ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ರಾಜ್ಯದಲ್ಲಿ ಪ್ರಸಕ್ತ ವರ್ಷ ಅತಿವೃಷ್ಟಿ, ಅನಾವೃಷ್ಟಿ ಕಾರಣದಿಂದಾಗಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿವೆ. ಸಮೀಕ್ಷೆಯ ನೆಪದಲ್ಲಿ ವಿಳಂಬ ನೀತಿ ಅನುಸರಿಸಿದ ರಾಜ್ಯ ಸರ್ಕಾರ ಈವರೆಗೂ ಬೆಳೆಹಾನಿಗೆ ಸಮರ್ಪಕ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡದೆ ಇರುವುದು ನಾಡಿನ ಅನ್ನದಾತರಿಗೆ ಮಾಡಿದ ಅವಮಾನ ಮತ್ತು ಅಪರಾಧವಾಗಿದೆ ಎಂದರು.

ಗದಗ: ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸದ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಶುಕ್ರವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ​ನಗರದ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಮೋರ್ಚಾ ಕಾರ್ಯಕರ್ತರು ಎಮ್ಮೆಗಳೊಂದಿಗೆ ಆಗಮಿಸಿ ಅವುಗಳ ಕೋಡುಗಳಿಗೆ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಮೆಕ್ಕೆಜೋಳ, ಈರುಳ್ಳಿ, ಶೇಂಗಾ ಬೆಂಬಲ ಬೆಲೆ ಖರೀದಿ ಕೇಂದ್ರ ಕೂಡಲೇ ಆರಂಭಿಸಬೇಕೆಂದು ಒತ್ತಾಯಿಸಲಾಯಿತು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ರಾಜ್ಯದಲ್ಲಿ ಪ್ರಸಕ್ತ ವರ್ಷ ಅತಿವೃಷ್ಟಿ, ಅನಾವೃಷ್ಟಿ ಕಾರಣದಿಂದಾಗಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿವೆ. ಸಮೀಕ್ಷೆಯ ನೆಪದಲ್ಲಿ ವಿಳಂಬ ನೀತಿ ಅನುಸರಿಸಿದ ರಾಜ್ಯ ಸರ್ಕಾರ ಈವರೆಗೂ ಬೆಳೆಹಾನಿಗೆ ಸಮರ್ಪಕ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡದೆ ಇರುವುದು ನಾಡಿನ ಅನ್ನದಾತರಿಗೆ ಮಾಡಿದ ಅವಮಾನ ಮತ್ತು ಅಪರಾಧವಾಗಿದೆ ಎಂದರು.

ಮುಂಗಾರು ಹಂಗಾಮಿನ ಹೆಸರು ಬೆಳೆಯಂತೂ ಸಂಪೂರ್ಣ ನಷ್ಟವಾಗಿದ್ದು, ಅಳಿದುಳಿದ ಹೆಸರು ಖರೀದಿಗೂ ರಾಜ್ಯ ಸರ್ಕಾರ ಮುಂದಾಗಲಿಲ್ಲ. ಗುಣಮಟ್ಟದ ನೆಪವೊಡ್ಡಿ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಂದ ಸದ್ಯ ಹೆಸರನ್ನು ಖರೀದಿಸುತ್ತಿಲ್ಲ. ಈ ಕಾರಣದಿಂದಾಗಿ ರೈತರು ಮಾರುಕಟ್ಟೆಯಲ್ಲಿ ಅತ್ಯಂತ ಕನಿಷ್ಠ ಬೆಲೆಗೆ ಹೆಸರು ಮಾರಾಟ ಮಾಡುತ್ತಿದ್ದು, ಕೃಷಿಗೆ ತೊಡಗಿಸಿದ ಹಣವು ಮರಳಿ ಬಾರದಂತಾಗಿ ರಾಜ್ಯದ ರೈತರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ, ನಗರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಶಂಕರ ಕರಿಬಿಷ್ಠಿ ಮಾತನಾಡಿ, ಗೋವಿನಜೋಳ ಖರೀದಿಗೆ ಕೇಂದ್ರ ಸರ್ಕಾರ ನ. 13ರಂದೇ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಈವರೆಗೂ ಖರೀದಿ ಕೇಂದ್ರ ಪ್ರಾರಂಭಿಸದಿರುವುದು ರೈತರ ನೆರವಿಗೆ ಬಾರದಿರುವುದು ರಾಜ್ಯ ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದರು.

ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಮಾತನಾಡಿ, ಕೂಡಲೇ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಗೋವಿನಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹೆಸರು, ಶೇಂಗಾ, ಈರುಳ್ಳಿ, ಮೆಣಸಿನಕಾಯಿ, ತೊಗರಿ, ಹತ್ತಿ ಮುಂತಾದ ಬೆಳೆಹಾನಿ ಮೊತ್ತವನ್ನು ಈಗ ಘೋಷಿಸಿದ ಪ್ರಮಾಣಕ್ಕಿಂತ ಇನ್ನಷ್ಟು ಹೆಚ್ಚಿಸಿ ಪರಿಹಾರವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿದರು. ಮುಖಂಡರಾದ ಎಂ.ಎಸ್. ಕರೀಗೌಡ್ರ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ವಿಜಯಕುಮಾರ ಗಡ್ಡಿ, ಬಿ.ಎಸ್. ಲದ್ವಾ, ಬಸವರಾಜ ಯಂಕಂಚಿ, ಶಶಿಮೌಳಿ ಕುಲಕರ್ಣಿ, ಎಲ್.ಟಿ. ರಾಜೊಳ್ಳಿ, ಭದ್ರೇಶ ಕುಸ್ಲಾಪೂರ, ರವಿ ದಂಡಿನ, ರಾಮಣ್ಣ ಕಮ್ಮಾರ, ಅಶೋಕ ಸಂಕಣ್ಣವರ, ರಾಘವೇಂದ್ರ ಯಳವತ್ತಿ, ಅನೀಲ ಅಬ್ಬಿಗೇರಿ, ಸುಧೀರ ಕಾಟಿಗರ, ಚಂದ್ರು ತಡಸದ, ಪ್ರಕಾಶ ಅಂಗಡಿ, ನಿರ್ಮಲಾ ಕೊಳ್ಳಿ, ಶಿವು ಹಿರೇಮನಿಪಾಟೀಲ, ಈರ್ಷಾದ ಮಾನ್ವಿ, ಶೇಖಣ್ಣ ಕನ್ಯಾಳ, ಮಾಂತೇಶ ನಲವಡಿ, ಮಹಾದೇವಪ್ಪ ಚಿಂಚಲಿ, ಅಪ್ಪಣ್ಣ ಟೆಂಗಿನಕಾಯಿ, ಶಶಿಧರ ದಿಂಡೂರ, ಲಕ್ಷ್ಮಣ ದೊಡ್ಮನಿ, ಅರವಿಂದ ಕೆಲೂರ, ಸುರೇಶ ಚಿತ್ತರಗಿ, ಶಂಕರ ಕಾಕಿ, ರಮೇಶ ಸಜ್ಜಗಾರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ಭಾವಚಿತ್ರಕ್ಕೆ ಬೆಂಕಿ...

ಪ್ರತಿಭಟನೆಯ ವೇಳೆ ಕಾರ್ಯಕರ್ತರು ಎಮ್ಮೆಗೆ ಸಿಎಂ ಭಾವಚಿತ್ರ ಕಟ್ಟಿ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಅಲ್ಲದೆ, ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಭಾವಚಿತ್ರವನ್ನು ಸಹ ಸುಟ್ಟು ಅಸಮಾಧಾನವನ್ನು ವ್ಯಕ್ತಪಡಿಸಿದರು.

​ಈ ಸಂದರ್ಭದಲ್ಲಿ ಮಾತನಾಡಿದ ರೈತ ಮೋರ್ಚಾ ನಾಯಕರು, ಸರ್ಕಾರವು ಅಧಿಕಾರ ಹಂಚಿಕೆಯ ಗೊಂದಲದಲ್ಲಿ ಮುಳುಗಿದ್ದು, ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳಂತೆ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.