ಕನ್ನಡಪ್ರಭ ವಾರ್ತೆ ಹಾಸನ

ಬೂವನಹಳ್ಳಿ, ವರಲಿಕೊಪ್ಪಲು, ಗೇಕರವಳ್ಳಿ, ಕೆಂಚಟ್ಟಹಳ್ಳಿ ಹಾಗೂ ಸಮುದ್ರವಳ್ಳಿ ಗ್ರಾಮಗಳ ರೈತರು ಮತ್ತು ನಿವೇಶನ ಆಕಾಂಕ್ಷಿಗಳು, ಹುಡಾ ಅಭಿವೃದ್ಧಿಪಡಿಸುತ್ತಿರುವ ಬಿಜಿಎಸ್‌ಕೆ ಬಡಾವಣೆಯಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಪೂರ್ಣಗೊಳಿಸಿದ ಬಳಿಕವೇ ಇ-ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಬೇಕು. ಇಲ್ಲವಾದರೆ ಹೋರಾಟ ಮಾಡುವುದಾಗಿ ಸ್ವಾಮಿಗೌಡ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಲ ದಿನಗಳ ಹಿಂದೆ ಆಯುಕ್ತರು ಹಾಗೂ ಅಧ್ಯಕ್ಷರು ಮೇ ೨೨ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಜೂನ್ ೧೮ರಂದು ರೈತರು ಹಾಗೂ ಅರ್ಜಿದಾರರಿಗೆ ಇ-ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ ಸ್ಥಳದಲ್ಲಿ ಇನ್ನೂ ಸಮರ್ಪಕ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಆರೋಪಿಸಿರುವ ಸಾರ್ವಜನಿಕರು, ಇಂತಹ ಪರಿಸ್ಥಿತಿಯಲ್ಲಿ ನಿವೇಶನ ಹಂಚಿಕೆ ಮಾಡುವುದು ಸೂಕ್ತವಲ್ಲ. ಬಡಾವಣೆಯ ಕೆಲವು ಭಾಗಗಳಲ್ಲಿ ರೈತರಿಂದ ಇನ್ನೂ ಜಮೀನು ವಹಿಸಿಕೊಳ್ಳದೇ ಇರುವುದರಿಂದ ಅಭಿವೃದ್ಧಿ ಕಾರ್ಯಗಳು ಅಪೂರ್ಣವಾಗಿವೆ. ಜೊತೆಗೆ ರಸ್ತೆ, ಕುಡಿಯುವ ನೀರು, ವಿದ್ಯುತ್, ಯುಜಿಡಿ ವ್ಯವಸ್ಥೆ, ಆಟದ ಮೈದಾನ, ಪಾರ್ಕ್, ಸಾರ್ವಜನಿಕ ಉಪಯೋಗದ ಸಿಎ ನಿವೇಶನ, ಸ್ಮಶಾನ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ನಡೆಯದೇ ಇರುವುದಾಗಿ ದೂರಿದರು.ಬಡಾವಣೆ ಅಭಿವೃದ್ಧಿಪಡಿಸುವ ವೇಳೆ ಜಮೀನನ್ನು ಸಮತಟ್ಟು ಮಾಡದೇ ಹಾಗೆಯೇ ಗುರುತು ಹಾಕಿ ನಿವೇಶನಗಳ ರೂಪದಲ್ಲಿ ತೋರಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ್ದರು. ನಕ್ಷೆಯಲ್ಲಿ ತೋರಿಸಿರುವ ಪಾರ್ಕ್, ಸಿಎ ಸೈಟ್, ಸಾರ್ವಜನಿಕ ಉಪಯೋಗದ ಸ್ಥಳಗಳು ವಾಸ್ತವದಲ್ಲಿ ಅಭಿವೃದ್ಧಿಗೊಂಡಿಲ್ಲ. ಇದಕ್ಕೂ ಮೊದಲು ಅಭಿವೃದ್ಧಿಪಡಿಸಿರುವ ಎಸ್. ಎಂ. ಕೃಷ್ಣನಗರ ಬಡಾವಣೆಯಲ್ಲಿಯೂ ಯುಜಿಡಿ ಸಮಸ್ಯೆಯಿಂದ ಬೂವನಹಳ್ಳಿ ಕೆರೆಗೆ ಕಲುಷಿತ ನೀರು ಹರಿಯುತ್ತಿದೆ. ಅಲ್ಲಿನ ನಿವಾಸಿಗಳು ಕುಡಿಯುವ ನೀರು, ವಿದ್ಯುತ್ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ತಕ್ಷಣವೇ ರಸ್ತೆ, ಮಳೆ ನೀರು ಹರಿಯುವ ಪ್ರದೇಶಗಳಲ್ಲಿ ಸೇತುವೆ, ಯುಜಿಡಿ, ವಿದ್ಯುತ್, ಪಾರ್ಕ್‌, ಸ್ಮಶಾನ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿದ ಬಳಿಕವೇ ನಿವೇಶನ ಹಂಚಿಕೆ ಮಾಡಬೇಕು ಎಂದು ರೈತರು ಹಾಗೂ ನಿವೇಶನ ಆಕಾಂಕ್ಷಿಗಳು ಒತ್ತಾಯಿಸಿದರು. ತಮ್ಮ ಬೇಡಿಕೆಗೆ ಸ್ಪಂದಿಸದೇ ಮೂಲಸೌಕರ್ಯಗಳಿಲ್ಲದೆ ನಿವೇಶನ ಹಂಚಿಕೆ ಮಾಡಿ ಹಣ ವಸೂಲಿ ಮಾಡಲು ಮುಂದಾದರೆ ರೈತರು ಹಾಗೂ ಸಾರ್ವಜನಿಕರು ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ವಾಸುದೇವ್, ದಿನೇಶ್, ನಾರಾಯಣ್, ಜಯರಾಮ್, ರವಿಕುಮಾರ್‌, ಕರಿಯಯ್ಯ ಇತರರು ಉಪಸ್ಥಿತರಿದ್ದರು.