ಸೊರಬ ಕಾಲೇಜಿನ ಅತಿಥಿ ಉಪನ್ಯಾಸಕ ರಾಜಶೇಖರಗೌಡ ಮಾತನಾಡಿ, 6 ಸಾವಿರ ಅನುಭವಿ ಉಪನ್ಯಾಸಕರನ್ನು ಬೀದಿಗೆ ಹಾಕಿ ಯಾವ ಸಾಧನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಗದಗ: 2018ಕ್ಕಿಂತ ಪೂರ್ವದಲ್ಲಿ ₹1200, 4000, ₹8000ರಂತೆ ಕಡಿಮೆ ವೇತನದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರಿಗೆ ನಾನ್ ಕ್ವಾಲಿಫೈಡ್ ಇರುವ ಮತ್ತು ಎಲ್ಲ ಅತಿಥಿ ಉಪನ್ಯಾಸಕರಿಗೆ ಸೇವೆ ಮಾಡುವವರಿಗೆ ಮುಂದುವರಿಸಬೇಕು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಕಲಾ ಜೋಳದ ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ದ್ವಂದ್ವ ನೀತಿಯನ್ನು ಖಂಡಿಸಿ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದಿಂದ ನಡೆದ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಮಾತನಾಡಿದರು.ಉನ್ನತ ಶಿಕ್ಷಣ ಇಲಾಖೆ ಕಾನೂನು ಗಾಳಿಗೆ ತೂರಿ ಕೌನ್ಸೆಲಿಂಗ್ ಮಾಡುವಲ್ಲಿಯೂ ಗೋಲ್‌ಮಾಲ್ ಮಾಡುತ್ತಿದ್ದು, ಅಂಗವಿಕಲರಿಗೆ ಶೇ. 10ರಷ್ಟು ಮಾತ್ರ ಅವಕಾಶ ಕೊಡಬೇಕು. ಆದರೆ ಶೇ. 100 ಅಂಗವಿಕಲರಿಗೆ ಆದ್ಯತೆ ನೀಡಿರುವ ಕಾರಣ ಸಾಕಷ್ಟು ಅಂಗವಿಕಲರು ಕೇವಲ ಶೇ. 30, 31 ಹೊಂದಿದವರು ಒಂದು ಬಾರಿಯೂ ಉಪನ್ಯಾಸ ಮಾಡಿರುವ ಅನುಭವ ಹೊಂದದೆ ಇರುವವರು ಮುಂಚಿತ ಸ್ಥಾನದಲ್ಲಿ ಇದ್ದಾರೆ. ಅದೇ 15, 20 ವರ್ಷ ಸೇವೆ ಮಾಡಿದರೂ ಕೊನೆಯ ಸ್ಥಾನದಲ್ಲಿದ್ದಾರೆ. ಇದು ಸಂಪೂರ್ಣ ಕಾನೂನು ಉಲ್ಲಂಘನೆ ಆಗಿದೆ. ಇದು ಜಾಣಕುರುಡನಂತೆ ಶಿಕ್ಷಣ ಇಲಾಖೆ ವರ್ತಿಸುತ್ತಿರುವ ಕಾರಣ 6 ಸಾವಿರ ಅತಿಥಿ ಉಪನ್ಯಾಸಕರು ಬೀದಿಗೆ ಬರುವಂತೆ ಮಾಡಿರುವ ಸರ್ಕಾರ ಇದನ್ನು ತಡೆದು ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು. ಕೌನ್ಸೆಲಿಂಗ್ ಪ್ರಕ್ರಿಯೆ ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಸೊರಬ ಕಾಲೇಜಿನ ಅತಿಥಿ ಉಪನ್ಯಾಸಕ ರಾಜಶೇಖರಗೌಡ ಮಾತನಾಡಿ, 6 ಸಾವಿರ ಅನುಭವಿ ಉಪನ್ಯಾಸಕರನ್ನು ಬೀದಿಗೆ ಹಾಕಿ ಯಾವ ಸಾಧನೆ ಮಾಡುತ್ತಿದ್ದಾರೆ? ನಮ್ಮ ಅನುಭವಕ್ಕೆ ಮಾನವೀಯತೆ ನಮ್ಮ ಕುಟುಂಬಗಳ ಬಗ್ಗೆ ಕನಿಕರ ಕೂಡಾ ಲೆಕ್ಕಕ್ಕೆ ಇಲ್ಲವೆ? ಇದಕ್ಕೆ ಸರ್ಕಾರ ಬೆಲೆ ಕೊಡಬೇಕು. ಒಂದು ವೇಳೆ ಬೆಲೆ ಕೊಡದೆ ಇದ್ದರೆ ಮುಂದಿನ ದಿನಮಾನಗಳಲ್ಲಿ ಸರ್ಕಾರದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.ಬಳ್ಳಾರಿಯ ಹಿರಿಯ ಅತಿಥಿ ಉಪನ್ಯಾಸಕ ಟಿ. ರುದ್ರಮುನಿ ಮಾತನಾಡಿ, ಈಗಾಗಲೆ ಸತತವಾಗಿ 1996ರಿಂದ 30 ವರ್ಷಗಳ ಕಾಲ ವಿದ್ಯಾರ್ಥಿಗಳ ಬದುಕನ್ನು ಕಟ್ಟಿದವರು ನಾವು. ಇವತ್ತು ನಮ್ಮ ಬದುಕು ಬೀದಿಗೆ ಬಂದು ನಿಂತಿದೆ. ಸತತವಾಗಿ ಜ್ಞಾನ ಸೇವೆ ಮಾಡುತ್ತಾ ಬರುತ್ತಿರುವ ನನಗೆ ಇವತ್ತು ನಾನ್ ಕ್ವಾಲಿಫೈಡ್ ಎಂದು ಹೇಳಿ ಹೊರಹಾಕಿದ್ದಾರೆ. ನಮಗೆ ಸರ್ಕಾರ ಸೂಕ್ತವಾದ ನ್ಯಾಯ ನೀಡಬೇಕು ಎಂದರು.
ಈ ವೇಳೆ ಗದಗ, ಬೀದರ, ಕಲಬುರಗಿ, ಉತ್ತರಕನ್ನಡ, ಧಾರವಾಡ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ಹಾವೇರಿ, ತುಮಕೂರು, ಬೆಳಗಾವಿ, ಕೋಲಾರ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಅತಿಥಿ ಉಪನ್ಯಾಸಕರು ಇದ್ದರು.