ಗ್ರಾಮದ ಅಭಿವೃದ್ಧಿಗಳಿಗಿಲ್ಲ ಅಧಿಕಾರಿ

| Published : Sep 10 2025, 01:05 AM IST

ಸಾರಾಂಶ

ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಡಿಜಿಲ್ಲೆ ಬೆಳಗಾವಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳು ಖಾಲಿಯಿರುವುದರಿಂದ ಗ್ರಾಮದ ಅಭಿವೃದ್ಧಿ ತೊಡಕಾಗಿದ್ದು, ಹಲವು ಸಮಸ್ಯೆಗಳು ಉದ್ಭವಿಸಿವೆ.

ಪ್ರಮೋದ ಗಡಕರ

ಕನ್ನಡ ಪ್ರಭ ವಾರ್ತೆ ಬೆಳಗಾವಿ

ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಡಿಜಿಲ್ಲೆ ಬೆಳಗಾವಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳು ಖಾಲಿಯಿರುವುದರಿಂದ ಗ್ರಾಮದ ಅಭಿವೃದ್ಧಿ ತೊಡಕಾಗಿದ್ದು, ಹಲವು ಸಮಸ್ಯೆಗಳು ಉದ್ಭವಿಸಿವೆ.

ಹಲವು ವರ್ಷಗಳಿಂದ ಖಾಲಿ:

ಅಕಾಲಿಕವಾಗಿ ಮರಣ ಹೊಂದಿರುವುದು, ವರ್ಗಾವಣೆ, ಸೇವಾ ನಿವೃತ್ತಿ ಸೇರಿದಂತೆ ಹಲವು ಕಾರಣಗಳಿಂದ ಪಿಡಿಒ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಉಳಿದಿವೆ. ಅವುಗಳನ್ನು ಇನ್ನೂ ತುಂಬುವ ಕೆಲಸ ಮಾತ್ರ ಆಗುತ್ತಿಲ್ಲ. ಇದರಿಂದಾಗಿ ಗ್ರಾಮಗಳಲ್ಲಿರುವ ಹಲವಾರು ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕ ಎದುರಾಗಿದೆ. ಮಾತ್ರವಲ್ಲ, ಗ್ರಾಮಸ್ಥರಿಗೂ ಇದು ಬಹಳ ಅನಾನುಕೂಲವಾಗಿರುವುದು ಮಾತ್ರ ಸುಳ್ಳಲ್ಲ.ಹುದ್ದೆಗಳ ಭರ್ತಿಗೆ ಆಗ್ರಹ:

ಬೆಳಗಾವಿ ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ 500 ಗ್ರಾಮ ಪಂಚಾಯತಿಗಳನ್ನು ಹೊಂದಿದೆ. ಈ ಪೈಕಿ ಹಲವು ಗ್ರಾಪಂಗಳಲ್ಲಿ ಪಿಡಿಒ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಬೇಕಿದೆ. ಜಿಲ್ಲೆಯಲ್ಲಿ 65 ಗ್ರಾಪಂಗಲ್ಲಿ ಹುದ್ದೆಗಳು ಖಾಲಿ ಉಳಿದಿವೆ. ಹಲವು ಗ್ರಾಮ ಪಂಚಾಯತಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿಡಿಒಗಳ ನಿಧನದಿಂದ ಹುದ್ದೆಗಳು ತೆರವಾಗಿವೆ. ಅಲ್ಲದೇ, ಕೆಲವು ಕಡೆಗಳಲ್ಲಿ ಪಿಡಿಒ ಹುದ್ದೆಗಳಲ್ಲಿ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಡಿಒ ಹುದ್ದೆಗಳ ನಿರ್ವಹಣೆಯನ್ನು ಗ್ರಾಪಂ ಕಾರ್ಯದರ್ಶಿಗಳೇ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಇತರೆ ಸಿಬ್ಬಂದಿಗೆ ಕೆಲಸದ ಭಾರವೂ ಹೆಚ್ಚಳವಾಗಿದೆ. ಇದು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ. ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಮರೀಚಿಕೆಯಾಗಿವೆ ಎಂಬುವುದು ಗ್ರಾಮಸ್ಥರ ಆರೋಪ. ಕೂಡಲೇ ಪಿಡಿಒಗಳ ಹುದ್ದೆಗಳನ್ನು ಭರ್ತಿ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಆಗ್ರಹವಾಗಿದೆ.ತಾಲೂಕುವಾರು ಖಾಲಿ ಹುದ್ದೆಗಳು

ಬೆಳಗಾವಿ - 2

ಅಥಣಿ-1

ಬೈಲಹೊಂಗಲ -3

ಚಿಕ್ಕೋಡಿ -9

ಗೋಕಾಕ -5

ಹುಕ್ಕೇರಿ 14

ಖಾನಾಪುರ -6

ಕಿತ್ತೂರು -2

ನಿಪ್ಪಾಣಿ -5

ರಾಮದುರ್ಗ-7

ರಾಯಬಾಗ -5

ಸವದತ್ತಿ- 4

ಒಟ್ಟು- 64 ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ತಾಲೂಕುಗಳಲ್ಲಿ ಪಿಡಿಒಗಳ ಕೊರತೆಯಿದೆ. ಹೀಗಾಗಿ, ಕೆಲವೊಂದು ಕಡೆಗಳಲ್ಲಿ ಪಿಡಿಒಗಳಲ್ಲಿ ಹೆಚ್ಚಿನ ಜವಾಬ್ದಾರಿ ಕೊಡಲಾಗಿದೆ. ಆದರೆ, ಈಗಾಗಲೇ ಕೌನ್ಸೆಲಿಂಗ್ ನಡೆದಿದೆ. ಅಲ್ಲದೇ, ಒಳಮೀಸಲಾತಿಯೂ ಆಗಿದೆ. ಶೀಘ್ರವೇ ಪಿಡಿಒಗಳ ನೇಮಕ್ಕೆ ಕ್ರಮ ಕೈಗೊಳ್ಳಲಾಗುವುದು.

-ರಾಹುಲ ಶಿಂಧೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.