ಜಾತಿಗಣತಿ ವರದಿ ಬಗ್ಗೆ ದುಡುಕಿನ ನಿರ್ಧಾರ ಬೇಡ: ಸಂಕನೂರ

| Published : Apr 15 2025, 12:58 AM IST

ಸಾರಾಂಶ

ಇತ್ತೀಚೆಗೆ ಕ್ಯಾಬಿನೆಟ್‌ನಲ್ಲಿ ಮಂಡಿಸಿರುವ ಜಾತಿ ಗಣತಿ ವರದಿ ಆಧಾರ ರಹಿತವಾಗಿ ಹಾಗೂ ಅವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ ಎಂದು ಎಲ್ಲ ಸಮಾಜದ ಮುಖಂಡರು ವಿರೋಧ ವ್ಯಕ್ತಿಪಡಿಸುತ್ತಿರುವುದು ಸತ್ಯವಾಗಿರುವುದರಿಂದ ಏ.17ರಂದು ಈ ವಿಷಯದ ಕುರಿತು ಜರುಗಲಿರುವ ಸಂಪುಟದ ಸಭೆಯಲ್ಲಿ ಯಾವ ಆತುರದ ನಿರ್ಧಾರ ಕೈಗೊಳ್ಳಬಾರದೆಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಗದಗ: ಇತ್ತೀಚೆಗೆ ಕ್ಯಾಬಿನೆಟ್‌ನಲ್ಲಿ ಮಂಡಿಸಿರುವ ಜಾತಿ ಗಣತಿ ವರದಿ ಆಧಾರ ರಹಿತವಾಗಿ ಹಾಗೂ ಅವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ ಎಂದು ಎಲ್ಲ ಸಮಾಜದ ಮುಖಂಡರು ವಿರೋಧ ವ್ಯಕ್ತಿಪಡಿಸುತ್ತಿರುವುದು ಸತ್ಯವಾಗಿರುವುದರಿಂದ ಏ.17ರಂದು ಈ ವಿಷಯದ ಕುರಿತು ಜರುಗಲಿರುವ ಸಂಪುಟದ ಸಭೆಯಲ್ಲಿ ಯಾವ ಆತುರದ ನಿರ್ಧಾರ ಕೈಗೊಳ್ಳಬಾರದೆಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಜಾತಿ ಗಣತಿ ಮಾಡುವಾಗ ಮನೆ ಮನೆಗೆ ಹೋಗಿ ಸರಿಯಾಗಿ ಮಾಹಿತಿ ಪಡೆದಿರುವುದಿಲ್ಲವೆಂದು ಎಲ್ಲ ಸಾರ್ವಜನಿಕರ ಆರೋಪವಿದೆ. ಸರಿಯಾದ ಮಾಹಿತಿ ಸಂಗ್ರಹ ಮಾಡಲಾರದೇ ಕಚೇರಿಯಲ್ಲಿಯೇ ಕುಳಿತು ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಸಾರ್ವತ್ರಿಕವಾಗಿ ಚರ್ಚಿಸಲಾಗುತ್ತಿದೆ‌. ಈ ವಿಷಯದಲ್ಲಿ ದುಡುಕಿನ ನಿರ್ಣಯ ಸಮಾಜದಲ್ಲಿ ಆಘಾತಕ್ಕೆ ಕಾರಣವಾಗುವ ಸಂಭವವಿದೆ. ಹೀಗೆಲ್ಲ ಇರುವಾಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಆಧಾರದ ಮೇಲೆ ಸಿದ್ಧಪಡಿಸಿದ ವರದಿಯು 10 ವರ್ಷಗಳ ಹಿಂದಿನದ್ದು ಇದನ್ನು ತಿರಸ್ಕರಿಸಿ ಪುನಃ ಜಾತಿಗಣತಿ ಮಾಡಿಸುವುದು ನ್ಯಾಯತವಾದದ್ದು. ಸಾಮಾಜಿಕ ನ್ಯಾಯ ಒದಗಿಸುವುದು ಸಂವಿಧಾನ ಬದ್ಧ ಸರಕಾರ ಕರ್ತವ್ಯವಾಗಿದೆ. ಆದರೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಜಾತಿಗಳ ವಿವರವನ್ನು ಸಂಗ್ರಹಿಸುವಾಗ ವೈಜ್ಞಾನಿಕ ಪದ್ಧತಿಯನ್ನು ಆಧರಿಸಿ ಮಾಹಿತಿ ಸಂಗ್ರಹಿಸಬೇಕು. ಈ ಎಲ್ಲ ವಿಚಾರಗಳನ್ನು ಸುದೀರ್ಘವಾಗಿ ಪಕ್ಷಾತೀತವಾಗಿ ಚರ್ಚಿಸಿ ಒಮ್ಮತದ ನಿರ್ಣಯಕ್ಕೆ ಬರಲು ವಿಶೇಷ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿದ್ದಾರೆ.