ಚಾಮುಲ್‌ ಅಧ್ಯಕ್ಷ ನಾಗೇಂದ್ರ ವಿರುದ್ಧ ಅವಿಶ್ವಾಸ ಸಭೆ

| Published : Jan 26 2025, 01:30 AM IST

ಸಾರಾಂಶ

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್‌)ನ ಅಧ್ಯಕ್ಷ ವೈ.ಸಿ.ನಾಗೇಂದ್ರರ ಅಧಿಕಾರದಿಂದ ಕೆಳಗಿಳಿಸಲು ಚಾಮುಲ್‌ನ 7 ಮಂದಿ ನಿರ್ದೇಶಕರು ಅವಿಶ್ವಾಸ ತರಲು ಮುಂದಾಗಿದ್ದು, ಜ.27 ರಂದು ಅವಿಶ್ವಾಸ ನಿರ್ಣಯ ಸಭೆ ನಡೆಯಲಿದೆ.

ದೇವರಾಜು ಕಪ್ಪಸೋಗೆ/ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ/ ಚಾಮರಾಜನಗರ

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್‌)ನ ಅಧ್ಯಕ್ಷ ವೈ.ಸಿ.ನಾಗೇಂದ್ರರ ಅಧಿಕಾರದಿಂದ ಕೆಳಗಿಳಿಸಲು ಚಾಮುಲ್‌ನ 7 ಮಂದಿ ನಿರ್ದೇಶಕರು ಅವಿಶ್ವಾಸ ತರಲು ಮುಂದಾಗಿದ್ದು, ಜ.27 ರಂದು ಅವಿಶ್ವಾಸ ನಿರ್ಣಯ ಸಭೆ ನಡೆಯಲಿದೆ.

ಚಾಮುಲ್‌ ಅಧ್ಯಕ್ಷ ವೈ.ಸಿ.ನಾಗೇಂದ್ರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್‌ ಬೆಂಬಲಿತ ಚಾಮುಲ್‌ ನಿರ್ದೇಶಕರಾದ ಎಚ್.ಎಸ್.ನಂಜುಂಡ ಪ್ರಸಾದ್‌, ಶೀಲಾ ಪುಟ್ಟರಂಗಶೆಟ್ಟಿ, ನಂಜುಂಡಸ್ವಾಮಿ, ತಾರೀಖ್‌ ಅಹಮದ್‌, ಜೆಡಿಎಸ್‌ ಬೆಂಬಲಿತ ಉದ್ದನೂರು ಪ್ರಸಾದ್‌, ಬಂಡಾಯ ಬಿಜೆಪಿಯ ಎಂ.ಪಿ.ಸುನೀಲ್‌, ಸದಾಶಿವಮೂರ್ತಿ ಸಹಕಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಅವಿಶ್ವಾಸ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಚಾಮುಲ್‌ ಅಧ್ಯಕ್ಷ ವೈ.ಸಿ.ನಾಗೇಂದ್ರರ ವಿರುದ್ಧ ಅವಿಶ್ವಾಸ ನಿರ್ಣಯ ಜ.27 ರಂದು ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಕುದೇರು ಕಚೇರಿಯಲ್ಲಿ ಸಭೆ ನಿಗದಿಗೊಂಡಿದೆ ಎಂದು ಚಾಮುಲ್‌ ನಿರ್ದೇಶಕರೊಬ್ಬರು ಖಚಿತ ಪಡಿಸಿದ್ದಾರೆ. ಚಾಮುಲ್‌ನ 9 ಮಂದಿ ನಿರ್ದೇಶಕರು ಮತದಾರರಿಂದ ಆಯ್ಕೆಯಾದವರು ಮಾತ್ರ ಅವಿಶ್ವಾಸಕ್ಕೆ ಸಹಿ ಹಾಕಲು ಅರ್ಹರಾಗಿದ್ದಾರೆ. ಆದರೆ ಅಧ್ಯಕ್ಷರ ಚುನಾವಣೆಯಲ್ಲಿ ನಾಮ ನಿರ್ದೇಶಿತ ನಿರ್ದೇಶಕರು, ಅಧಿಕಾರಿಗಳು ಮತ ಹಾಕಲು ಮಾತ್ರ ಅರ್ಹರಾಗಿದ್ದಾರೆ.

ಅಧ್ಯಕ್ಷಗಿರಿಗೆ ಪೈಪೋಟಿ:

ಚಾಮುಲ್‌ ಅಧ್ಯಕ್ಷ ವೈ.ಸಿ.ನಾಗೇಂದ್ರರ ವಿರುದ್ಧ ಅವಿಶ್ವಾಸಕ್ಕೆ ಜಯವಾದರೆ ಇನ್ನುಳಿದ 2.4 ತಿಂಗಳ ಅಧಿಕಾರಕ್ಕೆ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಪುತ್ರಿ ಶೀಲಾ ಪುಟ್ಟರಂಗಶೆಟ್ಟಿ, ಚಾಮುಲ್‌ ನಿರ್ದೇಶಕರಾದ ನಂಜುಂಡಸ್ವಾಮಿ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಚಾಮುಲ್‌ ಮಾಜಿ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್‌ ಕೂಡ ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಆಸೆ ಇಟ್ಟುಕೊಂಡಿದ್ದಾರೆ. ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್‌) ದ ಆಡಳಿತ ಮಂಡಳಿಯ 2ನೇ ಅವಧಿಯಲ್ಲಿ ಬಿಜೆಪಿ ಬೆಂಬಲಿತ ವೈ.ಸಿ.ನಾಗೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.