ಹಳಿಯಾಳ ಪಟ್ಟಣದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ 12ನೇ ಕನ್ನಡ-ಹಬ್ಬಕ್ಕೆ ಕನ್ನಡಪ್ರಭ ಉಪಸಂಪಾದಕಿ ದಿವ್ಯಾ ಹೆಗಡೆ ಕಬ್ಬಿನಗದ್ದೆ ಚಾಲನೆ ನೀಡಿ, ದಿಕ್ಸೂಚಿ ಭಾಷಣ ಮಾಡಿದರು.

ಹಳಿಯಾಳ: ಭಾಷೆ ಬೆಳೆಸುವ ಧಾವಂತದ ಮಧ್ಯೆ ನಾವು ನಮಗರಿವಿಲ್ಲದಂತೆ ಅನ್ಯ ಭಾಷೆಯ ಬಗ್ಗೆ ದುರಾಭಿಮಾನ ಬೆಳೆಸಿಕೊಂಡು ಬರುತ್ತಿರುವುದು ಸರಿಯಲ್ಲ. ಕನ್ನಡ ಭಾಷೆಗೆ ಸಾಕಷ್ಟು ಸವಾಲುಗಳಿದ್ದು, ಅದನ್ನು ಯುವಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕನ್ನಡಪ್ರಭ ಉಪಸಂಪಾದಕಿ ದಿವ್ಯಾ ಹೆಗಡೆ ಕಬ್ಬಿನಗದ್ದೆ ಹೇಳಿದರು.

ಪಟ್ಟಣದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ 12ನೇ ಕನ್ನಡ-ಹಬ್ಬಕ್ಕೆ ಚಾಲನೆ ನೀಡಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಕನ್ನಡದೊಂದಿಗೆ ಅದರ ಸಹೋದರ ಭಾಷೆಯಾದಂತಿರುವ ಇನ್ನುಳಿದ ಭಾಷೆಗಳು ಬೆಳೆಯಬೇಕು. ಆಗ ಮಾತ್ರ ನಾವು ಕೇಳುತ್ತಾ ಬೆಳೆದಿರುವ ಜೈ ಭಾರತ ಜನನಿಯ ತನುಜಾತೆ... ಹಾಡು ಅರ್ಥಪೂರ್ಣವಾಗಬಲ್ಲದು ಎಂದರು.

ಭಾಷೆಯ ನಡುವೆ ನಡೆದಿರುವ ದುಷ್ಕೃತ್ಯಗಳು ಕ್ಷಮಿಸಲಾರದಂತವು. ಪ್ರಾದೇಶಿಕತೆ ಹಾಗೂ ರಾಷ್ಟ್ರೀಯತೆಯ ನಡುವೆ ನಮಗೆ ಸಂಘರ್ಷ ಬೇಡ. ಭಾರತಾಂಬೆ ಮತ್ತು ಕನ್ನಡಾಂಬೆ ಬೇರೆಯಲ್ಲ. ಭಾಷೆಯು ನಮ್ಮ ಮನಸ್ಸು-ಹೃದಯಗಳನ್ನು ಬೆಸೆಯಬೇಕೆ ಹೊರತು ಇನ್ನೊಬ್ಬರಿಗೆ ನೋವು ಕೊಡುವಂತಾಗಬಾರದು ಎಂದರು.

ಜವಾಬ್ದಾರಿಯನ್ನು ನಿಭಾಯಿಸೋಣ: ಪ್ರತಿಯೊಬ್ಬರೂ ತಮ್ಮ ಸೇವಾ ಪರಿಮಿತಿಯಲ್ಲಿ ಕನ್ನಡ ಭಾಷೆಯ ಸೊಬಗು ಹಾಗೂ ಮಹಿಮೆಯನ್ನು ಹೆಚ್ಚಿಸಿದ್ದಾರೆ. ಈ ಅನ್ನದ ಭಾಷೆಯ ವ್ಯಾಪ್ತಿಯನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಾಂತವಾರು, ಪ್ರಾದೇಶಿಕವಾಗಿವಾರು ಭಿನ್ನವಾಗಿ ಬೆಳೆದು ಬಂದ ಕನ್ನಡ ಇಂದು ಅನ್ನದ ಭಾಷೆಯಾಗಿ ಬೆಳೆದಿದೆ. ಕನ್ನಡಕ್ಕೆ ಪ್ರತಿ ಬಾರಿ ಎದುರಾಗುತ್ತಿರುವ ಪ್ರಾದೇಶಿಕತೆ ಹಾಗೂ ರಾಷ್ಟ್ರೀಯತೆಯ ಸವಾಲನ್ನು ಧೈರ್ಯವಾಗಿ ಎದುರಿಸಿ ಕನ್ನಡವನ್ನು ಬೆಳೆಸುವುದರೊಂದಿಗೆ ಭವ್ಯ ರಾಷ್ಟ್ರವನ್ನು ಸಹ ನಿರ್ಮಿಸೋಣ ಎಂದರು.

ಕನ್ನಡ ಭಾಷೆಗೆ ಸರಿಯಾಟಿಯಾದ ಭಾಷೆಯಿಲ್ಲ: ಖ್ಯಾತ ಸಂಗೀತಕಾರು ಹಾಗೂ ಗಾಯಕ ಡಾ. ಶ್ರೀಧರ ಕುಲಕರ್ಣಿ ಅವರು ಗಾಯನದ ಜತೆಯಲ್ಲಿ ನಗೆ ಚಟಾಕಿಗಳೊಂದಿಗೆ ಕನ್ನಡ ಭಾಷೆಯ ಮಹತ್ವ ಸಾರುತ್ತ, ಕನ್ನಡ ಭಾಷೆಯಲ್ಲಿನ ಸೊಗಡು ಇಂಗ್ಲಿಷ್ ಭಾಷೆಯಲ್ಲಿ ಕಾಣಲು ಅಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿ.ಆರ್.ಡಿ.ಎಂ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿ, ಮರಾಠಿ ಭಾಷೆಯ ಪ್ರಾಬಲ್ಯವಿರುವ ತಾಲೂಕಿನಲ್ಲಿ ಕನ್ನಡ ಭಾಷಾ ವ್ಯಾಮೋಹ, ಕನ್ನಡದ ಅರಿವು ಬೆಳೆಸಲು ಈ ಕನ್ನಡ ಹಬ್ಬವನ್ನು ಸಂಸ್ಥೆಯು ಕಳೆದ 12 ವರ್ಷಗಳಿಂದ ಆಚರಿಸುತ್ತಾ ಬರುತ್ತಿದ್ದೇವೆ ಎಂದರು.

ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ದಿನೇಶ್ ಆರ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಬಿಎಸ್‌ಸಿ ಶಾಲೆಯ ಪ್ರಾಚಾರ್ಯ ಬಸವರಾಜ ಎಚ್. ಇದ್ದರು.

ರಾಜೇಶ್ ದಬಾಲಿ ಹಾಗೂ ಶ್ರೀದಾಸ ಕೊಲೇಕರ ಹಾಗೂ ರವಿ ಡುಮಗೋಳಕರ ಕಾರ್ಯಕ್ರಮ ನಿರ್ವಹಿಸಿದರು.

ಭವ್ಯ ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೂ ಮುನ್ನ ಮುಖ್ಯ ಅತಿಥಿಗಳು ಹಾಗೂ ಗಣ್ಯರನ್ನು ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಭಾರತಾಂಬೆಯ ಪಲ್ಲಕ್ಕಿಯನ್ನು ಹೊತ್ತು, ನವದುರ್ಗೆಯರು ಹಾಗೂ ಪೂರ್ಣಕುಂಭ ಹೊತ್ತ ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.