ಸಾರಾಂಶ
ಉತ್ತಮ ಶಿಕ್ಷಕ ಪ್ರಶಸ್ತಿಗೆ ಖಾಸಗಿ ಶಿಕ್ಷಕರನ್ನೂ ಪರಿಗಣಿಸಿ । ವಿದ್ಯಾಸ್ಫೂರ್ತಿ ಸಂಸ್ಥೆಯಲ್ಲಿ ಶಿಕ್ಷಕ ದಿನಾಚರಣೆ ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಫಲಿತಾಂಶ ನೀಡುವಲ್ಲಿ, ಪಠ್ಯದ ವಿಚಾರದಲ್ಲಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳು ಕಡಿಮೆಯಿಲ್ಲದೇ ಪೈಪೋಟಿ ನೀಡುತ್ತಲೇ ಬರುತ್ತಿವೆ. ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುವ ವಿಚಾರದಲ್ಲಿ ಸರ್ಕಾರ ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳೆಂಬ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ಮುಂದಿನ ವರ್ಷದಿಂದ ಈ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಖಾಸಗಿ ಶಾಲಾ ಶಿಕ್ಷಕರನ್ನು ಪರಿಗಣಿಸಬೇಕು ಎಂದು ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದ ಕಾರ್ಯದರ್ಶಿ ಸುಧೀ ಸುರೇಶ್ ಸರ್ಕಾರವನ್ನು ಒತ್ತಾಯಿಸಿದರು,ಪಟ್ಟಣದ ವಿದ್ಯಾಸ್ಫೂರ್ತಿ ಇಂಟರ್ ನ್ಯಾಷನಲ್ ಆಕಾಡೆಮಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಕ್ಕೆ ಖಾಸಗಿ ಶಾಲೆಗಳಿಂದ ಅನುಕೂಲ ಬೇಕೇ ಹೊರತು ಶಿಕ್ಷಕರ ದಿನಾಚರಣೆಯ ದಿನವೂ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರನ್ನು ನೆನಪಿಸಿಕೊಳ್ಳುವುದಿಲ್ಲ. ಕಡಿಮೆ ಸಂಬಳ ಪಡೆದರೂ ಸರ್ಕಾರಿ ಶಾಲೆಗಳ ಶಿಕ್ಷಕರಿಗಿಂತ ಹೆಚ್ಚಿನ ಫಲಿತಾಂಶ ನೀಡುವಲ್ಲಿ ಮುಂದೆ ಇದ್ದಾರೆ. ಸರ್ಕಾರಿ ಶಾಲೆ ಖಾಸಗಿ ಶಾಲೆ ಎಂಬ ಮಲತಾಯಿ ಧೋರಣೆಯನ್ನು ಬಿಟ್ಟು ಇಬ್ಬರನ್ನೂ ಸಮಾನವಾಗಿ ಕಾಣಬೇಕಿದೆ ಎಂದರು.ಸಂಸ್ಥೆಯ ಸಂಸ್ಥಾಪಕ ಉಮಾ ಶಂಕರ್ ಮಾತನಾಡಿ, ಶಿಕ್ಷಣ ಇಂದು ಎಲ್ಲರಿಗೂ ಅತ್ಯಂತ ಅವಶ್ಯಕವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುತ್ತಾ ಬರುತ್ತಿದ್ದೇವೆ. ಈ ನಮ್ಮ ಸಾಧನೆಗೆ ನಮ್ಮ ಸಂಸ್ಥೆಯ ಶಿಕ್ಷಕರೇ ಆಧಾರ ಸ್ತಂಭವಾಗಿದ್ದಾರೆ ಎಂದರು.ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ನರಸೇಗೌಡ, ಹರ್ಷ, ನಿವೃತ್ತ ಕೆಎಎಸ್ ಅಧಿಕಾರಿ ಪುಟ್ಟಹಲಗಯ್ಯ, ಶಿಕ್ಷಣ ಸಂಸ್ಥೆಯ ಶಿವಕುಮಾರ್ ಮಾತನಾಡಿದರು.
ಪ್ರಶಸ್ತಿ ಪ್ರಧಾನ: ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ಖಾಸಗಿ ಶಾಲಾ ಶಿಕ್ಷಕರಿಗೆ ವಿದ್ಯಾಸ್ಫೂರ್ತಿ ಆಡಳಿತ ಮಂಡಳಿಯಿಂದ ವಿದ್ಯಾಸ್ಫೂರ್ತಿ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಹಿತಚಿಂತನ ಟ್ರಸ್ಟ್ ನ ಸಿ.ಎನ್.ರಾಮಸ್ವಾಮಿ, ಮಾರುತಿ ಶಿಕ್ಷಣ ಸಂಸ್ಥೆಯ ಕಾಂತರಾಜು, ಡಿಪಿಎಸ್ ಶಾಲೆಯ ಕಾರ್ಯದರ್ಶಿ ಜುಬೈರ್ ಅಹಮ್ಮದ್, ವಿದ್ಯಾಸ್ಫೂರ್ತಿ ಆಡಳಿತ ಮಂಡಳಿಯ ಸಿಇಒ ವರುಣ್ ಕುಮಾರ್, ಆಡಳಿತಾಧಿಕಾರಿ ರಾಮಚಂದ್ರ, ವ್ಯವಸ್ಥಾಪಕ ಸೋಮಶೇಖರ್, ಪ್ರಾಂಶುಪಾಲರಾದ ದಿಲೀಪ್ ಕುಮಾರ್, ವನಜಾಕ್ಷಿ ಸೇರಿ ಖಾಸಗಿ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.