ಶಾಸಕರಿಗೆ ಅನುದಾನ ನೀಡಿಲ್ಲ

| Published : Jul 13 2025, 01:19 AM IST

ಸಾರಾಂಶ

ಶ್ರೀನಿವಾಸಪುರ ತಾಲೂಕಿನಲ್ಲಿ ರಸ್ತೆಗಳ ಬದಿಗಳಲ್ಲಿ ಮಾವಿನ ಹಣ್ಣನ್ನು ಚೆಲ್ಲಿರುವುದನ್ನು ನೋಡಿ ಮನಸ್ಸಿಗೆ ತುಂಬಾ ನೋವಾಯಿತು. ಕುಮಾರಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಪರಿಹಾರಕ್ಕೆ ಒತ್ತಾಯ ಮಾಡಿದಾಗ ಕೇಂದ್ರ ಕೃಷಿ ಸಚಿವರು ಪರಿಹಾರ ಘೋಷಿಸಿದರು. ಆಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತು ಎನ್ನುತ್ತಾರೆ ನಿಖಿಲ್‌ ಕುಮಾರಸ್ವಾಮಿ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ ಕಳೆದ ಎರಡು ವರ್ಷಗಳಿಂದ ಶಾಸಕರಿಗೆ ಸಿಗಬೇಕಾದ ಅನುದಾನಗಳನ್ನು ತಡೆ ಹಿಡಿಯುತ್ತಿದ್ದಾರೆ. ಆದ್ದರಿಂದ ಶಾಸಕರು ಹೋದಲ್ಲಿ ಬಂದಲ್ಲೆಲ್ಲಾ ಜನತೆ ಕಾಂಗ್ರೆಸ್ ಶಾಸಕರನ್ನೊಳಗೊಂಡಂತೆ ಎಲ್ಲರನ್ನೂ ಕೇಳುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಯುವ ಜೆಡಿಎಸ್‌ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಶ್ರೀನಿವಾಸಪುರದಲ್ಲಿ ಶುಕ್ರವಾರ ಜೆಡಿಎಸ್ ಕಾರ್ಯಕತರ ಸಮಾವೇಶದಲ್ಲಿ ಮಾತನಾಡಿ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೋಡ್ ಮೂಲಕ ಬಂದಾಗ ರಸ್ತೆಗಳ ಬದಿಗಳಲ್ಲಿ ಮಾವಿನ ಹಣ್ಣನ್ನು ಚೆಲ್ಲಿರುವುದನ್ನು ನೋಡಿ ಮನಸ್ಸಿಗೆ ತುಂಬಾ ನೋವಾಯಿತು. ಕುಮಾರಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಪರಿಹಾರಕ್ಕೆ ಒತ್ತಾಯ ಮಾಡಿದಾಗ ಕೇಂದ್ರ ಕೃಷಿ ಸಚಿವರು ಪರಿಹಾರ ಘೋಷಿಸಿದರು. ಆಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತು ಎಂದರು.

ಇದು ದರಿದ್ರ ಸರ್ಕಾರ:

ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಶ್ರೀನಿವಾಸಪುರ ತಾಲ್ಲೂಕಿಗೆ ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ ತಂದು ಶ್ರೀನಿವಾಸಪುರ ತಾಲ್ಲೂಕನ್ನು ಸಿಂಗಾಪೂರ್ ಮಾಡುತ್ತೇನೆ ಎಂದು ಭಾಷಣ ಮಾಡಿದ್ದ ಮಾಜಿ ಶಾಸಕ ರಮೇಶ್ ಕುಮಾರ್ ಸ್ಪೀಕರ್ ಆಗಿದ್ದರು, ಆರೋಗ್ಯ ಸಚಿವರಾಗಿದ್ದರು ಏನೂ ಮಾಡಲಿಲ್ಲ. ಆದರೆ ತಾವು ಕ್ಷೇತ್ರದಲ್ಲಿ ೨೬ ರಸ್ತೆಗಳ ಅಭಿವೃದ್ಧಿ ಹಾಗೂ ಕೈಗಾರಿಕಾಭಿವೃದ್ದಿ ಪ್ರಾಧಿಕಾರ ಮಾಡುತ್ತಿದ್ದರೆ ತಾಲ್ಲೂಕಿನ ಮಾಜಿ ಶಾಸಕರ ಅಣತಿಯಂತೆ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‌ ತಡೆ ಹಾಕುವ ಕೆಲಸಗಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಸದ ಎಂ.ಮಲ್ಲೇಶ್ ಬಾಬು, ಜೆಡಿಎಸ್ ಮುಖಂಡರಾದ ಸಿಎಂಆರ್ ಶ್ರೀನಾಥ್ ಮತ್ತಿರರ ಮುಖಂಡರು ಇದ್ದರು.

ಚಿಂತಾಮಣಿಯಿಂದ ಬಂದಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿರನ್ನು ತಾಲೂಕಿನ ಕಲ್ಲೂರು ಗ್ರಾಮದ ಬಳಿ ಜೆಡಿಎಸ್ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಗಾತ್ರದ ಹೂವಿನ ಹಾರವನ್ನು ಹಾಕುವ ಅದ್ದೂರಿ ಸ್ವಾಗತ ನೀಡಲಾಯಿತು ಅಲ್ಲಿಂದ ಬೈಕ್ ರ್‍ಯಾಲಿ ಮೂಲಕ ಪುಂಗನೂರು ಕ್ರಾಸ್ ಸೀತಾರಾಮ ಕಲ್ಯಾಣಮಂಟಪ್ಪಕ್ಕೆ ಕರೆತರಲಾಯಿತು.