ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕುಡಿಯುವ ನೀರು ಪೂರೈಕೆಗಾಗಿ ಕೊರೆಯುವ ಕೊಳವೆ ಬಾವಿಗಳಿಗೆ ನೀರು ದೊರಕಿದ ಕೂಡಲೇ ವಿದ್ಯುತ್ ಸಂಪರ್ಕ ಸೇರಿದಂತೆ ಸಕಲ ಸೌಕರ್ಯಗಳನ್ನು ಅಳವಡಿಸಿ ನೀರು ಪೂರೈಕೆಗೆ ಅನುವು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ತಿಳಿಸಿದರು.ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್‌ನ ಮಿನಿ ಸಭಾಂಗಣದಲ್ಲಿ ಗುರುವಾರ ನಡೆದ ಜಲಜೀವನ್ ಮಿಷನ್ ಯೋಜನೆಯಡಿಯ ಕಾಮಗಾರಿಗಳ ಪ್ರಗತಿ ಪರಿಶಿಲನೆ ಮತ್ತು ಜಿಲ್ಲಾ ನೀರು ಮತ್ತು ನೈರ್ಮಲ್ಯ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರು ಪೂರೈಸಲು ವ್ಯವಸ್ಥೆಕೆಲವೆಡೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬೋರ್ ವೆಲ್ ಕೊರೆದು ನೀರು ಇದ್ದರೂ ಸಹ ಮೋಟರ್ ಪಂಪ್, ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡದೆ, ನೀರು ಪೂರೈಕೆಯಾಗದಿರುವ ಪ್ರಕರಣಗಳನ್ನು ಗಮನಿಸಿದ್ದೇನೆ. ಅಂತಹ ಪರಿಸ್ಥಿತಿ ನಮ್ಮ ಜಿಲ್ಲೆಯಲ್ಲಿ ಜರುಗಬಾರದು. ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊಳವೆ ಬಾವಿ ಕೊರೆದಾಗ ನೀರು ಬಿದ್ದಲ್ಲಿ ಕೂಡಲೇ ಸಕಲ ವ್ಯವಸ್ಥೆಯನ್ನು ಕೈಗೊಂಡು ನೀರನ್ನು ಪೂರೈಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.
ಟಾಸ್ಕ್‌ಫೋರ್ಸ್ ಅನುಮತಿ ಅಗತ್ಯನೀರು ಪೂರೈಕೆಗಾಗಿ ಜಲಜೀವನ್ ಮಿಷನ್ ಯೋಜನೆಯಡಿ ಯಾವೇಲ್ಲ ಕಾಮಗಾರಿಗಳನ್ನು ನಿಯಮಾವಳಿ ರೀತ್ಯ ಕೈಗೊಳ್ಳಲು ಸಾಧ್ಯವಿರುತ್ತದೋ ಅಂತಹ ಕಾಮಗಾರಿಗಳನ್ನು ನೀರು ಮತ್ತು ನೈರ್ಮಲ್ಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯಡಿ ತೆಗೆದುಕೊಳ್ಳಬಾರದು. ಯಾವ ಗ್ರಾಮದಲ್ಲಿ ಖಾಸಗಿ ಕೊಳವೆ ಬಾವಿ ಮಾಲಿಕರು ನೀರು ಪೂರೈಸಲು ಮುಂದಾಗದಿದ್ದಲ್ಲಿ, ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುವಂತಹ ಅನಿವಾರ್ಯ ಸಂದರ್ಭದಲ್ಲಿ ಈ ಟಾಸ್ಕ್ ಪೋರ್ಸ್ ಸಮಿತಿಯ ಅನುಮೋದನೆ ಪಡೆದು ತುರ್ತು ಸಂದರ್ಭಗಳಲ್ಲಿ ಮಾತ್ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ತಿಳಿಸಿದರು.
ನೀರಿನ ತಾಣಗಳಲ್ಲಿ ಸ್ವಚ್ಛತೆ ಕಾಪಾಡಿಜಿಲ್ಲೆಯಲ್ಲಿ 945 ನೀರು ಪೂರೈಸುವ ನೀರಿನ ಟ್ಯಾಂಕ್ ಗಳು ಗ್ರಾಮಾಂತರ ಪ್ರದೇಶಗಳಲ್ಲಿವೆ. ಈ ನೀರು ಸಂಗ್ರಹಣ ತಾಣಗಳ ಸುತ್ತಮುತ್ತಲಲ್ಲಿ ನೀರು ಸೋರಿಕೆಯಾಗಿ ಕೀಟ ಜನ್ಯ ಕಾಯಿಲೆಗಳಿಗೆ ಹಾಗೂ ಅನೈರ್ಮಲ್ಯಕ್ಕೆ ಕಾರಣವಾಗಿ ಜನರ ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ 945 ನೀರು ಸಂಗ್ರಹಣ ಟ್ಯಾಂಕ್ ಬಳಿ ನೀರು ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.ಟ್ಯಾಂಕ್‌ಗಳ ಸುತ್ತಿಮುತ್ತ ನೀರು ನಿಲ್ಲದಂತೆ ಕ್ರಮವಹಿಸಬೇಕು. ಇದರಿಂದ ಡೆಂಘೀ, ಚಿಕುನ್ ಗುನ್ಯಾ ಸೇರಿದಂತೆ ಇನ್ನಿತರ ಕೀಟಜನ್ಯ ರೋಗಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು, ಕ್ರಮವಹಿಸುಂತೆ ಸೂಚಿಸಿದರು.ಅಂಗನವಾಡಿಗೆ ನೀರು ಸಂಪರ್ಕ
ಜಿಲ್ಲೆಯ 46 ಅಂಗನವಾಡಿಗಳಿಗೆ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿ ಇಲ್ಲ ಹಾಗೂ 171 ಅಂಗನವಾಡಿ ಕಟ್ಟಡಗಳಿಗೆ ನೀರು ಸಂಪರ್ಕವಿಲ್ಲದಿರುವುದು ಕಂಡುಬಂದಿದೆ. ಕೂಡಲೇ ಆ ಎಲ್ಲಾ ಅಂಗನವಾಡಿಗಳಿಗೆ ನೀರು ಪೂರೈಕೆ ಹಾಗೂ ಸೂಕ್ತ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲು ಕ್ರಮವಹಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಅತಿಕ್ ಪಾಷ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.