ಯಲ್ಲಾಪುರ ಪಟ್ಟಣದ ಹ್ಯಾಪಿ ಝೋನ್ ಸಭಾಭವನದಲ್ಲಿ ರೈತ ಸಂಘ, ಹಸಿರುಸೇನೆ ಜಿಲ್ಲಾ ಘಟಕ ಹಾಗೂ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಯಲ್ಲಾಪುರ: ರಾಜ್ಯದಲ್ಲಿ ಸರ್ಕಾರ ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಡಕೆ ಹಾಗೂ ತೆಂಗಿಗೆ ಸರಿಯಾದ ಬೆಲೆ ಸಿಗಬೇಕು. ರೈತರು ಬೆಳೆದ ಯಾವುದೇ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ಪಟ್ಟಣದ ಹ್ಯಾಪಿ ಝೋನ್ ಸಭಾಭವನದಲ್ಲಿ ರೈತ ಸಂಘ, ಹಸಿರುಸೇನೆ ಜಿಲ್ಲಾ ಘಟಕ ಹಾಗೂ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ರೈತರ ಕೃಷಿಗೆ ಉತ್ತೇಜನ ನೀಡಲು ಬೇಕಾದ ಸೌಲಭ್ಯಗಳನ್ನು, ಮೂಲ ಸೌಕರ್ಯಗಳನ್ನು ನೀಡಲಾಗುತ್ತಿಲ್ಲ. ರೈತರ ಹಲವಾರು ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ, ಕೃಷಿ ಸಚಿವರ ಗಮನಕ್ಕೂ ತರಲಾಗಿದೆ. ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಸರ್ಕಾರದ ಗಮನ ಸೆಳೆಯಲು ಪ್ರತಿ ಜಿಲ್ಲೆಗಳಲ್ಲಿ ನಮ್ಮ ಸಂಘಟನೆ ಬಲಗೊಳಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಎಪಿಎಂಸಿ ಚೆಕ್‌ಪೋಸ್ಟ್ ನಿರ್ಮಾಣವಾಗಬೇಕು. ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದರೆ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಗಣೇಶ ಪಾಟಣಕರ್ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದಾರೆ. ಜಗತ್ತಿನಲ್ಲಿ ಎಷ್ಟೇ ತಂತ್ರಜ್ಞಾನ ಮುಂದುವರಿದರೂ ರೈತರ ಬದುಕನ್ನು ಹಸನಾಗಿಸುವ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಈ ಕುರಿತಾಗಿ ಸಂಘಟನೆಯಿಂದ ಹೋರಾಟ ನಡೆಸಲಾಗುವುದೆಂದರು.
ಸಂಘಟನೆಯ ಪ್ರಮುಖರಾದ ವಿ.ಎಸ್. ಕಂರೆಪ್ಪಗೌಡ್ರ, ಸಂಗಣ್ಣ ಬಾಗೇವಾಡಿ, ಬಸವರಾಜ ಸಂಬೋಜಿ, ಬಾಳಮ್ಮ ಮುದೆನೂರ, ಫಕೀರಪ್ಪ ಪೂಜಾರ, ಎಂ.ಡಿ. ಕಾಲಿಬಾಗ, ಹೇಮಣ್ಣ ದೊಡ್ಡಮನಿ, ಈಶ್ವರಪ್ಪ ರಾಯನಗೌಡ್ರ, ರಾಮನಗೌಡ ಪರ್ವತಗೌಡ್ರ, ಯಲ್ಲಪ್ಪ ದುಂದೂರು, ಶಂಕ್ರಮ್ಮ ಸುತಾರ, ರೇಣುಕಾ, ಉದ್ಯಮಿ ಬಾಲಕೃಷ್ಣ ನಾಯಕ, ಬಿಜೆಪಿ ತಾಲೂಕಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಸುಭಾಸ್ ಶೇಷಗಿರಿ, ಬಶೀರ ಸೈಯ್ಯದ್, ಮಾರುತಿ ಸೋಮಾಪುರಕರ್, ಪರಶುರಾಮ ಮರಾಠಿ, ಗಣಪ ಸಿದ್ದಿ, ಶಾಣಾ ಮರಾಠಿ, ಗೀತಾ ಮಿರಾಶಿ, ಆಯೇಷಾ ಗೋಜನೂರು, ಗಾಂಧಿ ಸೋಮಾಪುರಕರ್ ಇದ್ದರು.