ಕೃಷಿ ಭೂಮಿ ಬಲವಂತ ಸ್ವಾಧೀನ ಇಲ್ಲ

| Published : Jul 29 2025, 01:00 AM IST

ಸಾರಾಂಶ

ಕೆಲ ರೈತರು, ನ್ಯಾಯಾಲಯದಲ್ಲಿ ಕೇಸು ಹಾಕಿದ್ದಾರೆ. ಆದ್ದರಿಂದ ನಾನೇ ಖುದ್ದಾಗಿ ಬಂದು, ರೈತರ ಭೂಮಿಗಳಲ್ಲಿ ಏನೇನು ಬೆಳೆ ಬೆಳೆದಿದ್ದೀರಿ ಎಂದು ಅಧಿಕಾರಿಗಳು ಕಣ್ಣಾರೆ ನೋಡಿ, ವರದಿ ಸಲ್ಲಿಸಬೇಕಾಗಿದೆ. ನಾನು ಕೆಐಎಡಿಬಿ ಕಚೇರಿಯಲ್ಲಿ ಕುಳಿತು ವರದಿ ಹಾಕುವುದಕ್ಕೆ ಸಾಧ್ಯವಿಲ್ಲ. ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿಯಲ್ಲಿ ಏನೇನು ಬೆಳೆ ಬೆಳೆದಿದ್ದಾರೆ ಎಂದು ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡಬೇಕು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಯಾವೊಬ್ಬ ರೈತನ ಜಮೀನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಯಾವ ರೈತರೂ ಗಾಬರಿಯಾಗಬಾರದು. ರೈತರೇ ಭೂಮಿ ಕೊಡಲು ಮುಂದೆ ಬಂದರೆ ಮಾತ್ರವೇ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಹರಿಶಿಲ್ಪಾ ಸ್ಪಷ್ಟಪಡಿಸಿದರು.

ತಾಲೂಕಿನ ಜಂಗಮಕೋಟೆ ಹೋಬಳಿಯ ದೇವಗಾನಹಳ್ಳಿ, ಗೊಲ್ಲಹಳ್ಳಿ, ಕೊಲುಮೆ ಹೊಸೂರು, ಬಸವಾಪಟ್ಟಣ, ನಡಿಪಿನಾಯಕನಹಳ್ಳಿ, ಯಣ್ಣಂಗೂರು, ಅರಿಕೆರೆ, ಸಂಜೀವಪುರ, ಹೊಸಪೇಟೆ, ಎದ್ದಲತಿಪ್ಪೇನಹಳ್ಳಿ ಗ್ರಾಮಗಳಿಗೆ ಪೊಲೀಸ್ ಸರ್ಪಗಾವಲಿನಲ್ಲಿ ತೆರಳಿ, ರೈತರ ಭೂಮಿಗಳನ್ನು ವೀಕ್ಷಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳೆಯ ಮಾಹಿತಿಗಾಗಿ ಭೇಟಿ

ನಾವು ಈಗ ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಬಂದಿಲ್ಲ. ಕೆಲ ರೈತರು, ನ್ಯಾಯಾಲಯದಲ್ಲಿ ಕೇಸು ಹಾಕಿದ್ದಾರೆ. ಆದ್ದರಿಂದ ನಾನೇ ಖುದ್ದಾಗಿ ಬಂದು, ರೈತರ ಭೂಮಿಗಳಲ್ಲಿ ಏನೇನು ಬೆಳೆ ಬೆಳೆದಿದ್ದೀರಿ ಎಂದು ಕಣ್ಣಾರೆ ನೋಡಿ, ವರದಿ ಸಲ್ಲಿಸಬೇಕಾಗಿದೆ. ನಾನು ಕೆಐಎಡಿಬಿ ಕಚೇರಿಯಲ್ಲಿ ಕುಳಿತು ವರದಿ ಹಾಕುವುದಕ್ಕೆ ಸಾಧ್ಯವಿಲ್ಲ. ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿಯಲ್ಲಿ ಏನೇನು ಬೆಳೆ ಬೆಳೆದಿದ್ದಾರೆ ಎಂದು ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಯಾವ ರೈತರು, ಭೂಮಿಯನ್ನು ಕೊಡುವುದಕ್ಕೆ ಇಷ್ಟವಿದೆಯೋ ಅಂತಹವರ ಭೂಮಿಯನ್ನಷ್ಟೇ ನಾವು ಸ್ವಾಧೀನಪಡಿಸಿಕೊಳ್ಳುತ್ತೇವೆ. ರೈತರ ಒಪ್ಪಿಗೆ ಇಲ್ಲದೆ ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲವೆಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.ವಿರೋಧದ ನಡುವೆಯು ವೀಕ್ಷಣೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2,823 ಎಕರೆ ಪ್ರದೇಶವನ್ನು ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ನೋಟಿಫಿಕೇಷನ್ ಹೊರಡಿಸಿರುವ ಹಿನ್ನೆಲೆಯಲ್ಲಿ, ರೈತರ ತೀವ್ರ ವಿರೋಧದ ನಡುವೆಯೂ ಪೊಲೀಸರ ಸರ್ಪಗಾವಲಿನಲ್ಲಿ ಸೋಮವಾರ ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಹರಿಶಿಲ್ಪಾ ರೈತರ ಭೂಮಿಗಳನ್ನು ವೀಕ್ಷಣೆ ಮಾಡಿದರು. ಬಸವಾಪಟ್ಟಣದಲ್ಲಿ ರೈತರ ಜಮೀನುಗಳನ್ನು ವೀಕ್ಷಣೆ ಮಾಡಲು ಬಂದಿದ್ದ ಸಮಯದಲ್ಲಿ, ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು ರೈತರು, ಯಾವುದೇ ಕಾರಣಕ್ಕೂ ನಾವು ಭೂಮಿಯನ್ನು ಕೊಡುವುದಿಲ್ಲ. ಯಾರು ನಿಮಗೆ ಭೂಮಿ ಕೊಡುವುದಾಗಿ ಹೇಳಿದ್ದಾರೋ ಅವರ ಭೂಮಿಗಳಿಗೆ ಹೋಗಿ ವೀಕ್ಷಣೆ ಮಾಡಿಕೊಳ್ಳಿ, ರೈತರ ಅನುಮತಿಯಿಲ್ಲದೆ, ರೈತರ ಭೂಮಿಯ ಬಳಿಗೆ ಬರುವುದಕ್ಕೆ ನಿಮಗೇನು ಅಧಿಕಾರವಿದೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.