No discrimination in drought declaration: Former Minister Raju Gowda
ಕನ್ನಡಪ್ರಭ ವಾರ್ತೆ ಹುಣಸಗಿ
ರಾಜ್ಯದಲ್ಲಿ ಮುಂಗಾರು ಮಳೆ ವಿಫಲವಾದ ಹಿನ್ನೆಲೆ, ಬಹುತೇಕ ಜಿಲ್ಲೆಗಳಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಗುರುವಾರ ಕೆಲವು ಜಿಲ್ಲೆಗಳ ಬರಗಾಲವೆಂದು ಘೋಷಣೆ ಮಾಡಿದೆ. ಆದರೆ, ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕು ಮಾತ್ರ ಬರಗಾಲ ಎಂದು ಘೋಷಣೆ ಮಾಡಿದ್ದು, ಸುರಪುರ, ಹುಣಸಗಿ, ವಡಗೇರಾ ಮತ್ತು ಗುರುಮಠಕಲ್ ತಾಲೂಕುಗಳನ್ನು ಬರಗಾಲ ಘೋಷಣೆಯಿಂದ ಕೈಬಿಡುವ ಮೂಲಕ ತಾರತಮ್ಯ ಎಸಗಿದೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ನರಸಿಂಹ ನಾಯಕ್ (ರಾಜೂಗೌಡ) ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು "ಕನ್ನಡಪ್ರಭ "ದೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಯಾದಗಿರಿ ಜಿಲ್ಲೆಯ ರೈತರಿಗೆ ಮಾಡಿರುವ ಘೋರ ಅನ್ಯಾಯ. ಯಾದಗಿರಿ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ, ಇದರಿಂದಾಗಿ ಬಹುತೇಕ ಜಮೀನುಗಳಲ್ಲಿ ಬಿತ್ತನೆ ಕಾರ್ಯ ನಡೆದಿರುವದಿಲ್ಲ. ಮಳೆಯಾಗದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಕೂಡಾ ಬೆಳವಣಿಗೆಯಾಗಿಲ್ಲ. ಕೃಷ್ಣಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿರುವ ಸಾವಿರಾರು ಎಕರೆ ಜಮೀನುಗಳು ಒಣ ಬೇಸಾಯ ಭೂಮಿಗಳಾಗಿದ್ದು, ರೈತರು ಮಳೆಯನ್ನು ನಂಬಿಕೊಂಡಿದ್ದಾರೆ.
ಆದರೆ, ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಶಹಾಪೂರ ತಾಲೂಕು ಮಾತ್ರ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿರುವದು ಸಮಂಜಸವಲ್ಲ. ತಕ್ಷಣ ಮುಖ್ಯ ಮಂತ್ರಿಗಳು ಮರುಪರಿಶೀಲನೆ ನಡೆಸಿ ವಾಸ್ತವ ಸ್ಥಿತಿಯ ಆಧಾರದ ಮೇಲೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಗಾಲ ತಾಲೂಕುಗಳೆಂದು ಘೋಷಣೆ ಮಾಡಿ, ರೈತರಿಗೆ ಸೂಕ್ತ ಪರಿಹಾರ ಹಾಗೂ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ.-
27ವೈಡಿಆರ್9 : ಮಾಜಿ ಸಚಿವ ರಾಜೂಗೌಡ