ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡದೇ ಎಲ್ಲ ಸದಸ್ಯರಿಗೆ ಸಮಾನವಾಗಿ ಹಂಚಿಕೆ ಮಾಡಬೇಕು.
ಕುರುಗೋಡು: ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡದೇ ಎಲ್ಲ ಸದಸ್ಯರಿಗೆ ಸಮಾನವಾಗಿ ಹಂಚಿಕೆ ಮಾಡಬೇಕು. ಸದಸ್ಯರು ವಾರ್ಡ್‌ಗಳಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಮಸ್ಯೆಯಾಗುತ್ತದೆ ಎಂದು ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.ಕೆಲವು ವಾರ್ಡ್‌ಗಳಿಗೆ ಪುರಸಭೆ ಸರಬರಾಜು ಮಾಡುವ ನೀರು ಸಮರ್ಪಕವಾಗಿ ತಲುಪುತ್ತಿಲ್ಲ. ಎಲ್ಲ ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರು ಸರಬರಾಜುಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸದಸ್ಯ ನರಸಪ್ಪ ಯಾದವ್ ಒತ್ತಾಯಿಸಿದರು.
೨ನೇ ವಾರ್ಡ್‌ಗೆ ಕಲುಷಿತ ನೀರು ಸರಬರಾಜು ಆಗುತ್ತಿದೆ. ವೃದ್ಧರು, ಚಿಕ್ಕಮಕ್ಕಳು ಸೇವಿಸಿ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಯಾರು ಜವಾಬ್ದಾರರು ಎಂದು ಸದಸ್ಯೆ ಶಾಂತಮ್ಮ ನೀರಿನ ಸಮಸ್ಯೆಗೆ ಧನಿಗೂಡಿಸಿದರು.ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಪ್ರತಿಕ್ರಿಯಿಸಿ, ಬೇಸಿಗೆಯಲ್ಲಿ ಕಾಲುವೆ ನೀರು ದೊರೆಯದ ಪರಿಣಾಮ ಪೂರ್ಣ ಪ್ರಮಾಣದಲ್ಲಿ ಕೆರೆ ತುಂಬಿಸಲು ಸಾಧ್ಯವಾಗಲಿಲ್ಲ. ಕೆರೆ ತುಂಬಿದರೂ ಕೇವಲ ೭೫ ದಿನ ಮಾತ್ರ ನೀರು ಸರಬರಾಜು ಮಾಡಲು ಸಾಧ್ಯ. ಇಂದಿನ ಜನಸಂಖ್ಯೆಗೆ ಇರುವ ಕೆರೆಯ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಕೆರೆಯ ಅಗತ್ಯವಿದೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ ಎಂದರು.
ಮಳೆ ಬಂದರೆ ಚರಂಡಿ ತುಂಬಿ ಕಲುಷಿತ ನೀರು ಮನೆಗಳಿಗೆ ನುಗ್ಗಿತ್ತಿವೆ. ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಎಂದು ಸದಸ್ಯೆ ಕೆ.ಸಿ. ಲಲಿತಮ್ಮ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.ಪುರಸಭೆ ಅಧ್ಯಕ್ಷ ಜಿ.ಮಂಜುನಾಥ, ಉಪಾಧ್ಯಕ್ಷೆ ನಾಗವೇಣಿ, ಸದಸ್ಯರು, ಸಿಬ್ಬಂದಿ ಇದ್ದರು.
ಕುರುಗೋಡು ಪಟ್ಟಣದ ಪುರಸಭೆಯಲ್ಲಿ ಸಾಮಾನ್ಯ ಸಭೆ ನಡೆಯಿತು.