ಸಾರಾಂಶ
ಅವಿಶ್ವಾಸ ಗೊತ್ತುವಳಿ ಪರವಾಗಿ 13 ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾವಣೆ ಮಾಡಿದ್ದರಿಂದ ಅವಿಶ್ವಾಸ ಗೊತ್ತುವಳಿಗೆ ಗೆಲುವಾಯಿತು.
ಕನ್ನಡಪ್ರಭ ವಾರ್ತೆ ಕಮತಗಿ
ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಮಂಡಿಸಲಾದ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಅವಶ್ಯವಿದ್ದ 2/3ಕ್ಕಿಂತ ಹೆಚ್ಚಿನ (13) ಸದಸ್ಯರು ಅವಿಶ್ವಾಸ ಮಂಡನೆಯ ಪರವಾಗಿ ಕೈ ಎತ್ತುವ ಮೂಲಕ ಮತ ಚಲಾವಣೆ ಮಾಡಿದ್ದರಿಂದ ಅವಿಶ್ವಾಸಕ್ಕೆ ಗೆಲುವಾಗಿದೆ.ಪಪಂ ಕಾರ್ಯಾಲಯದ ಸಭಾಭವನದಲ್ಲಿ ಪಪಂ ಉಪಾಧ್ಯಕ್ಷೆ ನೇತ್ರಾವತಿ ದೇವಿಪ್ರಸಾದ ನಿಂಬಲಗುಂದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವಿಶ್ವಾಸ ಮಂಡನೆ ಪ್ರಕ್ರಿಯೆ ನಡೆಯಿತು. 2/3ಕ್ಕಿಂತ ಹೆಚ್ಚಿನ ಸದಸ್ಯರು (ಒಟ್ಟು ಪಪಂ 16) ಹಾಗೂ ಸಂಸದರು ಮತ್ತು ಶಾಸಕರು ಸೇರಿ ಒಟ್ಟು 18 ಸದಸ್ಯರಲ್ಲಿ ಪಪಂ ಉಪಾಧ್ಯಕ್ಷೆ ಸೇರಿ 13 ಸದಸ್ಯರು ಹಾಜರಿದ್ದು, ಸಹಿ ಮಾಡುವ ಮೂಲಕ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಅವಿಶ್ವಾಸ ಗೊತ್ತುವಳಿ ಪರವಾಗಿ 13 ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾವಣೆ ಮಾಡಿದ್ದರಿಂದ ಅವಿಶ್ವಾಸ ಗೊತ್ತುವಳಿಗೆ ಗೆಲುವಾಯಿತು.
ಆದರೆ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಮಂಡನೆ ವಿರುದ್ಧವಾಗಿ ಯಾವುದೇ ಮತಚಲಾವಣೆ ಆಗಲಿಲ್ಲ. ಅವಿಶ್ವಾಸ ಗೊತ್ತುವಳಿ ಸಭೆಯಿಂದ ಸಂಸದರು, ಶಾಸಕರು, ಅಧ್ಯಕ್ಷರು, ಓರ್ವ ಕಾಂಗ್ರೆಸ್, ಓರ್ವ ಬಿಜೆಪಿ ಸದಸ್ಯರು ಗೈರಾಗಿದ್ದರು. ಸಭೆಯಲ್ಲಿ ಪಟ್ಟಣ ಪಂಚಾಯಿತಿಯ 13 ಸದಸ್ಯರು ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎಫ್.ಎನ್.ಹುಲ್ಲಿಕೇರಿ ಇದ್ದರು.ಉಪಾಧ್ಯಕ್ಷರ ನೇತೃತ್ವದಲ್ಲಿ ಸಭೆ:
ಕಮತಗಿ ಪಪಂ ಅಧ್ಯಕ್ಷರ ವಿರುದ್ಧ ಸ್ವ ಪಕ್ಷದ 9, ಬಿಜೆಪಿ 3, ಓರ್ವ ಪಕ್ಷೇತರ ಸದಸ್ಯರು ಕೂಡಿಕೊಂಡು ಅವಿಶ್ವಾಸ ಗೊತ್ತುವಳಿಗೆ ಸಹಿ ಮಾಡಿ ಜೂ.20ರಂದು ಪಪಂ ಮುಖ್ಯಾಧಿಕಾರಿಗಳ ಮೂಲಕ ಅಧ್ಯಕ್ಷರಿಗೆ ಮನವಿ ಪತ್ರ ನೀಡಿ ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಆಗ್ರಹಿಸಿದ್ದರು. ಆದರೆ ಅಧ್ಯಕ್ಷರು ಸಭೆ ಕರೆಯದ ಕಾರಣ ಮತ್ತೆ ಸದಸ್ಯರು ಜು.5ರಂದು ಪಪಂ ಉಪಾಧ್ಯಕ್ಷರಿಗೆ ವಿಶೇಷ ಸಭೆ ಕರೆಯುವಂತೆ ಆಗ್ರಹಿಸಿದಾಗ ಉಪಾಧ್ಯಕ್ಷರು ಜು.18ರಂದು ವಿಶೇಷ ಸಾಮಾನ್ಯ ಸಭೆಯ ದಿನಾಂಕ ನಿಗದಿಪಡಿಸಿದ್ದರು.2ನೇ ಬಾರಿ ಅವಿಶ್ವಾಸ ಮಂಡನೆ:
ಕಮತಗಿ ಪಟ್ಟಣವು ಈ ಮೊದಲು 1965-66ನೇ ಸಾಲಿನಲ್ಲಿದ್ದ ಟಿಎಮ್‌ಸಿ (ಟೌನ್ ಮುನ್ಸಿಪಲ್ ಕೌನ್ಸಿಲ್) ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಸೋದರ ಮಾವನನ್ನು, ಸದಸ್ಯರಾಗಿದ್ದ ಸ್ವತಃ ಅಳಿಯನೇ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಗೆಲವು ಸಾಧಿಸಿ ನಂತರ ಅಧ್ಯಕ್ಷರಾಗಿದ್ದು ಇತಿಹಾಸ. ಸದ್ಯದ ಪಟ್ಟಣ ಪಂಚಾಯಿತಿಯ ಅವಧಿಯಲ್ಲಿ ಅಧ್ಯಕ್ಷರ ವಿರುದ್ಧ ಸ್ವ ಪಕ್ಷದ ಸದಸ್ಯರೇ ಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡಿರುವುದು ಇದು ಎರಡನೆಯ ಬಾರಿಯಾಗಿದೆ.