ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಪುಸ್ತಕದ ಪ್ರೀತಿ ಕಡಿಮೆಯಾಗುತ್ತಿದ್ದು, ಕನ್ನಡ ಸಾಹಿತ್ಯದ ಲೇಖಕರಿಗೆ ಸರ್ಕಾರ ಕಡೆಯಿಂದ ಸರಿಯಾದ ಪ್ರೋತ್ಸಾಹ ದೊರಕುತ್ತಿಲ್ಲ ಎಂದು ಸಮ್ಮೇಳನಾಧ್ಯಕ್ಷ ಸಂಶೋಧಕ, ಆರ್ಯವೇದ ವೈದ್ಯ ಡಾ. ಬಿ. ನಂಜುಂಡಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಪುಸ್ತಕದ ಪ್ರೀತಿ ಕಡಿಮೆಯಾಗುತ್ತಿದ್ದು, ಕನ್ನಡ ಸಾಹಿತ್ಯದ ಲೇಖಕರಿಗೆ ಸರ್ಕಾರ ಕಡೆಯಿಂದ ಸರಿಯಾದ ಪ್ರೋತ್ಸಾಹ ದೊರಕುತ್ತಿಲ್ಲ ಎಂದು ಸಮ್ಮೇಳನಾಧ್ಯಕ್ಷ ಸಂಶೋಧಕ, ಆರ್ಯವೇದ ವೈದ್ಯ ಡಾ. ಬಿ. ನಂಜುಂಡಸ್ವಾಮಿ ಹೇಳಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಸಾಹಿತ್ಯ ಕೃತಿಗಳು ಹೆಚ್ಚೆಚ್ಚು ಪ್ರಕಟವಾಗಿ ಕನ್ನಡ ಭಾಷೆ ಬೆಳೆಯಲು ಸಹಕಾರಿಯಾಗುತ್ತದೆ. ಸರ್ಕಾರ ಇತ್ತ ಕಡೆ ಶೀಘ್ರ ಗಮನಹರಿಸಿ ಪುಸ್ತಕೋದ್ಯಮವನ್ನು ರಕ್ಷಿಸಬೇಕಾಗಿದೆ. ಇತ್ತಿಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿಯ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವ ಹಂತವನ್ನು ತಲುಪಿದೆ. ಇದಕ್ಕೆ ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನ ಪ್ರೋತ್ಸಾಹಿಸುತ್ತಿರುವುದೇ ಕಾರಣವಾಗಿದೆ. ಹೀಗಾದಾಗ ಕನ್ನಡ ಎಲ್ಲಿಂದ ಉಳಿಯಬೇಕು. ಗಾಮಾಂತರ ಪ್ರದೇಶಗಳಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸಬೇಕು. ಶಾಲಾ ಶಿಕ್ಷಕರನ್ನು ನೇಮಿಸಿ ಗುಣಭರಿತ ಮತ್ತು ಪಠ್ಯಗಳನ್ನು ಅಳವಡಿಸಬೇಕು.ಕರ್ನಾಟಕದ ಹಲವಾರು ತಾಲೂಕುಗಳಂತೆ ಗುಬ್ಬಿಯನ್ನು ಸಾಧಾರಣವಾದ ತಾಲೂಕು ಎಂದು ಪರಿಗಣಿಸಬಾರದು. ಕನ್ನಡ ಸಾಹಿತ್ಯದ ಮೊದಲ ಕ್ರಾಂತಿ ಕಲ್ಯಾಣದಲ್ಲಾದರೆ ಎರಡನೇ ಕ್ರಾಂತಿ ಗುಬ್ಬಿಯಲ್ಲಿ ಸಂಭವಿಸಿದೆ. ಅದೇ ರೀತಿ ವೀರಶೈವ ಲಿಂಗಾಯಿತರ ಮೊದಲ ಕ್ರಾಂತಿ ಕಲ್ಯಾಣದಲ್ಲಾದರೆ ಅದರ ಪುನರುಜ್ಜೀವನ ಗುಬ್ಬಿ ತಾಲೂಕಿನಲ್ಲಿ ಸಂಭವಿಸಿರುವುದು ಚಾರಿತ್ರಿಕ ದಾಖಲೆಗಳು ತಿಳಿಸುತ್ತವೆ ಎಂದು ತಿಳಿಸಿದರು.
ಕೋಡಿಹಳ್ಳಿ ಮಠದ ಮಠಾಧ್ಯಕ್ಷರಾದ ಬಸವಬೃಂಗೇಶ್ವರ ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಈಗಾಗಲೇ ನಮ್ಮ ಸಾಹಿತಿಗಳ ಬರವಣಿಗೆ ತಿರುಚುವ ಕೆಲಸ ನಡೆದಿದೆ. ಘೋರ ಸನ್ನಿವೇಶ ಎದುರಿಸುವ ಮುನ್ನ ನಮ್ಮ ಕನ್ನಡ ಸಾಹಿತ್ಯ ಉಳಿಸುವ ಕೆಲಸ ನಿರಂತರ ಮಾಡಬೇಕಿದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕೀರ್ತನಾಕಾರ ಲಕ್ಷ್ಮಣ್ ದಾಸ್ ಮಾತನಾಡಿ, ಹದಿನೆಂಟು ಕೋಮಿನ ಗುಬ್ಬಿಯಪ್ಪ ಇತಿಹಾಸಕ್ಕೆ ಸಾಕ್ಷಿ ಆಧಾರ ಸಹಿತ ಕೃತಿ ಬರೆದ ನಂಜುಂಡಸ್ವಾಮಿ ಸಮ್ಮೇಳನಕ್ಕೆ ಅರ್ಥ ತಂದಿದ್ದಾರೆ. ಗುಬ್ಬಿಯ ಮಹನೀಯರಲ್ಲಿ ಗುಬ್ಬಿ ವೀರಣ್ಣ ಸಾಲುಮರದ ತಿಮ್ಮಕ್ಕ,ನಿಟ್ಟೂರು ಶ್ರೀನಿವಾಸರಾವ್, ಹೊಸಕೆರೆ ಚಿದಂಬರಯ್ಯ, ಹಾಗಲವಾಡಿ ಜುಂಜಪ್ಪ, ಚಿ.ಉದಯಶಂಕರ್, ಗಂಗಾಧರಯ್ಯ, ಹೀಗೆ ಅನೇಕರನ್ನು ಸ್ಮರಿಸುವ ಕರ್ತವ್ಯ ಎಲ್ಲರ ಮೇಲಿದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಮಾತನಾಡಿ, ವಿಶೇಷವಾಗಿ ವಿದ್ಯಾರ್ಥಿಗಳು ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚು ಭಾಗವಹಿಸಬೇಕು ಎಂಬುದು ಕನ್ನಡ ಸಾಹಿತ್ಯ ಪರಿಷತ್ ಆಶಯ. ಮಕ್ಕಳಿಗೆ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿದರೆ ಮುಂದಿನ ಪೀಳಿಗೆಯಲ್ಲಿ ಸಾಹಿತ್ಯ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಧ್ವಜ ಹಸ್ತಾಂತರ ಮಾಡಿದ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಚಿಕ್ಕಣ್ಣ ಯಣ್ಣೆಕಟ್ಟೆ ಮಾತನಾಡಿದರು. ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಬಿಡುಗಡೆ ಗೊಳಿಸಿದರು.ಯುವ ಸಾಹಿತಿಗಳಾದ ಅರುಣ್ ಕುಮಾರ್ ಅವರ ಸ್ಫೂರ್ತಿ ಕವನ ಸಂಕಲನ, ಗೀತಾ ಕಲ್ಲೂರು ಅವರ ಭಾವ ಸಿಂಚನ ಹಾಗೂ ಅಂಜನ್ ಕುಮಾರ್ ಅವರ ಕಾಲ್ಗೆಜ್ಜೆ ಪುಸ್ತಕವನ್ನು ಉಪನ್ಯಾಸಕ ಡಾ.ಗೋವಿಂದರಾಜು ಎಂ.ಕಲ್ಲೂರು ಬಿಡುಗಡೆ ಗೊಳಿಸಿದರು. ವೇದಿಕೆಯಲ್ಲಿ ತಹಶೀಲ್ದಾರ್ ಆರತಿ.ಬಿ, ಬಿಇಓ ನಟರಾಜ್, ತಾಪಂ ಇಓ ರಂಗನಾಥ್, ಸಾಹಿತಿ ಎಚ್.ಕೆ.ನರಸಿಂಹಮೂರ್ತಿ, ಕಸಾಪ ತಾಲೂಕು ಅಧ್ಯಕ್ಷ ಯತೀಶ್, ಜಿ.ಎಚ್.ಜಗನ್ನಾಥ್, ಮಹಮ್ಮದ್ ಸಾದಿಕ್, ಆಯಿಷಾ ತಾಸೀನ್, ಸವಿತಾ.ಎಸ್.ಗೌಡ, ಜಿ.ಸಿ.ಕೃಷ್ಣಮೂರ್ತಿ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಬೆಣಚಿಗೆರೆ ರುದ್ರೇಶ್, ಜಿ.ವಿ.ಮಂಜುನಾಥ್, ಯಲ್ಲಪ್ಪ, ಅಪ್ಪಾಜಿ, ಚೇಳೂರು ಶಿವನಂಜಪ್ಪ, ಗುಬ್ಬಚ್ಚಿ ಸತೀಶ್, ಕಸಾಪ ಪದಾಧಿಕಾರಿಗಳಾದ ರಾಜೇಶ್ ಗುಬ್ಬಿ, ಸಿ.ಆರ್.ಶಂಕರ್ ಕುಮಾರ್, ಸಲೀಂಪಾಷ, ಜಯಣ್ಣ, ಸುಬ್ರಹ್ಮಣ್ಯ, ಕೆ.ವಿ.ದಯಾನಂದ್, ರವೀಶ್, ರಮೇಶ್ ಗೌಡ, ಕೋಟೆ ರಂಗಸ್ವಾಮಿ ಇತರರು ಇದ್ದರು.
ಸಮ್ಮೇಳನ ಅಧ್ಯಕ್ಷರನ್ನು ಬೆಳ್ಳಿ ರಥದಲ್ಲಿ ಕೂರಿಸಿ, ವಿವಿಧ ಜಾನಪದ ಕಲಾ ತಂಡಗಳಾದ ಡೊಳ್ಳುಕುಣಿತ, ನಂದಿ ಧ್ವಜ, ವೀರಗಾಸೆ ಲಿಂಗದವಿರರ ಕುಣಿತ, ಕುಂಭ ಕಹಳೆ, ಕೋಲಾಟ ಗೊರವನು ಕುಣಿತ, ಅರೆ ವಾದ್ಯ, ಚಿಟ್ಟಿಮೇಳ, ಸೋಮನ ಕುಣಿತದೊಂದಿಗೆ ಗೋಸಲ ಚನ್ನಬಸವೇಶ್ವರ ಸ್ವಾಮಿಯಿಂದ ಜೂನಿಯರ್ ಕಾಲೇಜು ಮೈದಾನದವರೆಗೆ ಮೆರವಣಿಗೆ ಮಾಡಲಾಯಿತು .ಸಮ್ಮೇಳನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಎಚ್.ಕೆ.ನರಸಿಂಹಮೂರ್ತಿ, ಅಧ್ಯಕ್ಷ ಎಚ್. ಸಿ.ಯತೀಶ್, ತಹಸೀಲ್ದಾರ್ ಬಿ.ಆರತಿ, ಸಿಪಿಐ ರಾಘವೇಂದ್ರ, ಶಿಕ್ಷಣಾಧಿಕಾರಿ ಎಂ.ಎಸ್.ನಟರಾಜು,, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ತಾಲೂಕು ಪಂಚಾಯತಿ ಇಒ ಜೆ.ಬಿ.ರಂಗನಾಥ್, ವೆಂಕಟೇಗೌಡ, ಸತೀಶ್, ಶಾಂತರಾಜು, ಡಾ. ಮೂರ್ತಿ ತಿಮ್ಮನಹಳ್ಳಿ, ಕಳ್ಳಿಪಾಳ್ಯ ಲೋಕೇಶ್, ಬಿ.ಎಸ್.ನಾಗರಾಜು, ಜಗನ್ನಾಥ್, ಬೆಣಚಿಗೆರೆ ರುದ್ರೇಶ್, ಅಪ್ಪಾಜಿ. ಸಿ.ಆರ್.ಶಂಕರ್ ಕುಮಾರ್, ಚೇಳೂರು ಶಿವನಂಜಯ್ಯ, ಡಾ.ಜಿ.ಬಿ.ಮಲ್ಲಪ್ಪ, ರಾಜೇಶ್ ಗುಬ್ಬಿ, ಆಯಿಷಾ ತಾಸೀನ್, ಹಾಗೂ ಸದಸ್ಯರುಗಳು, ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು, ಮತ್ತಿತರರು ಇದ್ದರು.