ನಾಲ್ಕು ತಿಂಗಳಿನಿಂದ ಬಾರದ ಗೌರವಧನ: ಕಾಫಿ ತೋಟ ಕೆಲಸಕ್ಕೆ ಅಂಗನವಾಡಿ ಸಿಬ್ಬಂದಿ!

| Published : Sep 06 2024, 01:06 AM IST

ಸಾರಾಂಶ

ನಾಲ್ಕು ತಿಂಗಳಿನಿಂದ ಗೌರವಧನ ಸಿಗದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ರಜಾ ದಿನಗಳಲ್ಲಿ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಹೋಗಿ ಬರುವ ಕೂಲಿ ಹಣದಲ್ಲಿ ಬದುಕು ನಡೆಸುತ್ತಿದ್ದಾರೆ. ಎಷ್ಟೋ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಬಾಡಿಗೆ ಮನೆಗಳಲ್ಲಿ ಬದುಕುತ್ತಿದ್ದು, ತಿಂಗಳಿಗೆ 5-6 ಸಾವಿರ ರು. ಮನೆ ಬಾಡಿಗೆ ಭರಿಸಬೇಕು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಪ್ರತಿ ತಿಂಗಳು ದೊರೆಯುವ ಗೌರವಧನ ಕಳೆದ ನಾಲ್ಕು ತಿಂಗಳಿನಿಂದ ಕೊಡಗಿನಲ್ಲಿ ದೊರೆಯುತ್ತಿಲ್ಲ. ಇದರಿಂದ ಈ ವೃತ್ತಿಯನ್ನೇ ನಂಬಿಕೊಂಡು ಸ್ವಂತ ಮನೆಯೂ ಇಲ್ಲದೆ ಬಾಡಿಗೆ ಮನೆಗಳಲ್ಲಿ ಬದುಕುವ ಕೊಡಗಿನ ಎಷ್ಟೋ ಅಂಗನವಾಡಿ ನೌಕರರು ಈಗ ಅನಿವಾರ್ಯವಾಗಿ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.

ನಾಲ್ಕು ತಿಂಗಳಿನಿಂದ ಗೌರವಧನ ಸಿಗದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ರಜಾ ದಿನಗಳಲ್ಲಿ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಹೋಗಿ ಬರುವ ಕೂಲಿ ಹಣದಲ್ಲಿ ಬದುಕು ನಡೆಸುತ್ತಿದ್ದಾರೆ. ಎಷ್ಟೋ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಬಾಡಿಗೆ ಮನೆಗಳಲ್ಲಿ ಬದುಕುತ್ತಿದ್ದು, ತಿಂಗಳಿಗೆ 5-6 ಸಾವಿರ ರು. ಮನೆ ಬಾಡಿಗೆ ಭರಿಸಬೇಕು. ಜೊತೆಗೆ ವಿವಿಧ ಕಾರಣಗಳಿಗೆ ಬ್ಯಾಂಕುಗಳಿಂದ ಸಾಲ ಮಾಡಿಕೊಂಡಿದ್ದು, ಕಂತು ಕಟ್ಟಬೇಕು. ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕು.

ಕೊಡಗು ಜಿಲ್ಲೆ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರಿಗೆ ಇಂತಹ ದುಃಸ್ಥಿತಿ ಎದುರಾಗುವುದನ್ನು ನೋಡಿದರೆ ಅಂಗನವಾಡಿ ನೌಕರರಿಗೆ ಗೌರವಧನ ನೀಡುವುದಕ್ಕೂ ಸಾಧ್ಯವಿಲ್ಲದಂತಹ ದುಃಸ್ಥಿತಿ ಸರ್ಕಾರಕ್ಕೆ ಬಂದೊದಗಿದೆಯೇ ಎನ್ನುವ ಸಂಶಯ ಎದುರಾಗಿದೆ.

.....................

ತಿಂಗಳಿಗೆ ಸಿಗುವ 11,250 ರು. ಗೌರವಧನ ಪ್ರತೀ ತಿಂಗಳು ಬರುತ್ತಿದ್ದರಿಂದ ಹೇಗೋ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದೆವು. ಆದರೆ ನಾಲ್ಕು ತಿಂಗಳಿನಿಂದ ಅದೂ ಬಾರದೆ ಇರುವುದರಿಂದ ಅನಿವಾರ್ಯವಾಗಿ ಕೂಲಿ ಕೆಲಸ ಮಾಡದೆ ಬೇರೆ ದಾರಿಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಭಾನುವಾರ ಅಥವಾ ಇತರೆ ರಜೆ ದಿನಗಳಂದು ಕಾಫಿ ತೋಟಗಳಿಗೆ ಹೋಗಿ ಕೂಲಿ ಕೆಲಸ ಮಾಡಿ ಬದುಕು ದೂಡುತ್ತಿದ್ದೇವೆ.

-ಸುಮಿತ್ರಾ, ಅಂಗನವಾಡಿ ಶಿಕ್ಷಕಿ, ಮಡಿಕೇರಿ.

................

ಹಿಂದೆಂದೂ ನಮಗೆ ಇಷ್ಟು ತಿಂಗಳ ಕಾಲ ಗೌರವಧನವೇ ಇಲ್ಲದ ಪರಿಸ್ಥಿತಿ ಬಂದಿರಲಿಲ್ಲ. ಒಂದು ತಿಂಗಳೇನಾದರೂ ಗೌರವ ಸಿಗದಿದ್ದರೆ ಎರಡನೇ ತಿಂಗಳಲ್ಲಿ ಒಟ್ಟಿಗೆ ಗೌರವಧನ ದೊರೆಯುತಿತ್ತು. ಆದರೆ ಈ ಭಾರಿ ನಾಲ್ಕು ತಿಂಗಳು ಕಳೆದು ಐದನೇ ತಿಂಗಳಿನಲ್ಲಿ ಇದ್ದರೂ ಗೌರವಧನವಿಲ್ಲ.

-ಗೀತಾ, ಅಂಗನವಾಡಿ ಶಿಕ್ಷಕಿ ಗೀತಾ.

.................

ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರಿಗೆ ಈಗಾಗಲೇ ಒಂದು ತಿಂಗಳ ಗೌರವಧನ ಬುಧವಾರ ಪಾವತಿಯಾಗಿದೆ. ಜಿಲ್ಲೆಯಲ್ಲಿ 1,500 ಮಂದಿ ಇದ್ದು, ಇನ್ನುಳಿದ ಒಂದು ತಿಂಗಳ ಗೌರವಧನಕ್ಕಾಗಿ ಹೆಚ್ಚುವರಿ ಬಜೆಟ್ ಗೆ ನಿರೀಕ್ಷೆ ಮಾಡಲಾಗಿದೆ. ಸರ್ಕಾರದಿಂದ ಹಣ ಬಂದ ಕೂಡಲೇ ಗೌರವಧನ ನೀಡಲಾಗುವುದು.-ನಾಗರಾಜು, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.