ಕಾಂಗ್ರೆಸ್ ಎಷ್ಟೇ ಬೊಬ್ಬೆ ಹೊಡೆದ್ರು ಬಿಜೆಪಿಗೆ ಅಧಿಕಾರ ನಿಶ್ಚಿತ

| Published : May 04 2024, 12:33 AM IST

ಸಾರಾಂಶ

ಲಿಂಗಸುಗೂರಿನ ವಿಜಯ ಮಹಾಂತ ಶಾಖಾ ಮಠದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಬಿ.ವೈ.ವಿಜಯೇಂದ್ರ ಮತಯಾಚನೆ

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ ಎಂದು ಎಷ್ಟೇ ಬೊಬ್ಬೆ ಹೊಡೆದರು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಹಾಗೂ 3ನೇ ಭಾರಿ ನರೇಂದ್ರ ಮೋದಿ ಪ್ರಧಾನಿಯಾಗುವುದು ತಪ್ಪಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಪಟ್ಟಣ ವಿಜಯ ಮಹಾಂತ ಶಾಖಾ ಮಠದ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಧಾನಿ ಮೋದಿಯವರು ವಿಷನ್ 400 ಎಂದು ಜನರ ಮಧ್ಯೆ ಚುನಾವಣೆಗೆ ದುಮುಕಿದ್ದಾರೆ. ಕಾಂಗ್ರೆಸ್‌ನವರು ದೇಶದಲ್ಲಿ ಕನಿಷ್ಠ ವಿರೋಧ ಪಕ್ಷವಾಗಿರಲು 40-45 ಸ್ಥಾನಗಳ ಪಡೆಯಲು ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಮೂದಲಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿತು, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದ್ರೋಹಿಗಳ ಬಂಧಿಸದೇ ತನಿಖೆ ನೆಪದಲ್ಲಿ ಅವರಿಗೆ ಕಾಂಗ್ರೆಸ್ ಸಹಕಾರ ನೀಡುತ್ತದೆ. ಅದರಂತೆ ರಾಯಚೂರಲ್ಲಿ ಸಚಿವರ ಪುತ್ರರ ಮೆರವಣಿಗೆ ವೇಳೆಯೂ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ. ದೇಶದಲ್ಲಿ ಕಾಂಗ್ರೆಸ್ ಇನ್ನೂ ಅಧಿಕಾರಕ್ಕೆ ಬಂದಿಲ್ಲ. ಆದರೂ ವಿರೋಧಿ ರಾಷ್ಟ್ರದ ಪರವಾಗಿ ಘೋಷಣೆ ಕೂಗಲಾಗುತ್ತದೆ. ವಿದ್ರೋಹಿಗಳನ್ನು ಬಂಧಿಸಿ ಶಿಕ್ಷೆ ನೀಡುವ ಬದಲು ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಾ ದೇಶ ವಿರೋಧಿಗಳ ಪರವಿದೆ. ದೇಶದ ಭೂಮಿ, ಅನ್ನದ ಋಣ ಇಲ್ಲದ ನೀಚ ಸರ್ಕಾರ ರಾಜ್ಯದಲ್ಲಿ ಅಧಿಕಾರಲ್ಲಿದೇ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಹಿರಿಯ ಕಾಂಗ್ರೆಸ್ ಮುಖಂಡರಾದ ಶರಣಪ್ಪ ಮೇಟಿ, ಬಸಣ್ಣ ಮೇಟಿ ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ, ಮುಖಂಡರಾದ ರಾಜಾ ಶ್ರೀನಿವಾಸ ನಾಯಕ, ರಾಜಾ ಸೋಮನಾಥ ನಾಯಕ, ಬಿಜೆಪಿ ಅಧ್ಯಕ್ಷ, ನ್ಯಾಯವಾದಿ ಅಯ್ಯಪ್ಪ ಮಾಳೂರು, ಜಗನ್ನಾಥ ಕುಲಕರ್ಣಿ ಸೇರಿ ಇತರರಿದ್ದರು.