ಸದಸ್ಯರ ಸಹಕಾರದಿಂದ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ೧೫ನೇ ಹಣಕಾಸು ಯೋಜನೆಯಲ್ಲಿ ₹೪.೨೩ ಲಕ್ಷ ಕಾಮಗಾರಿಗೆ ಹಾಗೂ ₹೧.೮೨ ಲಕ್ಷ ಕುಡಿಯುವ ನೀರು ಇತರೆ ಕೆಲಸಕ್ಕಾಗಿ ಖರ್ಚು ಮಾಡಲಾಗಿದೆ.
ಯಲಬುರ್ಗಾ: ಚಿಕ್ಕಮ್ಯಾಗೇರಿ ಗ್ರಾಮದ ಪ್ರಮುಖ ರಸ್ತೆಯಿಂದ ಗ್ರಾಮದೊಳಗೆ ಸಂಪರ್ಕ ಕಲ್ಪಿಸುವ ಕಿರಿದಾದ ರಸ್ತೆ ಅಗಲೀಕರಣ ಮಾಡಲು ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ ಅಮರಗಟ್ಟಿ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಚಿಕ್ಕಮ್ಯಾಗೇರಿ (ಯಲಬುರ್ಗಾ-ಬೇವೂರು ಮುಖ್ಯ ರಸ್ತೆ) ಬಸ್ ನಿಲ್ದಾಣದಿಂದ ಮಂಗಳೂರು ರಸ್ತೆಯವರೆಗೆ ಮಾರಾಟ ಮಳಿಗೆಯಿಂದ ಗ್ರಾಪಂ ಕಚೇರಿವರೆಗೆ ಹಾಗೂ ಗ್ರಾಪಂ ಕಚೇರಿಯಿಂದ ಮೆಣಸಗೇರಿ ಮನೆಯವರಿಗೆ ರಸ್ತೆ ಅಗಲೀಕರಣ ಮಾಡಲು ಸಾರ್ವಜನಿಕರಿಂದ ಗ್ರಾಪಂ ಕಚೇರಿಗೆ ಮನವಿ ಬರುತ್ತಿವೆ. ಆದರೆ, ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಅಸಮಾಧಾನದ ಮಾತನ್ನಾಡುತ್ತಿದ್ದಾರೆ. ಆದ ಕಾರಣ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಮುಂದಾಗುವಂತೆ ಸದಸ್ಯರು ಸಭೆಗೆ ತಿಳಿಸುವ ಮೂಲಕ ರಸ್ತೆ ಅಗಲೀಕರಣದಿಂದ ಗ್ರಾಮದೊಳಗೆ ಸುಗಮ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಒತ್ತಾಯಿಸಿದರು.
ಪಿಡಿಒ ವೆಂಕಟೇಶ ನಾಯಕ್ ಮಾತನಾಡಿ, ಎಲ್ಲ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ೧೫ನೇ ಹಣಕಾಸು ಯೋಜನೆಯಲ್ಲಿ ₹೪.೨೩ ಲಕ್ಷ ಕಾಮಗಾರಿಗೆ ಹಾಗೂ ₹೧.೮೨ ಲಕ್ಷ ಕುಡಿಯುವ ನೀರು ಇತರೆ ಕೆಲಸಕ್ಕಾಗಿ ಖರ್ಚು ಮಾಡಲಾಗಿದೆ. ೨೦೨೫-೨೬ನೇ ಸಾಲಿನ ₹೧೭.೨೫ ಲಕ್ಷ ತೆರಿಗೆ ಸಂಗ್ರಹವಾಗಬೇಕಿದೆ. ಈ ಪೈಕಿ ಈಗಾಗಲೇ ₹೪.೪೫ ಲಕ್ಷ ಸಂಗ್ರಹವಾಗಿದೆ. ಕರ ವಸೂಲಿಯಲ್ಲಿ ತಾಲೂಕಿಗೆ ನಮ್ಮ ಪಂಚಾಯತಿ ೨ನೇ ಸ್ಥಾನದಲ್ಲಿದೆ. ಸಂಗ್ರಹವಾದ ಕರ ವಸೂಲಿಯನ್ನು ಎಸ್ಸಿ,ಎಸ್ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಲಾಗಿದೆ ಎಂದು ಸಭೆಗೆ ಉತ್ತರಿಸಿದರು.ಕರ ವಸೂಲಿಯಲ್ಲಿ ತಾಲೂಕಿಗೆ ಎರಡನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಗ್ರಾಪಂ ಕರ ವಸೂಲಿಗಾರರಾದ ರುದ್ರೇಶ, ಶಾಮೀದ್ಅಲಿ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭ ಗ್ರಾಪಂ ಸಮಿತಿ ಅಧ್ಯಕ್ಷ ಉಮೇಶ ವಡ್ಡರ, ಸದಸ್ಯರಾದ ಯಮನೂರಪ್ಪ ಕುರಿ, ಶರಣಪ್ಪ ಕರಡದ, ದೇವಪ್ಪ ಲಗಳೂರ, ಮಂಜುಳಾ ಚನ್ನಪ್ಪನಹಳ್ಳಿ, ಗಂಗಮ್ಮ ಕುಕನಪಳ್ಳಿ, ಫಾತೀಮಾ ಬೇಗಂ, ಶರಣಯ್ಯ ಬಂಡಿಹಾಳ, ಶಾಂತಮ್ಮ ಮುರಾರಿ, ಬಸವರಾಜ ಬಿಸೆರೊಟ್ಟಿ, ರೇಣವ್ವ ಬಾದ್ರಿ, ಶರಣಪ್ಪ ಹಾದಿಮನಿ, ಕಾವೇರಿ ಮಾರನಾಳ, ಹುಚ್ಚಮ್ಮ ಉಪ್ಪಾರ ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.