ಕೆ.ಆರ್.ಪೇಟೆ ತಾಲೂಕಿನ ಐಚನಹಳ್ಳಿ ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ಮುಗಿದಿದೆ. 2 ಮತ್ತು 3 ನೇ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕು. ಈ ಮೂಲಕ ನಮ್ಮ ಕೆರೆ ಕಟ್ಟೆಗಳು ತುಂಬಿದರೆ ಅಂತರ್ಜಲ ವೃದ್ಧಿಯಾಗಿ ಜನ ಜಾನುವಾರುಗಳ ಕುಡಿಯುವ ನೀರಿನ ಬವಣೆ ತಪ್ಪುತ್ತದೆ. ಬೋರ್‌ವೆಲ್ ಗಳಲ್ಲಿ ನೀರು ಹೆಚ್ಚಾಗಿ ರೈತರ ಕೃಷಿಗೂ ಸಹಕಾರಿಯಾಗಲಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಕಡಿಮೆ ಅನುದಾನ ದೊರಕುತ್ತಿದೆ. ಅನುದಾನ ಹಂಚಿಕೆಯಲ್ಲಿ ಪಕ್ಷಗಳಲ್ಲಿನ ಶಾಸಕರ ನಡುವೆ ತಾರತಮ್ಯ ಮಾಡಬಾರದು ಶಾಸಕ ಎಚ್.ಟಿ.ಮಂಜು ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ರಹಿಸಿದರು.ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ಮಾತನಾಡಿ, ಸರ್ಕಾರ ಸ್ವ-ಪಕ್ಷದ ಶಾಸಕರ ಕ್ಷೇತ್ರಗಳಿಗೆ ನೀಡುವ ಅನುದಾನದಂತೆ ವಿಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿ ಸಿಎಂ ಆಗಿದ್ದಾಗ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸಿ ಜನರ ಮನೆಬಾಗಿಲಿಗೆ ಆಡಳಿತ ಯಂತ್ರವನ್ನು ತೆಗೆದುಕೊಂಡು ಹೋಗುತ್ತಿದ್ದರು. ಆನಂತ ಬಿ.ಎಸ್.ಯಡಿಯೂರಪ್ಪ ಹಾಗೂ ಬಸರಾಜ ಬೊಮ್ಮಾಯಿ ಅವರು ಜನಸ್ಪಂದನಾ ಕಾರ್ಯಕ್ರಮಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡಿದ್ದರು ಎಂದರು.ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಪ್ರಜಾಸೇವೆ ಇಲಾಖೆಯನ್ನೇ ರೂಪಿಸಿದೆ. ಇದರಿಂದ ಕಡತಗಳ ವಿಲೇವಾರಿ ಪ್ರಕ್ರಿಯೆಗೆ ತ್ವರಿತ ಚಾಲನೆ ದೊರಕಿ ಸರ್ಕಾರಿ ಆಡಳಿತ ಯಂತ್ರ ಚುರುಕುಗೊಳ್ಳಲಿದೆ. ಇದೊಂದು ಒಳ್ಳೆಯ ಕಾರ್ಯಕ್ರಮ ಎಂದು ಶ್ಲಾಘಿಸಿದರು.
ತಾಲೂಕಿನ ಐಚನಹಳ್ಳಿ ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ಮುಗಿದಿದೆ. 2 ಮತ್ತು 3 ನೇ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕು. ಈ ಮೂಲಕ ನಮ್ಮ ಕೆರೆ ಕಟ್ಟೆಗಳು ತುಂಬಿದರೆ ಅಂತರ್ಜಲ ವೃದ್ಧಿಯಾಗಿ ಜನ ಜಾನುವಾರುಗಳ ಕುಡಿಯುವ ನೀರಿನ ಬವಣೆ ತಪ್ಪುತ್ತದೆ. ಬೋರ್‌ವೆಲ್ ಗಳಲ್ಲಿ ನೀರು ಹೆಚ್ಚಾಗಿ ರೈತರ ಕೃಷಿಗೂ ಸಹಕಾರಿಯಾಗಲಿದೆ ಎಂದರು.ಈ ಯೋಜನೆಗೆ ಹೆಚ್ಚುವರಿ 53 ಕೋಟಿ ರು. ಹಣ ಬೇಕು. ಇದರಿಂದ ಹೆಚ್ಚುವರಿ 79 ಕೆರೆಗಳು ಹೇಮೆಯ ನೀರಿನಿಂದ ತುಂಬಲಿವೆ. ಇದಕ್ಕೆ ಸಚಿವ ಸಂಪುಟದಲ್ಲಿ ಅಗತ್ಯ ಅನುಮೋದನೆ ದೊರಕಿಸಿಕೊಡಬೇಕು. ಗೂಡೇಹೊಸಹಳ್ಳಿ ಏತ ನೀರಾವರಿಗೂ ಹೆಚ್ಚುವರಿ 39 ಕೆರೆಗಳ ಸೇರ್ಪಡೆ ಮಾಡಿ ನಮ್ಮ ತಾಲೂಕಿನ ಈ ಎರಡೂ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿಕೊಡಬೇಕೆಂದು ಆಗ್ರಹಿಸಿದರು.
ರೈತರಿಗೆ ಅಗತ್ಯ ಭೂ-ಪರಿಹಾರ ನೀಡದೆ ತಾಲೂಕಿನ ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ ಮಾಡಲಾಗಿದೆ. ಕಚೇರಿ ಜಪ್ತಿಯಾದರೂ ನೀರಾವರಿ ಇಲಾಖೆ ರೈತರಿಗೆ ಅಗತ್ಯ ಭೂ ಪರಿಹಾರ ನೀಡಲು ಅಗತ್ಯ ಕ್ರಮವಹಿಸಿಲ್ಲ. ಭೂ ಪರಿಹಾರ ನೀಡಿಕೆ ಕುರಿತು ಅಗತ್ಯ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ನ್ಯಾಯಾಲಯ ನೀರಾವರಿ ಇಲಾಖೆ ವ್ಯವಹಾರಗಳನ್ನೆ ಸ್ಥಗಿತಗೊಳಿಸುವ ಸಂಭವವಿದೆ. ಇದರಿಂದ ಮುಂದಿನ ದಿನಗಳಲ್ಲಿ ಇಲಾಖೆಯ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಅಡಚಣೆಯಾಗಲಿದೆ ಎಂದು ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಶೋಭಾರಾಣಿ, ಡಿವೈಎಸ್ಪಿ ಚಲುವರಾಜು, ತಹಸೀಲ್ದಾರ್ ಶ್ರೇಯಸ್, ಇ.ಓ ಕೆ.ಸುಷ್ಮಾ, ಮುಖಂಡರಾದ ಬಿ.ಎಲ್.ದೇವರಾಜು, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಟಿ.ಬಲದೇವ್ ಸೇರಿದಂತೆ ಹಲವರಿದ್ದರು.
ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಜನ ತಮ್ಮ ತಮ್ಮ ಸಮಸ್ಯೆಗಳನ್ನು ಕುರಿತ ಅರ್ಜಿಗಳನ್ನು ನೀಡಿ ಸಮಸ್ಯೆಗಳನ್ನು ಹೇಳಿಕೊಂಡರು. ಗ್ಯಾರಂಟಿ ಯೋಜನೆಗಳ ಕೆಲವು ಫಲಾನುಭವಿಗಳಿಗೆ ಅರ್ಹತಾ ಪ್ರಮಾಣ ಪತ್ರಗಳನ್ನು ಸಾಂಕೇತಿಕವಾಗಿ ಸಚಿವರು, ಶಾಸಕರು, ವಿತರಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 270 ಅರ್ಜಿಗಳನ್ನು ಸ್ವೀಕರಿಸಿಲಾಯಿತು. ಪಾಲಿಟೆಕ್ನಿಕ್ ಹಿಂಭಾಗದಲ್ಲಿ ಕೃಷಿ ಜಮೀನು ಹೊಂದಿರುವ ರೈತರು ದಲಿತ ಮುಖಂಡ ಡಿ.ಪ್ರೇಂಕುಮಾರ್ ನೇತೃತ್ವದಲ್ಲಿ ಸಚಿವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.