ಕಳೆದ ಐದಾರು ವರ್ಷಗಳಲ್ಲಿ ರಾಜ್ಯದ ವಿವಿಧೆಡೆ 10ಕ್ಕೂ ಹೆಚ್ಚು ಮಂದಿ ಮಾಂಜಾ ದಾರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಪಕ್ಷಿಗಳು ಗಾಯಗೊಂಡು ರಕ್ಷಣೆಗೆ ಒಳಗಾಗಿವೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಆಕಾಶದಲ್ಲಿ ಗಾಳಿಪಟಗಳು ಬಣ್ಣ ಬಣ್ಣದ ಚಿತ್ತಾರ ಬಿಡಿಸುತ್ತಿವೆ. ಕೆಳಗೆ ಜನರು ತಮ್ಮ ಪಾಡಿಗೆ ಓಡಾಡುತ್ತಿದ್ದಾರೆ. ಆದರೆ, ಕಣ್ಣಿಗೆ ಕಾಣದ ಮಾಂಜಾ ದಾರವೊಂದು ಕ್ಷಣಾರ್ಧದಲ್ಲಿ ಜೀವಕ್ಕೆ ಕುತ್ತಾಗುತ್ತಿದೆ. ಸಂಭ್ರಮದ ಸಂಕೇತವಾಗಬೇಕಿದ್ದ ಗಾಳಿಪಟದ ದಾರವೇ ರಸ್ತೆಗಿಳಿದ ಮನುಷ್ಯರಿಗೂ, ಆಕಾಶದಲ್ಲಿ ಹಾರುವ ಮೂಕ ಪಕ್ಷಿಗಳಿಗೂ ಮಾರಣಾಂತಿಕ ಬಲೆಯಾಗಿ ಮಾರ್ಪಟ್ಟಿದೆ.
ಕಳೆದ ಐದಾರು ವರ್ಷಗಳಲ್ಲಿ ರಾಜ್ಯದ ವಿವಿಧೆಡೆ 10ಕ್ಕೂ ಹೆಚ್ಚು ಮಂದಿ ಮಾಂಜಾ ದಾರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಪಕ್ಷಿಗಳು ಗಾಯಗೊಂಡು ರಕ್ಷಣೆಗೆ ಒಳಗಾಗಿವೆ. ನಿಷೇಧದ ನಡುವೆಯೂ ಮಾಂಜಾ ದಾರದ ಅಕ್ರಮ ಬಳಕೆಗೆ ಕಡಿವಾಣ ಬೀಳದಿರುವುದು ಆತಂಕಕ್ಕೆ ಕಾರಣವಾಗಿದೆ.ಹಲವು ಜೀವಗಳಿಗೆ ಕಂಟಕ:
ಕಳೆದ ಜನವರಿಯಲ್ಲಿ ಬೀದರ್ ಜಿಲ್ಲೆಯ ತಾಲಮಡಗಿ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ 48 ವರ್ಷದ ಸಂಜೀವಕುಮಾರ್ ಹೊಸಮನಿ ಅವರ ಕುತ್ತಿಗೆಗೆ ನಿಷೇಧಿತ ಚೀನಿ ಮಾಂಜಾ ದಾರ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು. ಬೆಳಗಾವಿ ಜಿಲ್ಲೆಯ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪರೀಕ್ಷೆ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ 19 ವರ್ಷದ ಧ್ರುವ ಕರ್ಜಗಿ ಅವರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.2022ರ ಅಕ್ಟೋಬರ್‌ನಲ್ಲಿ ಬೆಳಗಾವಿ ಜಿಲ್ಲೆಯ ಹತ್ತರಗಿಯಲ್ಲಿ ತಂದೆಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಆರು ವರ್ಷದ ವರ್ಧನ್ ಬ್ಯಾಳಿ ಮಾಂಜಾ ದಾರಕ್ಕೆ ಸಿಲುಕಿ ಮೃತಪಟ್ಟಿದ್ದ. ಬೆಂಗಳೂರಿನ ತಲಘಟ್ಟಪುರದಲ್ಲಿ ಕಳೆದ ಜೂನ್‌ನಲ್ಲಿ ಬೈಕ್ ಸವಾರ 29 ವರ್ಷದ ಕಿರಣ್ ದಾರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಹುಬ್ಬಳ್ಳಿಯ ತೊರವಿಹಕ್ಕಲದಲ್ಲಿ ಈಚೆಗೆ 18 ವರ್ಷದ ಬಾಲಕನ ಕಾಲಿಗೆ ಮಾಂಜಾ ಸಿಲುಕಿ ಗಾಯವಾಗಿದ್ದು, ಅ. 1ರಂದು ಬಂಕಾಪುರ ಚೌಕದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಗೆ ದಾರ ಸಿಲುಕಿ ಗಾಯವಾಗಿದೆ.
ಪಕ್ಷಿಗಳಿಗೂ ಮಾರಣಾಂತಿಕ ಬಲೆ:ಮರ, ಕಟ್ಟಡ ಹಾಗೂ ವಿದ್ಯುತ್ ತಂತಿಗಳ ನಡುವೆ ಸಿಲುಕಿರುವ ಮಾಂಜಾ ದಾರಕ್ಕೆ ಪಕ್ಷಿಗಳ ರೆಕ್ಕೆ, ಕಾಲು ಅಥವಾ ಬಾಲ ಸಿಕ್ಕಿಕೊಂಡರೆ ತಪ್ಪಿಸಿಕೊಳ್ಳುವ ಹೋರಾಟದಲ್ಲೇ ಮತ್ತಷ್ಟು ಗಾಯಗೊಳ್ಳುತ್ತವೆ. ಕೆಲವೊಮ್ಮೆ ರೆಕ್ಕೆ ಕಳೆದುಕೊಂಡು ಹಾರಲಾರದ ಸ್ಥಿತಿಗೆ ತಲುಪುತ್ತವೆ.
ರೆಕ್ಕೆ ಬ್ಯಾಂಕ್‌ನಿಂದ ಮತ್ತೆ ಹಾರಾಟ:ಮಾಂಜಾದಿಂದ ರೆಕ್ಕೆ ಕಳೆದುಕೊಂಡ ಪಕ್ಷಿಗಳಿಗೆ ಸಹಜವಾಗಿ ಹೊಸ ರೆಕ್ಕೆ ಬೆಳೆಯಲು ಹಲವು ತಿಂಗಳು ಬೇಕಾಗುತ್ತದೆ. ಇದಕ್ಕಾಗಿ ಬೆಂಗಳೂರಿನ ಪೀಪಲ್ಸ್ ಫಾರ್ ಅನಿಮಲ್ಸ್ (ಪಿಎಫ್‌ಎ) ವನ್ಯಜೀವಿ ಆಸ್ಪತ್ರೆ "ಫೆದರ್ ಬ್ಯಾಂಕ್ " ಸ್ಥಾಪಿಸಿದ್ದು, ಸಹಜವಾಗಿ ಉದುರುವ ಪಕ್ಷಿಗಳ ರೆಕ್ಕೆಗಳನ್ನು ಸಂಗ್ರಹಿಸಿ ಗಾಯಗೊಂಡ ಪಕ್ಷಿಗಳಿಗೆ ಬಳಸುತ್ತಿದೆ. "ಇಂಪಿಂಗ್ " ವಿಧಾನದಲ್ಲಿ ಸೂಕ್ತ ರೆಕ್ಕೆಗಳನ್ನು ಜೋಡಿಸಿ, ಕೆಲವು ಪಕ್ಷಿಗಳನ್ನು 24ರಿಂದ 48 ಗಂಟೆಗಳಲ್ಲೇ ಮತ್ತೆ ಹಾರುವಂತೆ ಮಾಡಲಾಗುತ್ತಿದೆ. ಪಿಎಫ್‌ಎ ದಾಖಲೆಗಳ ಪ್ರಕಾರ, 2019ರಿಂದ 2025ರ ವರೆಗೆ 3,858 ಪಕ್ಷಿಗಳನ್ನು ಮಾಂಜಾ ದಾರದಿಂದ ರಕ್ಷಿಸಲಾಗಿದೆ.
ಕಳೆದ ಆರು ವರ್ಷಗಳಲ್ಲಿ ಸುಮಾರು 5 ಲಕ್ಷ ಶಾಲಾ ಮಕ್ಕಳಿಗೆ ಮಾಂಜಾ ದಾರದ ಅಪಾಯದ ಕುರಿತು ಜಾಗೃತಿ ಮೂಡಿಸಿರುವ ಪಿಎಫ್‌ಎ, "ಮಾಂಜಾ ಬೇಡ " ಎಂಬ ಪ್ರತಿಜ್ಞೆಯನ್ನೂ ಮಾಡಿಸುತ್ತಿದೆ.ಕರ್ನಾಟಕದಲ್ಲಿ ಮಾಂಜಾ ದಾರದ ತಯಾರಿಕೆ, ಮಾರಾಟ ಹಾಗೂ ಬಳಕೆಗೆ ನಿಷೇಧವಿದ್ದರೂ ಅಕ್ರಮ ಬಳಕೆಗೆ ಕಡಿವಾಣ ಹಾಕುವುದು ಸವಾಲಾಗಿದೆ. ಗಾಳಿಪಟ ಹಾರಲಿ, ಸಂಭ್ರಮವೂ ಇರಲಿ. ಆದರೆ, ಅದರ ದಾರ ಮತ್ತೊಂದು ಜೀವದ ಕೊನೆಯ ದಾರವಾಗದಿರಲಿ. ನಿಷೇಧದ ಕಟ್ಟುನಿಟ್ಟಿನ ಜಾರಿ ಹಾಗೂ ನಿರಂತರ ಜನಜಾಗೃತಿಯೇ ಈ ಅಪಾಯಕ್ಕೆ ಕಡಿವಾಣ ಹಾಕಬೇಕಿದೆ.
ರಾಜ್ಯದಲ್ಲಿ ಮಾಂಜಾ ದಾರ ಬಳಕೆಗೆ ಸರ್ಕಾರ ನಿಷೇಧ ಹೇರಿದ್ದರೂ ಇಂದಿಗೂ ರಾಜಾರೋಷವಾಗಿ ಬಳಕೆಯಾಗುತ್ತಿದೆ. ಹಲವು ಜೀವಗಳಿಗೆ ಕಂಟಕವಾಗಿರುವ ಮಾಂಜಾ ದಾರದ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಕರ್ನಲ್ ಡಾ. ನವಾಜ್ ಶರೀಫ್, ಪಿಎಫ್‌ಎ ವನ್ಯಜೀವಿ ಆಸ್ಪತ್ರೆ ಪ್ರಧಾನ ವ್ಯವಸ್ಥಾಪಕ, ಬೆಂಗಳೂರು