ನಗರೋತ್ಥಾನ ಯೋಜನೆಯಡಿ ಒಂದೇ ಹಂತದಲ್ಲಿ ತಲಾ ₹೨-೪ಕೊಟಿ ಅನುದಾನ ಒದಗಿಸಿ ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಲಾಗುತ್ತದೆ
ಹಗರಿಬೊಮ್ಮನಹಳ್ಳಿ: ತಾರತಮ್ಯ ಮಾಡದೇ ಪುರಸಭೆಯ ಎಲ್ಲ ವಾರ್ಡಗಳಿಗೆ ನಗರೋತ್ಥಾನ ಯೋಜನೆಯಡಿ ಒಂದೇ ಹಂತದಲ್ಲಿ ತಲಾ ₹೨-೪ಕೊಟಿ ಅನುದಾನ ಒದಗಿಸಿ ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದು ಶಾಸಕ ಕೆ.ನೇಮರಾಜ್ ನಾಯ್ಕ್ ತಿಳಿಸಿದರು.
ಪಟ್ಟಣದ ವಿಜಯನಗರ ಮಾರುಕಟ್ಟೆಯಲ್ಲಿ ಸೋಮವಾರ ಒಂದು ಕೋಟಿ ರು. ಅನುದಾನದ ತರಕಾರಿ ಸಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಅನುದಾನ ಒದಗಿಸುವ ಕುರಿತು ಗೊಂದಲಗಳಿದ್ದವು. ನಾನು ಶಾಸಕನಾಗುತ್ತಿದ್ದಂತೆಯೇ ಗೊಂದಲಗಳನ್ನು ನಿವಾರಿಸಿ ಪಟ್ಟಣದ ಪುರಸಭೆಯ ನೂತನ ಕಟ್ಟಡಕ್ಕೆ ₹೪ ಕೋಟಿ, ಇಲ್ಲಿನ ಸಂತೆ ಮಾರುಕಟ್ಟೆಯ ಅಭಿವೃದ್ಧಿ ಕಾಮಗಾರಿಗಳಿಗೆ ₹೧ ಕೋಟಿ ಮತ್ತು ಮರಿಯಮ್ಮನಹಳ್ಳಿ ಪಂಚಾಯಿತಿ ಕಟ್ಟಡಕ್ಕೆ ₹೨ಕೋಟಿ ಅನುದಾನ ಒದಗಿಸಿ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ವಿವರಿಸಿದರು.ಅಭಿವೃದ್ಧಿ ಕಾಮಗಾರಿಗಳಿಗೆ ತಾರತಮ್ಯ ಮಾಡಬಾರದು ಎಂಬ ಕಾರಣಕ್ಕೆ ಮರಿಯಮ್ಮನಹಳ್ಳಿಯ ೧೮ ಮತ್ತು ಕೊಟ್ಟೂರಿನ ೨೦ ವಾರ್ಡಗಳಿಗೂ ಒಂದೇ ಹಂತದಲ್ಲಿ ತಲಾ ₹೨ ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಗಿಮಾವಿನಹಳ್ಳಿ ರಸ್ತೆಗೆ ಅಭಿವೃದ್ಧಿಗೆ ₹೮ ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ. ಅಭಿವೃದ್ಧಿಯಲ್ಲಿ ರಾಜಕೀಯ ಯಾವತ್ತೂ ಮಾಡುವುದಿಲ್ಲ; ಎಲ್ಲರ ಸಹಕಾರ ಕೋರುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪುರಸಭೆ ಸದಸ್ಯ ದೀಪಕ್ ಕಠಾರೆ ಮುಕ್ತಿಧಾಮ ನಿರ್ಮಾಣ ಕುರಿತು ಶಾಸಕರ ಗಮನ ಸೆಳೆದಾಗ, ಈ ವರ್ಷದ ಜೂನ್‌ನಲ್ಲಿ ಅನುದಾನ ಒದಗಿಸಿ ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು. ಇದಕ್ಕೂ ಮುನ್ನ ಶಾಸಕರು ₹೪ ಕೋಟಿ ಅನುದಾನದ ಪುರಸಭೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನಡೆಸಿದರು.ಪುರಸಭೆ ಅಧ್ಯಕ್ಷ ಮರಿರಾಮಪ್ಪ ಮಾತನಾಡಿ, ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರದ ಅಗತ್ಯತೆ ಕುರಿತು ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಈ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಸಾನಿಧ್ಯವನ್ನು ಹಾಲಸಿದ್ದೇಶ್ವರ ಸ್ವಾಮೀಜಿ, ಚರಂತೇಶ್ವರ ಸ್ವಾಮೀಜಿ ವಹಿಸಿದ್ದರು.
ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ, ಸದಸ್ಯರಾದ ನಾಗರಾಜ ಜನ್ನು, ಗಣೇಶನಾಯ್ಕ್, ಅಂಬಳಿ ಮಂಗಳ, ಕೆ.ರೇಷ್ಮಾಬಾನು, ಬಿ.ಗಂಗಾಧರ, ರಾಜೇಶ ಬ್ಯಾಡ್ಗಿ, ನವೀನ್‌ಕುಮಾರ, ಅಜೀಜುಲ್ಲಾ, ಈ.ಮಲ್ಲೇಶ್ವರಿ, ಜೋಗಿ ಹನುಮಂತಪ್ಪ, ಮಂಜುಳಾ ಕೃಷ್ಣನಾಯ್ಕ್, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಚಿತವಾಡಗಿ ಪ್ರಕಾಶ, ಎಚ್.ಎಂ.ವಿಜಯಕುಮಾರ, ಐನಳ್ಳಿ ಶೇಖರ್, ಬಡಿಗೇರ್ ಬಸವರಾಜ, ಹೋಟಲ್ ಸಿದ್ದರಾಜು, ಸಾಲ್ಮನಿ ನಾಗರಾಜ ಮತ್ತಿತರರು ಇದ್ದರು.