ಯಾವುದೇ ಜಾತಿ, ಧರ್ಮ ನೋಡಿ ಗ್ಯಾರಂಟಿ ಯೋಜನೆ ಮಾಡಿಲ್ಲ: ಶಾಸಕ ಶಿವಣ್ಣನವರ

| Published : Jan 24 2024, 02:01 AM IST

ಯಾವುದೇ ಜಾತಿ, ಧರ್ಮ ನೋಡಿ ಗ್ಯಾರಂಟಿ ಯೋಜನೆ ಮಾಡಿಲ್ಲ: ಶಾಸಕ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಪ್ರತಿಯೊಂದು ಕುಟುಂಬವೂ ಸರ್ಕಾರದ ಒಂದಿಲ್ಲೊಂದು ಯೋಜನೆ ವ್ಯಾಪ್ತಿಗೊಳಪಡುತ್ತಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ರಾಜ್ಯದ ಜನರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳು ಯಾವುದೇ ಜಾತಿ, ಧರ್ಮ ನೋಡಿ ಮಾಡಿಲ್ಲ. ರಾಜ್ಯದ ಪ್ರತಿಯೊಂದು ಕುಟುಂಬವೂ ಸರ್ಕಾರದ ಒಂದಿಲ್ಲೊಂದು ಯೋಜನೆ ವ್ಯಾಪ್ತಿಗೊಳಪಡುತ್ತಿದೆ. ಆದರೆ ಪ್ರಸ್ತುತ ಲೋಕಸಭೆ ಚುನಾವಣೆ ಧರ್ಮ-ಅಧರ್ಮ ಎನ್ನುವಂತೆ ಬಿಂಬಿಸುತ್ತಿರುವ ಬಿಜೆಪಿಗೆ ಮುಖಭಂಗವಾಗಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಭವಿಷ್ಯ ನುಡಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು, ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಮಾಡಲು ಸಾಧ್ಯವಿಲ್ಲ ಎಂಬ ಬಹುದೊಡ್ಡ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿತ್ತು, ಇದಕ್ಕಾಗಿ ₹52 ಸಾವಿರ ಕೋಟಿ ಸರ್ಕಾರಕ್ಕೆ ಹೊರೆಯಿದೆ. ಹೀಗಿದ್ದರೂ ಸಹ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸಿದ್ದೇವೆ ಎಂದರು.

ಕಳೆದ 2013-18 ರವರೆಗಿನ ಕಾಂಗ್ರೆಸ್ ಅವಧಿಯಲ್ಲಾದ ಅಭಿವೃದ್ಧಿಯನ್ನು ಈಗಲೂ ಕಾರ್ಯಕರ್ತರು ಮತ್ತು ಜನರು ನಿರೀಕ್ಷಿಸುವುದು‌ ಸಹಜ, ಆದರೆ ರಾಜ್ಯದ 196 ತಾಲೂಕುಗಳಲ್ಲಿ ಬರ ಎದುರಾಗಿದ್ದು ಸರ್ಕಾರದ ಮೇಲೆ ಮತ್ತಷ್ಟು ಹೊರೆ ಬಿದ್ದಿದೆ. ಅದಾಗ್ಯೂ ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಗೆ ₹52 ಸಾವಿರ ಕೋಟಿಯನ್ನು ನೀಡಬೇಕಾಗಿದೆ. ಹೀಗಾಗಿ ಸರ್ಕಾರ ಆರ್ಥಿಕ ನಿರ್ವಹಣೆಯಲ್ಲಿ ತಡವಾಗಿಯಾದರೂ ಹೊಸ ಕಾಮಗಾರಿಗಳಿಗೆ ಅನುದಾನ ಸಿಗುವ ಭರವಸೆ ಇದೆ ಎಂದರು.

ಗೊಬ್ಬರದ ದರ ಹೆಚ್ಚಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಬರಗಾಲ ಎಂದು ಘೋಷಿಸಿದ ಬಳಿಕವೂ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿಧಿಯಿಂದ ಹಣ ಬಿಡುಗಡೆ ಮಾಡಿಲ್ಲ. ಹೀಗಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರತಿ ಎಕರೆಗೆ ₹2 ಸಾವಿರ ಪರಿಹಾರ ನೀಡುತ್ತಿದೆ ಪ್ರತಿ ಶಾಸಕರಿಗೆ ₹25 ಕೋಟಿ ಅನುದಾನ ಬಂದಿದೆ. ಪ್ರಾಂತವಾರು ಅಭಿವೃದ್ಧಿಗೆ ವಿನಿಯೋಗಿಸುವುದಾಗಿ ತಿಳಿಸಿದರು.

ಮುಖಂಡರಾದ ಎಸ್.ಆರ್. ಪಾಟೀಲ, ವೀರನಗೌಡ ಪೋಲಿಸ್ ಗೌಡ್ರ, ಎಪಿಎಂಸಿ ಮಾಜಿ ನಿದೇಶಕ ಬಸವರಾಜ ಸವಣೂರ, ತಾಲೂಕಾಧ್ಯಕ್ಷ ದಾನಪ್ಪ ಚೂರಿ ಮಾತನಾಡಿದರು.

ವೇದಿಕೆಯಲ್ಲಿ ರಾಮಣ್ಣ ಉಕ್ಕುಂದ, ಬೀರಪ್ಪ ಬಣಕಾರ, ಪುಟ್ಟನಗೌಡ ಪಾಟೀಲ, ದುರ್ಗೇಶ ಗೋಣೆಮ್ಮನವರ, ಡಿ.ಎಚ್. ಬುಡ್ಡನಗೌಡ್ರ, ನಾಗರಾಜ ಆನವೇರಿ, ಖಾದರಸಾಬ್ ದೊಡ್ಮನಿ, ಮಾರುತಿ ಕೆಂಪಗೊಂಡ್ರ, ರಾಜು ಕಳ್ಯಾಳ, ಸುರೇಶಗೌಡ್ರ ಪಾಟೀಲ, ಮಾರುತಿ ಅಚ್ಚಿಗೇರಿ, ಲಕ್ಷ್ಮೀ ಜಿಂಗಾಡೆ, ರುದ್ರಪ್ಪ ಹೊಂಕಣದ ರಮೇಶ ಸುತ್ತಕೋಟಿ, ಮಂಜುನಾಥ ಭೋವಿ, ಮಂಜನಗೌಡ ಲಿಂಗನಗೌ್ಡ್ರ, ಮುನ್ನಾ ಎರೇಶಿಮಿ ಹಾಗೂ ಇತರರು ಉಪಸ್ಥಿತರಿದ್ದರು.