ಭದ್ರಾ ಅಣೆಕಟ್ಟು ಮತ್ತು ಅಚ್ಚುಕಟ್ಟು ಪ್ರದೇಶದ (ಭದ್ರಾ ಯೋಜನಾ ವೃತ್ತ) ಆಡಳಿತವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸಬಾರದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭದ್ರಾ ಅಣೆಕಟ್ಟು ಮತ್ತು ಅಚ್ಚುಕಟ್ಟು ಪ್ರದೇಶದ (ಭದ್ರಾ ಯೋಜನಾ ವೃತ್ತ) ಆಡಳಿತವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸಬಾರದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ನೀರಾವರಿ ನಿಗಮ ತುಂಗಾ ಮೇಲ್ದಂಡೆ ವಲಯದಲ್ಲಿರುವ ಭದ್ರಾ ಯೋಜನಾ ವೃತ್ತವನ್ನು ಹಸ್ತಾಂತರಮಾಡದೇ ಈಗಿರುವ ಹಾಗೆಯೇ ಆಡಳಿತ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಭದ್ರಾ ಜಲಾಶಯ ತರೀಕೆರೆ, ಲಕ್ಕವಳ್ಳಿ ಗ್ರಾಮದ ಬಳಿ ಸಮುದ್ರಮಟ್ಟದಿಂದ ಸುಮಾರು 601 ಮೀಟರ್ ಎತ್ತರದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಜಲಾಶಯದ ಸಂಗ್ರಹಣಾ ಸಾಮರ್ಥ್ಯ 71,531 ಟಿಎಂಸಿ. ಈ ಜಲಾಶಯದಿಂದ 1965 ರಿಂದ ಕಾಲುವೆಗಳಲ್ಲಿ ನೀರು ಹರಿಸಲಾಗಿದೆ. ಈ ಯೋಜನೆಯಿಂದ 2,53,292 ಎಕರೆಗಳಿಗೆ ಶಿವಮೊಗ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ರೈತರಿಗೆ ಎರಡು ಬೆಳೆಗಳಿಗೆ ನೀರು ಕೊಡಲಾಗುತ್ತಿದೆ ಎಂದರು.ಜೊತೆಗೆ ನದಿ ಮುಖಾಂತರ, ಕಾಲುವೆ ಮುಖಾಂತರ ಜಲಾಶಯದಿಂದ ಕುಡಿಯುವ ನೀರು, ಕೈಗಾರಿಕೆಗಳಿಗೆ ಸಹ ನೀರು ಹಂಚಿಕೆ ಮಾಡಲಾಗಿದೆ. ಈ ಜಲಾಶಯಕ್ಕೆ ಸಂಬಂಧಪಟ್ಟಂತೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹ ಇದ್ದು, ಅಚ್ಚುಕಟ್ಟು ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಎಂದರು.
ಭದ್ರಾ ನೀರಾವರಿ ಯೋಜನಾ ವೃತ್ತದಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಈ ಯೋಜನಾ ವೃತ್ತವನ್ನು ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ ವಿಶ್ವೇಶ್ವರಯ್ಯ ಜಲ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಹಸ್ತಾಂತರಿಸುವುದಕ್ಕೆ ಪ್ರಯತ್ನಿಸುತ್ತಿದೆ. ಇದಕ್ಕೆ ಈ ಭಾಗದ ರೈತರು ಒಪ್ಪುವುದಿಲ್ಲ. ಆದ್ದರಿಂದ ಭದ್ರಾ ಯೋಜನಾ ವೃತ್ತದ ಆಡಳಿತವನ್ನು ಯಾವುದೇ ಕಾರಣಕ್ಕೂ ಹಸ್ತಾಂತರಿಸಬಾರದು ಎಂದು ಆಗ್ರಹಿಸಿದರು.ಯೋಜನಾವೃತ್ತಕ್ಕೆ ಬರುವ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಎಲ್ಲಾ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಉಳಿಸಬೇಕಾಗಿದೆ. ಇಲ್ಲದಿದ್ದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು, ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರದ ವಿರುದ್ಧ ಚಳವಳಿಯ ಹಾದಿಯ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ರಾಜ್ಯರೈತ ಸಂಘದ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ರಾಜ್ಯ ಉಪಾಧ್ಯಕ್ಷರಾದ ಟಿ.ಎಂ.ಚಂದ್ರಪ್ಪ, ಇಟ್ಟೂರು ರಾಜು, ಪ್ರಮುಖರಾದ ಸಿ.ಬಿ.ಹನುಮಂತಪ್ಪ, ಜಿ.ಎನ್.ಪಂಚಾಕ್ಷರಿ, ಸಿ.ಚಂದ್ರಪ್ಪ ಇನ್ನಿತರರು ಉಪಸ್ಥಿತರಿದ್ದರು.