾಯಕತ್ವ ಈ ಹಿಂದೆ ಜಿಲ್ಲಾ ಹೋರಾಟ ಮಾಡುವಾಗಲೂ ಗಟ್ಟಿಯಾಗಿ ನಿಂತು ಜಿಲ್ಲೆ ಮಾಡಿಕೊಂಡಿತು. ಎಲ್ಲಿಯವರೆಗೆ ಮಾಲಿನ್ಯದ ಅಪಾಯ ತಪ್ಪುವುದಿಲ್ಲವೋ ಅಲ್ಲಿವರೆಗೆ ಹೋರಾಟ ನಡೆಯುತ್ತದೆ. ಇದಕ್ಕೆ ಬಾಧಿತರಾಗುವ ಎಲ್ಲರೂ ಕೈಜೋಡಿಸಬೇಕಿದೆ. ಸರ್ಕಾರದ ಮುಂದೆ ಗಂಭೀರವಾಗಿ ಪ್ರತಿಪಾದಿಸಿ ವಿಸ್ತರಣೆ, ಹೊಸ ಸ್ಥಾಪನೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಡ ತರಬೇಕಿದೆ. ತಕ್ಷಣದಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ಹಂತದ ಯಾವುದೇ ತೀರ್ಮಾನದ ಹೋರಾಟದಲ್ಲಿ ನಾವು ಸಕ್ರಿಯವಾಗಿ ಪಾಲ್ಗೊಳ್ಳಲು ನಮ್ಮ ಸಂಸ್ಥೆಗಳಲ್ಲಿ ತೀರ್ಮಾನಿಸಿದ್ದೇವೆ ಎಂದರು.

ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ ಮಾತನಾಡಿ, ಈ ಹೋರಾಟ ಎಲ್ಲರಿಗೂ,ಎಲ್ಲ ಸಮಾಜದ ಜನರಿಗೂ, ಎಲ್ಲ ರಾಜಕೀಯ ಪಕ್ಷ, ಎಲ್ಲ ಸಂಘಟನೆಗಳಿಗೂ ಸಂಬಂಧಿಸಿದ್ದಾಗಿದೆ. ಪ್ರತಿಯೊಬ್ಬ ನಾಗರಿಕರು, ಜನಸಾಮಾನ್ಯರು ಇದರಲ್ಲಿ ಭಾಗಿಯಾಗುವ ಸಂದರ್ಭ ಬಂದಿದೆ. ಈಗ ಜಾಗೃತಿ ಆದರೇನೆ ನಮಗೆ ನ್ಯಾಯ ಖಚಿತವಾಗುತ್ತದೆ. ಎಚ್ಚರಗೊಳ್ಳಿ ಎಂದರು.

ಮೂರನೇ ತರಗತಿಯ ಹರ್ಷರಾಜ್ ಎಂ. ಕಟ್ಟಿಮನಿ ಎನ್ನುವ ಬಾಲಕ ಬಾಧಿತ ಹಳ್ಳಿಗಳ ಪ್ರದೇಶದಲ್ಲಿ ಓಡಾಟ ಮಾಡಿ ಬಂದು ಹಾಳಾದ ವಾತಾವರಣದ ಬಗ್ಗೆ ಕನಿಕರದಿಂದ ಪರಿಸರ ಹಾನಿಯಿಂದ ಜಾನುವಾರು, ಪಕ್ಷಿಗಳು ಸತ್ತರೆ ಹೇಗೆ? ಮನುಷ್ಯನಿಗೆ ಕುಡಿಯಲು ನೀರಿಲ್ಲ. ಹೊಲದಲ್ಲಿ ಧೂಳು ಬಿದ್ದು ಪಪ್ಪಾಯಿ ಹಾಳಾಗಿದೆ. ರೈತರು, ನಾವು ಹೇಗೆ ಬದುಕಬೇಕು? ಕಾರ್ಖಾನೆಯವರು ಬಂದು ಶ್ರೀಮಂತರಾಗುವುದು ಅಷ್ಟೇ. ಆದರೆ ನಾವೇನು ಮಾಡಬೇಕು? ಹಿಂಗ ಕಾರ್ಖಾನೆ ಬಂದರೆ ನಾವೇ ಸತ್ತು ಹೋಗುತ್ತೇವೆ ಎನ್ನುವ ಕರುಣಾಜನಕ ನುಡಿ ಧರಣಿ ನಿರತರ ಮನ ಕಲಕಿತು.

ಕುಣಿಕೇರಿ ತಾಂಡಾದ ಹೈಸ್ಕೂಲ್ ವಿದ್ಯಾರ್ಥಿನಿ ಅನು ಕೆಜೆ ಧರಣಿ ಬಿಡಾರಕ್ಕೆ ಏಕಾಏಕಿ ಬಂದು ಕಣ್ಣೀರಾಕಿ ಕುಣಿಕೇರಿ ತಾಂಡಾದ ಕೆಪಿಆರ್ ಇಂಡಸ್ಟ್ರಿ, ಐಎಲ್ಸಿ ಮುಂತಾದ ಕಾರ್ಖಾನೆಗಳು ನಮ್ಮ ನೀರು ಗಾಳಿ ಕೆಡಿಸಿವೆ. ನಮ್ಮ ಊರಲ್ಲಿ ಕ್ಯಾನ್ಸರ್ ಸಾಮಾನ್ಯವಾಗಿ ಮನೆಮನೆಯಲ್ಲಿ ರೋಗಿಗಳು ಇದ್ದರೂ ಅವರ ಕರುಣಾಜನಕ ಸ್ಥಿತಿಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಮೇಲೆ ಕ್ರಮಕ್ಕೆ ನಾವೇ ಮುಂದಾಗಬೇಕು. ಇಲ್ಲದಿದ್ದರೆ ನಮಗೆ ಬದುಕಲಾಗುವುದಿಲ್ಲ ಎನ್ನುವ ಮಾತು ಕರುಳು ಹಿಂಡಿತು.

ವೇದಿಕೆಗೆ ಆಗಮಿಸಿದ ಚಿತ್ರದುರ್ಗ ಜಿಲ್ಲೆ, ಬೆಳಗಟ್ಟಾ ಶ್ರೀಗುರು ಕರಿಬಸವೇಶ್ವರ ಅಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷೆ ಮಾತೆ ಮಹಾದೇವಮ್ಮ ಬೆಂಬಲ ಸೂಚಿಸಿದರು.

ಧರಣಿಯಲ್ಲಿ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ಆರ್ಯ ವೈಶ್ಯ ಸಮಾಜದ ಹನುಮೇಶ್ ಇಲ್ಲೂರು, ಮಲ್ಲಿಕಾರ್ಜುನ್ ಜಾನೇಕಲ್, ರಾಘವೇಂದ್ರ ಚಿತ್ರಾಲಿ, ಡಿ.ಗುರುರಾಜ್ ವಕೀಲರು, ಶ್ರೀನಿವಾಸ್ ವೇಮಲಿ, ದೇವೇಂದ್ರಪ್ಪ ಜನಾದ್ರಿ, ರಾಜು ಬೆಲ್ಲಂಕೊಂಡಿ, ವಿದ್ಯಾರ್ಥಿನಿ ಜಾನು ಕೆಜೆ, ಮಕ್ಬೂಲ್ ರಾಯಚೂರು, ಅನಿಲ್ ಗುಡ್ಡದ್, ಕೊಟ್ರೇಶ್ ಬಾದಾಮಿ, ಶಾಂತಯ್ಯ ಅಂಗಡಿ, ಮೂಕಪ್ಪ ಮೇಸ್ತ್ರಿ, ಬಸವರಾಜ ಶೀಲವಂತರ, ಎಫ್.ಎಸ್. ಜಾಲಿಹಾಳ, ಸಿ.ವಿ. ಜಡಿಯವರ, ಮಹಾಂತೇಶ ಕೊತಬಾಳ, ಕೇಶವ ಕಟ್ಟಿಮನಿ, ಶಾಂತಯ್ಯ ಅಂಗಡಿ, ಜಗನ್ನಾಥ ದೇವರಂಗಡಿ, ಶಾಂತಯ್ಯ ಅಂಗಡಿ, ಮಂಜುನಾಥ ಜಿ. ಗೊಂಡಬಾಳ ಪಾಲ್ಗೊಂಡರು.