ಸಾರಾಂಶ
ಕಾಡಿನಲ್ಲಿರುವ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಕೊರತೆಯಿಂದ ಅವು ಗ್ರಾಮಗಳತ್ತ ಧಾವಿಸುವ ಮೂಲಕ ಮಾನವ ಹಾಗೂ ಮೃಗಗಳ ನಡುವೆ ಸಂಘರ್ಷ ನಡೆಯುವಂತಾಗಿದ್ದರೂ ಸರ್ಕಾರ ಎಚ್ಚೆತ್ತುಕೊಂಡು ಕಾಡಿನಲ್ಲೆ ಆಹಾರ, ನೀರು ಸಿಗುವಂತೆ ಯಾಕೆ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಯಕ್ಷ ಪ್ರಶ್ನೆಯಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಾಡಿನಲ್ಲಿರುವ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಕೊರತೆಯಿಂದ ಅವು ಗ್ರಾಮಗಳತ್ತ ಧಾವಿಸುವ ಮೂಲಕ ಮಾನವ ಹಾಗೂ ಮೃಗಗಳ ನಡುವೆ ಸಂಘರ್ಷ ನಡೆಯುವಂತಾಗಿದ್ದರೂ ಸರ್ಕಾರ ಎಚ್ಚೆತ್ತುಕೊಂಡು ಕಾಡಿನಲ್ಲೆ ಆಹಾರ, ನೀರು ಸಿಗುವಂತೆ ಯಾಕೆ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಯಕ್ಷ ಪ್ರಶ್ನೆಯಾಗಿದೆ.ಹೌದು, ತಾಲೂಕಿನ ಸುತ್ತಲೂ ದಟ್ಟ ಅರಣ್ಯದಿಂದ ಕೂಡಿದೆ, ಈ ಹಿಂದೆ ಕಾಡಿನಲ್ಲಿ ಎಲ್ಲ ತರಹದ ಹಣ್ಣುಗಳು ಲಭಿಸುತ್ತಿತ್ತು, ಕಾಡಿನ ಮಧ್ಯ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದ ಮೃಗಗಳು ನಾಡಿನತ್ತ ಮುಖ ಮಾಡುತ್ತಿರಲಿಲ್ಲ. ಆದರೆ ಈಗ ಕಾಡಿನಲ್ಲಿ ಯಾವುದೇ ಹಣ್ಣಿನ ಗಡಿಗಳಿಲ್ಲ, ಬರೀ ನೀಲಗಿರಿ, ಸೀತಾಫಲ, ಮುಳ್ಳಿನ ಗಿಡಗಳನ್ನು ಹೊರತುಪಡಿಸಿದರೆ ಬೇರಾವುದೇ ಪ್ರಾಣಿಗಳಿಗೆ ಉಪಯುಕ್ತ ಗಿಡಗಳನ್ನು ಅರಣ್ಯ ಇಲಾಖೆ ಫೋಷಣೆ ಮಾಡಿಲ್ಲ.ಇದರಿಂದ ಕಾಡಿನೊಳಗೇ ಇದ್ದ ಹಲವು ಬಗೆಯ ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಗ್ರಾಮಗಳತ್ತ ಮುಖ ಮಾಡುವಂತಾಗಿದೆ. ಅಲ್ಲದೆ ರೈತರು ಬೆವರು ಸುರಿಸಿ ಬೆಳೆದಿರುವ ಬೆಳೆಗಳನ್ನು ತಿನ್ನುತ್ತಿದೆ. ಇದರಿಂದ ಅಲ್ಪಸ್ವಲ್ಪವಾದರೂ ಬೆಳೆ ಉಳಿಯುತ್ತಿತ್ತು. ಆದರೆ ಈಗ ಕಾಡಾನೆಗಳು ತಮಿಳುನಾಡಿನಿಂದ ಲಗ್ಗೆ ಇಟ್ಟಿದೆ, ಕಳೆದ ೨೦ವರ್ಷಗಳಿಂದ ಆನೆಗಳು ತಾಲೂಕಿನ ಹಲವು ಪ್ರದೇಶಗಳಲ್ಲಿ ಬೀಡು ಬಿಟ್ಟು ರೈತರನ್ನು ನಿದ್ದೆಗೆಡಿಸಿತ್ತು, ಜೊತೆಗೆ ಹತ್ತಾರು ರೈತರನ್ನು ಬಲಿಪಡೆದಿತ್ತು. ಈಗ ಅರಣ್ಯ ಇಲಾಖೆ ಅಧಿಕಾರಿಗಳ ದಿಟ್ಟ ಕ್ರಮದಿಂದ ಆನೆಗಳು ಆಗಾಗ ನೆಂಟರಂತೆ ಬಂದು ಹೋಗುತ್ತಿದೆ.ತಾಲೂಕಿನ ಕಾಡನ್ನು ವಣ್ಯಜೀವಿ ಧಾಮವಾಗಿ ಘೋಷಣೆ ಮಾಡುವಂತೆ ದಶಕಗಳಿಂದಲೂ ಸರ್ಕಾರವನ್ನು ರೈತರು ಒತ್ತಾಯ ಮಾಡುತ್ತಿದ್ದಾರೆ, ಆದರೆ ಸರ್ಕಾರ ಮಾತ್ರ ಸ್ಪಂದಿಸದೆ ಆನೆಗಳು ಕಾಡಿನಿಂದ ಹೊರ ಬಾರದಂತೆ ಸೋಲಾರ್ ಫೆನ್ಷಿಂಗ್ ಅಳವಡಿಸಿ ಸುಮ್ಮನಾಗಿದೆ, ಅದೂ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾಗಿಲ್ಲ. ಇದರಿಂದ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ನಿತ್ಯ ಆನೆಗಳಿಗಾಗಿ ಗಡಿಯಲ್ಲಿ ಕಾವಲು ಕಾಯುವಂತಾಗಿದೆ. ಆನೆಗಳಿಗಾಗಿ ಕಾಡಿನಲ್ಲಿ ಆಹಾರ ಹಾಗೂ ನೀರು ಸಿಗುವಂತೆ ಮಾಡಿದರೆ ಆನೆಗಳು ನಾಡಿನತ್ತ ಮುಖ ಮಾಡುವುದಿಲ್ಲ, ಈಗ ಎಲ್ಲಿಯೂ ಆನೆಗಳ ಬಗ್ಗೆ ಸುಳಿವಿಲ್ಲದಿರುವುದು ರೈತರನ್ನು ಹಾಗೂ ಗಡಿ ಭಾಗದ ಜನರನ್ನು ಉಸಿರಾಡುವಂತೆ ಮಾಡಿದೆ.ಈಗ ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ಅಭಾವ ಕಾಡಿನಲ್ಲಿ ಕಾಣುತ್ತಿದೆ, ಇದರಿಂದ ಜಿಂಕೆ, ನವಿಲು ಇತರೆ ಪ್ರಾಣಿಗಳು ನಾಡಿನತ್ತ ಮುಖ ಮಾಡಿ ನಾಯಿಗಳಿಗೆ ಆಹಾರವಾಗುತ್ತಿದೆ. ಕಾಡಿನೊಳಗೇ ನೀರಿನ ತೊಟ್ಟಿಗಳನ್ನು ಅಳವಡಿಸಿ ಪ್ರಾಣಿ ಪಕ್ಷಿಗಳಿಗೆ ಸಿಗುವಂತೆ ಅರಣ್ಯ ಇಲಾಖೆ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಡಿಕೆ ಹಳ್ಳಿ ವ್ಯಾಪ್ತಿಯ ಅರಣ್ಯದಲ್ಲಿ ಸಿಂಹ ಗರ್ಜನೆ ಸಂಘಟನೆ ಕಾರ್ಯಕರ್ತರು ಕಾಡಿನಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿ ನಿತ್ಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವಂತೆ ಇತರೇ ಕಡೆಯೂ ಮಾಡಿದರೆ ಉತ್ತಮವೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.