ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ:ಪರವಾನಗಿ ಇಲ್ಲದೇ ನಡೆಯುತ್ತಿರುವ ನೂರಾರು ಟ್ಯೂಶನ್ ಕ್ಲಾಸ್, ಕೋಚಿಂಗ್ ಸೆಂಟರ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಗದಗ ಜಿಲ್ಲೆಯಲ್ಲಿ ಮಾತ್ರ ಅದು ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಇದೆಲ್ಲವೂ ತಮಗೆ ಸಂಬಂಧಿಸಿದ್ದಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.ಅನಧಿಕೃತ ಕೋಚಿಂಗ್ ಸೆಂಟರ್, ಟ್ಯೂಶನ್ ಕ್ಲಾಸುಗಳ ಹಾವಳಿ ನಿಯಂತ್ರಿಸುವಂತೆ ವ್ಯಾಪಕ ದೂರುಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕಳೆದ ಜೂನ್ ಮತ್ತು ಇದೇ ಜುಲೈ 5ರಂದು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು, ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್ ಗಳನ್ನು ಬಂದ್ ಮಾಡಿಸುವಂತೆ ಸೂಚಿಸಿದ್ದರು.
ಡಿಡಿಪಿಐ ಎರಡು ಬಾರಿ ಪತ್ರ ಬರೆದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಿಲ್ಲ. ಪ್ರತಿಯೊಂದು ತಾಲೂಕು, ಹೋಬಳಿ ಕೇಂದ್ರದಲ್ಲಿ ತಮ್ಮ ಕಣ್ಣೆದುರೆ ಕೋಚಿಂಗ್ ಸೆಂಟರ್‌ಗಳು ನಡೆಯುತ್ತಿದ್ದರೂ ಈ ವರೆಗೆ ಒಂದೇ ಒಂದು ಕೋಚಿಂಗ್ ಸೆಂಟರ್ ಬಂದ್ ಆಗಿಲ್ಲ.ದಿವ್ಯ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ವಸತಿ ಸಹಿತ, ವಸತಿ ರಹಿತವಾದ ಅನೇಕ ಹೆಸರಾಂತ ಕೋಚಿಂಗ್ ಸೆಂಟರ್‌ಗಳಿವೆ. ಸುಸಜ್ಜಿತವಾದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉತ್ತಮ ಸೌಲಭ್ಯಗಳನ್ನು ಹೊಂದಿವೆ. ಗುಣಮಟ್ಟದ ಶಿಕ್ಷಣವನ್ನೂ ನೀಡುತ್ತಿವೆ. ಆದರೂ ಯಾರೊಬ್ಬರೂ ಪರವಾನಗಿ ಪಡೆದುಕೊಂಡಿಲ್ಲ. ಪರವಾನಗಿ ಪಡೆದುಕೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿಲ್ಲ.
ಕೆಲ ಕೋಚಿಂಗ್ ಸೆಂಟರ್ ಗಳು ಇಕ್ಕಟ್ಟಾದ ಜಾಗದಲ್ಲಿವೆ. ಅಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಸರಿಯಾದ ಆಸನಗಳಿಲ್ಲ. ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲ. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿಲ್ಲ. ಅಂಥ ಕೋಚಿಂಗ್ ಸೆಂಟರ್‌ಗಳು ಜಿಲ್ಲೆಯಲ್ಲಿ ಸಾಕಷ್ಟಿವೆ. ಅಂಥ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.ನಿಯಮ ಉಲ್ಲಂಘನೆ: ಇತ್ತೀಚಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ದಾಖಲು ಮಾಡಿಸಿ, ಕೋಚಿಂಗ್ ಕ್ಲಾಸುಗಳಿಗೆ ಸೇರಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಬೀಳಬೇಕು. ಪ್ರತಿಯೊಂದು ಮಗು ಶಾಲೆಯಲ್ಲಿಯೇ ಓದಬೇಕು. ಶಾಲಾ ಅವಧಿ ನಂತರವೇ ಕೋಚಿಂಗ್ ತೆಗೆದುಕೊಳ್ಳಬೇಕು. ಈ ಬಗ್ಗೆಯೂ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಶಿಕ್ಷಣ ತಜ್ಞರು. ಒಂದೂ ಪರವಾನಗಿ ಇಲ್ಲ: ಕೋಚಿಂಗ್ ಸೆಂಟರ್‌ಗಳು, ಟ್ಯೂಶನ್ ಕ್ಲಾಸ್ ನಡೆಸುವವರು ಪ್ರತಿ ವರ್ಷ ಶಾಲಾ ಶಿಕ್ಷಣ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯ. ಮಕ್ಕಳ ಸಂಖ್ಯೆ, ತರಗತಿ ಕೋಣೆಯ ಅಳತೆ, ಕಟ್ಟಡದ ಮಾಹಿತಿ, ಗಾಳಿ-ಬೆಳಕಿನ ವ್ಯವಸ್ಥೆ, ಅಗ್ನಿ ಅವಘಡ ನಿಯಂತ್ರಣ ವ್ಯವಸ್ಥೆ ಸಹಿತ ಮಕ್ಕಳ ಸುರಕ್ಷತೆಗೆ ಕೊಟ್ಟಿರುವ ಆದ್ಯತೆ ಆಧರಿಸಿ ಪರವಾನಗಿ ಪಡೆದುಕೊಳ್ಳಬೇಕು. ಆದರೆ ಜಿಲ್ಲೆಯಲ್ಲಿ ಅಂಥ ಒಂದೇ ಒಂದು ಸಂಸ್ಥೆ ಶಿಕ್ಷಣ ಇಲಾಖೆಯಿಂದ ಪರವಾನಗಿ ಪಡೆದಿಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಇಲಾಖೆ ಅಧಿಕಾರಿಗಳು.
ಜಿಲ್ಲೆಯಲ್ಲಿರುವ ಅನಧಿಕೃತ ಕೋಚಿಂಗ್ ಸೆಂಟರ್‌ಗಳನ್ನು ಗುರುತಿಸಿ ಬಂದ್ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನಧಿಕೃತ ಎಂದು ಕಂಡುಬಂದರೆ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪೊಲೀಸರ ಠಾಣೆಯಲ್ಲಿ ದೂರು ದಾಖಲಿಸಲು ಸೂಚನೆ ನೀಡಲಾಗಿದೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್ .ಎಸ್ . ಬುರಡಿ ಹೇಳಿದರು.