ಸಾರಾಂಶ
ಕುಕನೂರು:
ಮಾಸಿಕ ಸಭೆಗೆ ನಾವೂ ಟೀ, ಕಾಫಿ, ಟೀಫನ್‌ಗಾಗಿ ಬರುವುದಿಲ್ಲ. ಅಭಿವೃದ್ಧಿಯ ವಿಚಾರದ ಮಾತುಗಳು ಸಭೆಯಲ್ಲಿ ಚರ್ಚೆ ಆಗುತ್ತಿಲ್ಲ ಎಂದು ಪಪಂ ಸದಸ್ಯ ಗಗನ ನೋಟಗಾರ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನನ್ನ ವಾರ್ಡ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದೆ ಎಂದು ನಿವಾಸಿಗಳು ದೂರು ನೀಡಿದ್ದಾರೆ. ನಾನು ವಾರ್ಡ್ ಸದಸ್ಯನಾಗಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಸದಸ್ಯರು ನಾಮಕ್ಯಾವಸ್ಥೆ ಎಂದಾದರೂ ಹೇಳಿ, ಪ್ರಶ್ನಿಸುವುದನ್ನು ಬಿಡುತ್ತೇವೆ. ವಾರ್ಡ್ ಸದಸ್ಯರನ್ನು ಕರೆಯದೆ ಅಧಿಕಾರಿಗಳೇ ಕಾಮಗಾರಿ ಆರಂಭಿಸಿದರೇ ಹೇಗೆ ಎಂದು ಕಿಡಿಕಾರಿದರು.
ನಾವು ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಟೀ, ಕಾಫಿ, ಟೀಫನ್ ಮಾಡಲು ಬರುವುದಿಲ್ಲ. ಊರಿನ ಅಭಿವೃದ್ಧಿಗಾಗಿ ಬರುತ್ತವೆ. ಹಿಂದಿನ ಸಭೆಯಲ್ಲಿ ಜವಳ ಕಾಲನಿ ಸಂಪರ್ಕ ಮಾಡುವ ರಸ್ತೆ ಮಾಡಲು ತಿಳಿಸಿತ್ತು. ಈ ವರೆಗೂ ಆಗಿಲ್ಲ. ಮುಂದಿನ ಸಭೆ ಒಳಗಾಗಿ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಸಿದರು.ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ಕೆಲವು ಕಾಮಗಾರಿ ಮತ್ತು ಇತರೆ ನಿರ್ಧಾರಗಳನ್ನು ಆಡಳಿತ ಪಕ್ಷದ ಕಾಂಗ್ರೆಸ್ ಸದಸ್ಯರೇ ತೆಗೆದುಕೊಳ್ಳುತ್ತಾರೆ. ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರದಲ್ಲಿ ನೂತನ ಪಪಂ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ₹ ೨.೨೫ ಕೋಟಿ ಅನುದಾನದಲ್ಲಿ ಕಟ್ಟಡ ನಿರ್ಮಿಸಲು ಸಭೆ ಕರೆಯಲಾಗಿತ್ತು, ಆದರೆ, ಕಟ್ಟಡದ ವಿನ್ಯಾಸದ ಬಗ್ಗೆ ಬಿಜೆಪಿ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಇದು ನಮಗೆ ಗೊತ್ತಿಲ್ಲ ಎಂದರೆ ಹೇಗೆ. ಪಪಂನಲ್ಲಿ ಅನೇಕ ಕಾಮಗಾರಿಗಳು ನಡೆದರು ನಮಗೆ ಮಾಹಿತಿ ನೀಡಿಲ್ಲ. ಟೆಂಡರ್ ಕರೆಯುತ್ತೀರಿ, ಗುತ್ತಿಗೆದಾರರು ಬಂದು ಕೆಲಸ ಮಾಡುತ್ತಾರೆ. ಆದರೆ, ಯಾವ ಕೆಲಸ ಎಲ್ಲಿ, ಏನು ಮಾಡಿದ್ದಾರೋ ನಮಗೆ ಗೊತ್ತಿಲ್ಲ. ಹಿಂದಿನ ಸಭೆಯಲ್ಲಿ ಆದಂತಹ ನಿರ್ಣಯಗಳು ಹಾಗೆ ಉಳಿಯುತ್ತಿವೆ. ಇದರ ಹೊಣೆ ಯಾರು ಹೋರುತ್ತಾರೆ. ಇಂತಹ ಅನೇಕ ಸಮಸ್ಯೆಗಳು ಇವೆ. ನಾವು ಸಭೆಗೆ ಬಂದು ಸಹಿ ಮಾಡಿ ಹೋಗಿ ಎಂದರೆ ಅಷ್ಟೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಭೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಿಸಿ ಕ್ಯಾಮೆರಾ ಅಳವಡಿಸುವುದು, ಪರಿಶಿಷ್ಟ ಜಾತಿ ಜನಾಂಗದವರ ಸಣ್ಣ ಉದ್ದಿಮೆದಾರರಿಗೆ ಸಬ್ಸಡಿ ನೀಡುವ ಬಗ್ಗೆ, ಎಲ್ಲ ವಾರ್ಡ್‌ಗಳ ದೇವಸ್ಥಾನಗಳ ಕಮಾನ್ ನಿರ್ಮಾಣ, ಸ್ಮಶಾನಗಳಿಗೆ ಬೋರ್‌ವೆಲ್ ಕೊರೆಸುವ ಬಗ್ಗೆ ಚರ್ಚಿಸಲಾಯಿತು.
ಪಪಂ ಅಧ್ಯಕ್ಷ ಲಲಿತಮ್ಮ ಯಡಿಯಾಪೂರ, ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಮುಖ್ಯಾಧಿಕಾರಿ ನಭಿಸಾಬ್ ಕಂದಗಲ್, ಸದಸ್ಯರಾದ ರಾಮಣ್ಣ ಬಂದಕಮನಿ, ಬಾಲರಾಜ ಗಾಳಿ, ಜಗನ್ನಾಥ ಭೂವಿ, ಶಿವರಾಜಗೌಡ ಯಲ್ಲಪ್ಪಗೌಡ್ರ, ರಾಧಾ ದೊಡ್ಡಮನಿ, ಮಲ್ಲಿಕಾರ್ಜುನ ಚೌಧರಿ, ನೇತ್ರಾವತಿ ಮಾಲಗಿತ್ತಿ, ಲೀಲಾವತಿ ಮುಧೋಳ, ಮಂಜುನಾಥ ಕೋಳೂರು, ಕವಿತಾ ಹೂಗಾರ, ಮಂಜುಳಾ ಕಲ್ಮನಿ, ನಾಮನಿದೇರ್ಶಿತ ಸದಸ್ಯರಾದ ಈರಣ್ಣ ಯಲಬುರ್ಗಿ, ಈಶಯ್ಯ, ರಫೀ ಹಿರೇಹಾಳ ಸೇರಿದಂತೆ ಸಿಬ್ಬಂದಿಗಳು ಇದ್ದರು.೧೦ನೇ ವಾರ್ಡ್ ನಿವಾಸಿಗಳ ಮನೆಗೆ ಮಳೆ ನೀರು
ಸದಸ್ಯ ಸಿರಾಜ್ ಕರಮುಡಿ ಮಾತನಾಡಿ, ಎರಡು ದಿನಗಳಿಂದ ಸುರಿದ ಮಳೆಗೆ ೧೦ನೇ ವಾರ್ಡ್‌ನ ಕೆಲವು ನಿವಾಸಿಗಳ ಮನೆಯಲ್ಲಿ ಮಳೆ ನೀರು ನುಗ್ಗಿದೆ. ಜವಳದ ರಸ್ತೆಯಲ್ಲಿ ಗುಣಮಟ್ಟದ ಚರಂಡಿ ಮತ್ತು ರಸ್ತೆ ನಿರ್ಮಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಕೆಲವರು ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಅನೇಕ ಸದಸ್ಯರು ತಮ್ಮ ವಾರ್ಡ್‌ಗಳ ಬಗ್ಗೆ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಿದರು.