ಸರ್ಕಾರಕ್ಕೆ ಎಷ್ಟೆ ಮನವಿ ಮಾಡಿದರೂ ಅನುದಾನ ನೀಡುತ್ತಿಲ್ಲ: ಎಚ್.ಟಿ.ಮಂಜು ಬೇಸರ

| Published : Jul 30 2025, 12:45 AM IST

ಸರ್ಕಾರಕ್ಕೆ ಎಷ್ಟೆ ಮನವಿ ಮಾಡಿದರೂ ಅನುದಾನ ನೀಡುತ್ತಿಲ್ಲ: ಎಚ್.ಟಿ.ಮಂಜು ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಶಾಸಕರಿಂದ ಅನುದಾನಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಪಕ್ಷ ಶಾಸಕರಿಗೆ ತಲಾ 10 ಕೋಟಿ ರು. ವಿಶೇಷ ಅನುದಾನ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ರಸ್ತೆಗಳು ಸಾರ್ವಜನಿಕರ ಸಂಪರ್ಕದ ಜೀವನಾಡಿಯಾಗಿವೆ. ಇವುಗಳ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ನಿರ್ಲಕ್ಷ್ಯತನ ತೋರುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಚನ್ನನಕೊಪ್ಪಲು ಬಡಾವಣೆಯಲ್ಲಿ ಶಾಸಕರ ವಿಶೇಷ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 25 ಲಕ್ಷ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ತಾಲೂಕಿನಲ್ಲಿ ಭಾರೀ ಮಳೆಗೆ ಬಹುತೇಕ ರಸ್ತೆಗಳು, ಸೇತುವೆಗಳು, ಕೆರೆಗಳು ಒಡೆದು ಹಾಳಾಗಿವೆ. ಇದಕ್ಕೆ ಸೂಕ್ತ ಅನುದಾನ ನೀಡುವಂತೆ ನಾನು ಶಾಸಕನಾಗಿ ಆಯ್ಕೆಯಾದ ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಆದರೂ ಇದೂವರೆಗೂ ಸರ್ಕಾರ ಶಾಸಕರಿಗೆ ನೀಡಬೇಕಾದ ಶಾಸಕರ ನಿಗಧಿತ ಕ್ಷೇತ್ರಾಭಿವೃದ್ಧಿ ಅನುದಾನವನ್ನು ನೀಡುತ್ತಿಲ್ಲ ಎಂದರು.

ಈಗ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಶಾಸಕರಿಂದ ಅನುದಾನಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಪಕ್ಷ ಶಾಸಕರಿಗೆ ತಲಾ 10 ಕೋಟಿ ರು. ವಿಶೇಷ ಅನುದಾನ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ ಎಂದರು.

ಈ ಅನುದಾನ ತಾಲೂಕಿನ ರಸ್ತೆ ಅಭಿವೃದ್ಧಿಗೆ ಯಾವುದಕ್ಕೂ ಸಾಲದಾಗಿದೆ. ಬಂದಿರುವ ಅನುದಾನವನ್ನು ವಿವಿಧ ಗ್ರಾಮಗಳಲ್ಲಿ ತೀರಾ ಅಗತ್ಯ ಇರುವ ರಸ್ತೆಗಳ ಅಭಿವೃದ್ಧಿಗೆ ಹಂಚಿಕೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಬರುವ ನಿರೀಕ್ಷೆ ಇದೆ ಎಂಬುದನ್ನು ಕಾದು ನೋಡುತ್ತಿದ್ದೇನೆ ಎಂದು ನುಡಿದರು.

ರಸ್ತೆ ಅಭಿವೃದ್ಧಿ ಹಾಗೂ ಕೆರೆ- ಕಟ್ಟೆಗಳ ದುರಸ್ತಿಗೆ ಸೂಕ್ತ ಅನುದಾನ ನೀಡದಿದ್ದರೆ ತಾಲೂಕಿನ ಸಾವಿರಾರು ಜನರೊಂದಿಗೆ ಬೆಂಗಳೂರಿಗೆ ಪಾದಯಾತ್ರೆ ಮಾಡುವುದಾಗಿ ಹೇಳಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಭಾರತಿಪ್ರಕಾಶ್, ವಿಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕ ಶೇಖರ್, ಕಿಕ್ಕೇರಿ ಹೋಬಳಿ ಜೆಡಿಎಸ್‌ ಅಧ್ಯಕ್ಷ ಕಾಯಿ ಮಂಜೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಕೆ.ಜಿ.ಪುಟ್ಟರಾಜು, ರಾಜೇಶ್, ಉಪಾಧ್ಯಕ್ಷೆ ಸರಸ್ವತಿ ಗೋವಿಂದರಾಜು, ತಾಯಮ್ಮ ದೇವರಾಜು, ಪಿಡಿಒ ಚಲುವರಾಜು, ಆರೋಗ್ಯರಕ್ಷಾ ಸಮಿತಿ ಸದಸ್ಯರಾದ ಮಧು, ಮುರುಳಿ, ಲತಾ ಇದ್ದರು.