ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಮಹಾನಗರ ಪಾಲಿಕೆಯ ಪ್ರಸ್ತುತ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರ ಚಿಂತನೆ ಮಾಡಿರುವುದು ಅನುಷ್ಠಾನಕ್ಕೆ ಬಂದರೆ ನಗರ, ಗ್ರಾಮಗಳ ಜನರ ಜನಜೀವನ ದುಸ್ತರವಾಗಲಿರುವುದರಿಂದ ಪ್ರಸ್ತಾವನೆ ಕೈಬಿಡಬೇಕೆಂದು ಸರ್ಕಾರಕ್ಕೆ ಬೃಹತ್ ತುಮಕೂರು ಮಹಾನಗರಪಾಲಿಕೆ ವಿಸ್ತರಣೆ ವಿರೋಧಿ ಹೋರಾಟ ಸಮಿತಿ ಒತ್ತಾಯಿಸಿದೆ.ನಗರದ ಮುರುಘ ರಾಜೇಂದ್ರ ಸಭಾ ಭವನದಲ್ಲಿ ಸಮಿತಿಯ ಪ್ರಮುಖ ಸಂಚಾಲಕ ಹಾಗೂ ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶರವರ ಅಧ್ಯಕ್ಷತೆಯಲ್ಲಿ ಪ್ರಥಮ ಸಭೆ ಸೇರಿ, ತುಮಕೂರಿನ ಸುತ್ತಮುತ್ತಲಿನ ಸುಮಾರು 14 ಪಂಚಾಯತಿಗಳ 54 ಹಳ್ಳಿಗಳನ್ನು ಸೇರಿಸಿ ಬೃಹತ್ ತುಮಕೂರು ಮಹಾನಗರ ಪಾಲಿಕೆ ಮಾಡುವ ಸರ್ಕಾರದ ನಡೆವಳಿಕೆ, ಪ್ರಸ್ತಾವನೆಯನ್ನು ಬಲವಾಗಿ ವಿರೋಧಿಸಿ ಖಂಡನಾ ನಿರ್ಣಯ ಅಂಗೀಕರಿಸಿ, ಮುಂದಿನ ಹೋರಾಟದ ಸ್ವರೂಪದ ಬಗ್ಗೆ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿ ಪ್ರಮುಖ ಸಂಚಾಲಕ ಕೆ.ಪಿ.ಮಹೇಶ, ಹಾಲಿ ಇರುವ ತುಮಕೂರು ಮಹಾನಗರಪಾಲಿಕೆ 1947 ರಲ್ಲಿ ಸ್ವತಂತ್ರ ಬಂದಾಗ ಪುರಸಭೆಯಾಗಿದ್ದು, ನಂತರ 1975ರಲ್ಲಿ ನಗರಸಭಾ ಪರಿಷತ್ತಿಗೆ ಬದಲಾವಣೆಗೊಂಡು, ತದ ನಂತರ 1995 ರಲ್ಲಿ ತುಮಕೂರಿನ ಸುತ್ತಮುತ್ತಲಿನ ಕೆಲವು ಪಂಚಾಯಿತಿಗಳ ಆಯ್ದ 22 ಹಳ್ಳಿಗಳನ್ನು ಸೇರ್ಪಡೆಗೊಳಿಸಿದ 30 ವರ್ಷಗಳ ನಂತರ 2013 ರಲ್ಲಿ ತುಮಕೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಪರಿವರ್ತಿಸಲಾಯಿತು.ಪ್ರಸ್ತುತ ಮಾಹಿತಿಯಂತೆ ತುಮಕೂರು ಮಹಾನಗರಪಾಲಿಕೆಗೆ ಹೊಂದಿಕೊಂಡಿರುವ 14 ಗ್ರಾಮ ಪಂಚಾಯಿತಿಗಳ 54 ಗ್ರಾಮಗಳನ್ನು ತುಮಕೂರು ಮಹಾನಗರಪಾಲಿಕೆಗೆ ಸೇರಿಸಿ ಒಟ್ಟು ಜನಸಂಖ್ಯೆ 658681 , ಗಡಿ ವಿಸ್ತರಣೆ ನಂತರ ವಿಸ್ತೀರ್ಣ 174 ಚದುರ ಕಿಲೋ ಮೀಟರ್ ಮತ್ತು ಸುಮಾರು 1,500 ಕೋಟಿಗಳ ರಾಜಸ್ವ ಬರಬಹುದೆಂದು ಮಹಾ ಪ್ರಸ್ತಾವನೆಯನ್ನು ಸರ್ಕಾರ ಸಂಬಂದಿಸಿದವರಿಂದ ಪಡೆದಿದ್ದಾರೆ ಎಂಬುದು ತಿಳಿದು ಬಂದಿದೆ ಎಂಬ ವಿಷಯವನ್ನು ಸಭೆಯಲ್ಲಿ ತಿಳಿಸಿದರು.ಇದಲ್ಲದೆ ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೇವಲ 70 ಕಿ.ಮೀ.ಇದ್ದು , ರಾಜ್ಯದ ವಿವಿಧ 25ಕ್ಕೂ ಹೆಚ್ಚು ಜಿಲ್ಲೆಗಳು ರಾಜಧಾನಿ ಬೆಂಗಳೂರು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದ್ದು, ತುಮಕೂರು ಮಹಾನಗರಪಾಲಿಕೆ ಸುತ್ತಮುತ್ತ 3 ಮೆಡಿಕಲ್ ಕಾಲೇಜು, 7 ಇಂಜನಿಯರಿಂಗ್ ಕಾಲೇಜು, ಕೈಗಾರಿಕೆ, ಶಿಕ್ಷಣ, ಜನಸಾಂದ್ರತೆ ಹಾಗೂ ಆರ್ಥಿಕ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ವಿಸ್ತರಣೆ ಅವಶ್ಯಕವಾಗಿದೆ ಎಂಬ ವರದಿ ಸರ್ಕಾರ ಪಡೆದಿರುವ ಗೊಂದಲದ ಮಾಹಿತಿ ಬಗ್ಗೆ ತಿಳಿಸಿದರು.ಪಾಲಿಕೆ ವಿಸ್ತರಣೆ ಮಾಡುವುದರಿಂದ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಮಾತ್ರ ಅನುಕೂಲವಾಗಿ, ಜನರು ಜರ್ಜರಿತರಾಗುತ್ತಾರೆ. ಜನರು ಕೊಳ್ಳುವ ಸೈಟ್ ಬೆಲೆ ಗಗನಕ್ಕೇರಿವುದಲ್ಲದೆ, ಆಸ್ತಿ ತೆರಿಗೆ ಪಾವತಿಯೂ ಹೆಚ್ಚಿ ಆಸ್ತಿ ತೆರಿಗೆದಾರರಿಗೆ ಭಾರೀ ತೆರಿಗೆ ಹೊರೆಯಾಗುತ್ತದೆ. ಈ ಹಿಂದೆ ತುಮಕೂರಿಗೆ ಸೇರ್ಪಡೆಗೊಂಡ 22 ಹಳ್ಳಿಗಳ ಸಮಗ್ರ ಅಭಿವೃದ್ಧಿಗೊಳ್ಳದೆ ಮೂಲಭೂತ ಸೌಕರ್ಯಗಳಿಲ್ಲದೆ ತತ್ತರಿಸಿ ಹೋಗಿ, ಆಸ್ತಿ ತೆರಿಗೆ ಹೊರೆಯಿಂದ ನಲುಗಿ, ಹಿಡಿ ಶಾಪ ಹಾಕುತ್ತಿರುವ ಸ್ಥಿತಿ ಸಾರ್ವತ್ರಿಕವಾಗಿದೆ.ಪಾಲಿಕೆಗೆ 14 ಪಂಚಾಯಿತಿಗಳ 54 ಗ್ರಾಮಗಳ ಹೊಸ ಸೇರ್ಪಡೆಯು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾದ ಗ್ರಾಮ ಸ್ವರಾಜ್ಯ ಕನಸನ್ನು ನುಚ್ಚುನೂರು ಮಾಡಿ, ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ರ ಕಲಂ 4 ಮತ್ತು 5 ರಂತೆ ಶಿಫಾರಸ್ಸಿನ ಟಪ್ಪಣಿ ಮಾಡಿ, ವಿಸ್ತರಿಸುವುದರಿಂದ ಪ್ರಸ್ತುತ ನಗರದ ಪ್ರದೇಶದ ಅಭಿವೃದ್ಧಿ ಕಡೆಗಣನೆಯಾಗಿ, ಮೂಲ ಸೌಕರ್ಯಣಗಳಿಗೆ ಆದ್ಯತೆ ನೀಡಲು ಮಹಾನಗರಪಾಲಿಕೆ ವಿಫಲವಾಗುತ್ತದೆ ಎಂದಿದ್ದಾರೆ.ಕಳೆದ 30 ವರ್ಷಗಳ ಹಿಂದೆ ತುಮಕೂರಿಗೆ ಸೇರಿದ 22 ಹಳ್ಳಿಗಳ ಸ್ಥಿತಿಯೇ 14 ಗ್ರಾಮ ಪಂಚಾಯಿತಿಗಳ 54 ಹಳ್ಳಿಗಳ ಸ್ಥಿತಿಯಾಗುತ್ತದೆ ಎಂದು ವಾಸ್ತವಿಕವಾಗಿ ವಿವರಿಸಿ, ವಾಣಿಜ್ಯ, ಕೈಗಾರಿಕೆ, ಶಿಕ್ಷಣ ವ್ಯವಸ್ಥೆ, ವಾಹನಗಳ ದಟ್ಟಣೆಯಿಂದ ಪರಿಸರದ ಮೇಲೂ ಪರಿಣಾಮ ಬೀರಿ, ಜನರ ಬದುಕೇ ಬದಲಾಗುತ್ತದೆ ಎಂದು ಕೆ.ಪಿ.ಮಹೇಶ ವಿವರಿಸಿ, ಪ್ರಸ್ತುತ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿ ವಿಸ್ತರಿಸುವ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ತುಮಕೂರು ಮಹಾನಗರ ಪಾಲಿಕೆ ವಿಸ್ತರಿಸುವ ಸರ್ಕಾರದ ನಡವಳಿಕೆ ಹಾಗೂ ಪ್ರಸ್ತಾವನೆಯನ್ನು ವಿರೋಧಿಸಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಎಸ್.ಶಿವಕುಮಾರ್, ಮಲ್ಲಸಂದ್ರ ಗ್ರಾಮ ಪಂಚಾಯಿತಿ ಸದಸ್ಯರಾದ ನವರತ್ನ ಕುಮಾರ್ ಹಾಗೂ ರತ್ನಮ್ಮ, ಮೈದಾಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಂಜುನಾಥ, ದೊಡ್ಡ ನಾರವಂಗಲದ ರವೀಶ್, ಕೆಸರುಮಡು ಕೃಷ್ಣಪ್ಪ, ತುಮಕೂರಿನ ರಫೀಕ್ ಅಹಮದ್, ವಿವೇಕ್ ಮುಂತಾದವರು ಮಾತನಾಡಿದರು.