ಹೈಕೋರ್ಟ್ ಸೂಚನೆ ಬೆನ್ನಲ್ಲೇ ಕಾರಾಗೃಹಗಳಲ್ಲಿ ವಿಚಾರಣಾಧೀನ ಕೈದಿಗಳಿಗೆ ಮಾತ್ರ ಒಣಹಣ್ಣು (ಡ್ರೈ ಫ್ರೂಟ್) ಹಾಗೂ ಸಂಸ್ಕರಿತ ಆಹಾರ ಪೂರೈಕೆ ನಿಯಮ ಸೇರಿದಂತೆ ಹೊಸ ಮಾರ್ಗಸೂಚಿಯನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಶನಿವಾರ ಹೊರಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೈಕೋರ್ಟ್ ಸೂಚನೆ ಬೆನ್ನಲ್ಲೇ ಕಾರಾಗೃಹಗಳಲ್ಲಿ ವಿಚಾರಣಾಧೀನ ಕೈದಿಗಳಿಗೆ ಮಾತ್ರ ಒಣಹಣ್ಣು (ಡ್ರೈ ಫ್ರೂಟ್) ಹಾಗೂ ಸಂಸ್ಕರಿತ ಆಹಾರ ಪೂರೈಕೆ ನಿಯಮ ಸೇರಿದಂತೆ ಹೊಸ ಮಾರ್ಗಸೂಚಿಯನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಶನಿವಾರ ಹೊರಡಿಸಿದೆ.ಕಾರಾಗೃಹಗಳಿಗೆ ಮಾರ್ಗಸೂಚಿ ಅನ್ವಯ ನಿಗದಿಪಡಿಸಿರುವ ವಸ್ತುಗಳನ್ನು ಹೊರಗಡೆಯಿಂದ ಪೂರೈಸುವ ಮುನ್ನ ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಮಾರ್ಗಸೂಚಿ ಉಲ್ಲಂಘನೆಯಾದರೆ ಜೈಲು ನಿಯಮಾವಳಿ ಅನ್ವಯ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಏಳು ಕೇಂದ್ರ ಕಾರಾಗೃಹಗಳು, ಜಿಲ್ಲಾ, ತಾಲೂಕು ಹಾಗೂ ಕಂದಾಯ ಕಾರಾಗೃಹಗಳಲ್ಲಿ ಹೊಸ ಮಾರ್ಗಸೂಚಿ ತಕ್ಷಣ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಮನೆಯೂಟಕ್ಕೆ ಬೇಡಿಕೆ ಇಟ್ಟು ನ್ಯಾಯಾಲಯಕ್ಕೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳು ಮನವಿ ಮಾಡಿದ್ದರು. ಆದರೆ ಈ ಬೇಡಿಕೆಗೆ ಕಾರಾಗೃಹ ಇಲಾಖೆ ತೀವ್ರ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೈದಿಗಳಿಗೆ ಮನೆಯೂಟ ಸಂಬಂಧ ಮಾರ್ಗಸೂಚಿ ರೂಪಿಸುವಂತೆ ಕಾರಾಗೃಹ ಇಲಾಖೆಗೆ ಶುಕ್ರವಾರ ಸೂಚಿಸಿತ್ತು. ಅದರಂತೆ ಕಾರಾಗೃಹದ ವಿಚಾರಣಾಧೀನ ಕೈದಿಗಳಿಗೆ ಮಾರ್ಗಸೂಚಿಯನ್ನು ಕಾರಾಗೃಹ ಇಲಾಖೆಗೆ ಜಾರಿಗೊಳಿಸಿದೆ.
ಮಾರ್ಗಸೂಚಿ ವಿವರ1. ವಿಚಾರಣಾಧೀನ ಕೈದಿ ಹಾಗೂ ನಾಗರೀಕ ಕೈದಿಗಳಿಗೆ ಹೊರಗಡೆಯಿಂದ ಬೇಯಿಸಿದ ಆಹಾರ ಪೂರೈಕೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಈ ಮಾದರಿ ಕೈದಿಗಳಿಗೆ ವಾರಕ್ಕೆ ಒಂದು ಬಾರಿ ಮಾತ್ರ ಬೇಯಿಸದ ಹಾಗೂ ಪ್ಯಾಕೇಜ್ಡ್ ಆಹಾರವನ್ನು ಕೈದಿಗಳ ಸಂದರ್ಶನ ಮತ್ತು ದಾಖಲಾತಿ ಸಮಯದಲ್ಲಿ ನೀಡಲು ಅವಕಾಶವಿದೆ.
2. ಬಾಳೆ, ಸೇಬು, ಮಾವು, ಸಪೋಟ ಹಾಗೂ ಸೀಬೆ ಸೇರಿದಂತೆ ತಾಜಾ ಹಣ್ಣುಗಳನ್ನು 2 ಕೆ.ಜಿ. ಮೀರದಂತೆ ಕೈದಿಗಳು ಹೊರಗಡೆಯಿಂದ ಪಡೆಯಬಹುದು. ಅರ್ಧ ಕೆಜಿ ಮೀರದಂತೆ ಗೋಡಂಬಿ, ದ್ರಾಕ್ಷಿ ಹಾಗೂ ಬಾದಾಮಿ ಸೇರಿದಂತೆ ಇತರ ಒಣ ಹಣ್ಣು (ಡ್ರೈಫ್ರೂಟ್ಸ್), ಬಿಸ್ಕತ್ ಹಾಗೂ ಖಾದ್ಯ ತಿನಿಸು ಪೂರೈಸಬಹುದು.3. ಜೈಲಿಗೆ ಪ್ರವೇಶ ಪಡೆಯುವ ಮುನ್ನ ಧರಿಸಿರುವ ಬಟ್ಟೆ ಹೊರತುಪಡಿಸಿ ಇನ್ನೆರಡು ಜೊತೆ ಬಟ್ಟೆ ಹಾಗೂ ಎರಡು ಜೊತೆ ಒಳ ಉಡುಪುಗಳು, ಕಾರಾಗೃಹದಲ್ಲಿ ವಿತರಿಸುವ ಹೊದಿಕೆ (ಬೆಡ್‌ಶೀಟ್) ಬಿಟ್ಟು ಹೆಚ್ಚುವರಿ ಹೊದಿಕೆ ಪಡೆಯಬಹುದು.
ದರ್ಶನ್ ಟೀಂಗೆ ಕಹಿಹೊಸ ಮಾರ್ಗಸೂಚಿ ಹಿನ್ನಲೆಯಲ್ಲಿ ಮನೆಯೂಟದ ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಅವರಿಗೆ ಭಾರಿ ನಿರಾಸೆಯಾಗಿದೆ. ಹೊಸ ಮಾರ್ಗಸೂಚಿಯಂತೆ ವಿಚಾರಣಾಧೀನ ಕೈದಿಗಳಾಗಿರುವ ದರ್ಶನ್ ಹಾಗೂ ಅವರ ಸಹಚರರಿಗೆ ಒಣಹಣ್ಣು ಹಾಗೂ ಸಂಸ್ಕರಿತ (ಪ್ಯಾಕೇಜ್ಡ್) ಆಹಾರ ಮಾತ್ರ ಪಡೆಯಲು ಅವಕಾಶವಿದೆ.
