ಇತ್ತೀಚಿನ ದಿನಗಳಲ್ಲಿ ಕೆಲಸ ಮತ್ತು ವ್ಯವಹಾರ ನಿಮಿತ್ತ ಯುವ ಜನಾಂಗ ಹಳ್ಳಿ ಬಿಟ್ಟು ಪಟ್ಟಣ ಪ್ರದೇಶ ಸೇರುತ್ತಿದ್ದಾರೆ. ಇದರಿಂದ ಹಳ್ಳಿಗಳು ಒಂದು ರೀತಿ ವೃದ್ಧಾಶ್ರಮಗಳಾಗುತ್ತಿವೆ. ಇಳಿವಯಸ್ಸಿನಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಮನುಷ್ಯನಿಗೆ ಎಷ್ಟೇ ಸಂಪತ್ತಿದ್ದರೂ ಪ್ರಯೋಜನವಿಲ್ಲ. ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಮುಖ್ಯ ಎಂದು ಮೂಳೆ ಮತ್ತು ಕೀಲು ರೋಗತಜ್ಞ, ಚನ್ನಪಟ್ಟಣದ ಡಾ.ಆರ್.ಎನ್.ಮಲವೇಗೌಡ ತಿಳಿಸಿದರು.

ಚನ್ನಪಟ್ಟಣ ರಸ್ತೆಯ ಲಯನ್ಸ್ ಕ್ಲಬ್ ಆವರಣದಲ್ಲಿ ಮಾತೃಶ್ರೀ ಮೂಳೆ ಮತ್ತು ಕೀಲು ರೋಗ ಆಸ್ಪತ್ರೆ ಹಾಗೂ ನಾರಾಯಣ ಆಸ್ಪತ್ರೆ ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಉಚಿತ ಮೂಳೆ ಮತ್ತು ಕೀಲು ರೋಗ ಸಮಸ್ಯೆ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೆಲಸ ಮತ್ತು ವ್ಯವಹಾರ ನಿಮಿತ್ತ ಯುವ ಜನಾಂಗ ಹಳ್ಳಿ ಬಿಟ್ಟು ಪಟ್ಟಣ ಪ್ರದೇಶ ಸೇರುತ್ತಿದ್ದಾರೆ. ಇದರಿಂದ ಹಳ್ಳಿಗಳು ಒಂದು ರೀತಿ ವೃದ್ಧಾಶ್ರಮಗಳಾಗುತ್ತಿವೆ. ಇಳಿವಯಸ್ಸಿನಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂದರು.

ವೃದ್ಯಾಪದಲ್ಲಿ ಹರಟೆ, ಕಟ್ಟೆ, ಭಜನಾ ಮಂದಿರ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಬೆರೆತಾಗ ಮಾನಸಿಕ ಆರೋಗ್ಯ ಸಿಗುತ್ತದೆ. ಒಬ್ಬ ಮನುಷ್ಯ ದೈಹಿಕವಾಗಿಯಾವುದೇ ಕಾಯಿಲೆ ಇಲ್ಲದಿದ್ದರೆ ಆರೋಗ್ಯವಂತನಲ್ಲ. ಮಾನಸಿಕ ಮತ್ತು ಸಾಮಾಜಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಆ ಮನುಷ್ಯ ಪರಿಪೂರ್ಣ ಆರೋಗ್ಯವಂತ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಎಂದರು.

40-50 ವರ್ಷಗಳ ನಂತರ ದೇಹವು ಸಮತೋಲನ ಕಳೆದುಕೊಳ್ಳುತ್ತದೆ. ಮಾಂಸ ಖಂಡಗಳ ಬಲ ಕುಗ್ಗಿ ಕ್ರಮೇಣ 55 ವರ್ಷಗಳ ನಂತರ ಸಣ್ಣದಾಗುತ್ತಾ ಬಲ ಕಳೆದುಕೊಳ್ಳುತ್ತವೆ. ಪೂರ್ತಿ ಬಲ ಕಳೆದುಕೊಂಡರೆ ಮತ್ತೆ ಪಡೆಯಲು ಸಾಧ್ಯವಿಲ್ಲ. ಓಡಾಡಲು ಕಷ್ಟವಾಗಿ ಬೇರೆಯವರ ಮೇಲೆ ಅವಲಂಬಿತವಾಗಬೇಕಾಗುತ್ತದೆ ಎಂದರು.

ಉತ್ತಮ ಆರೋಗ್ಯಕ್ಕೆ ವಾಕಿಂಗ್ ಮಾತ್ರ ಸಾಲದು. ಜೊತೆಗೆ ಲಘು ವ್ಯಾಯಾಮ, ಸೈಕಲ್ ತುಳಿಯುವುದು, ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆಕೆ, ವಾರದಲ್ಲಿ ಐದು ದಿನವಾದರೂ ದೈಹಿಕವಾಗಿ ಸಕ್ರಿಯ, ಆಹಾರ ಪದಾರ್ಥಗಳಾದ ಮೊಟ್ಟೆ, ರಾಗಿ ಪದಾರ್ಥಗಳು, ಹಾಲು ಮುಂತಾದ ಪ್ರೋಟೀನ್ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು, ಒಬ್ಬ ಮನುಷ್ಯ ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಬಿಸಿಲಿನಲ್ಲಿರಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಕ್ಲಬ್ಬ್ ಅಧ್ಯಕ್ಷ ಮನೋಹರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರು ತಪಾಸಣೆ ನಡೆಸಿ ನೀಡಿರುವ ಸಲಹೆಗಳನ್ನು ಅನುಸರಿಸಿ ವ್ಯಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಜನರಿಗೆ ಕರೆ ನೀಡಿದರು.

ಈ ವೇಳೆ ಡಾ.ಮಲವೇಗೌಡ ಮತ್ತು ವೈದ್ಯಾಧಿಕಾರಿ ಮಧುಸೂಧನ್ ಹಾಗೂ ಕಾರ್ತಿಕ್ ರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ಎ.ಟಿ.ಶ್ರೀನಿವಾಸ್, ಖಜಾಂಜಿ ಸಿ.ಪ್ರವೀಣ್, ಡಾ.ಸಿದ್ದರಾಜು, ಡಾ.ಷಂಶುದ್ದೀನ್, ಎ.ಎಸ್.ದೇವರಾಜು, ಶಿವರಾಜು, ಮಾದೇಗೌಡ, ಪದ್ಮನಾಭ, ಬಾಬು, ಸಿದ್ದಲಿಂಗಸ್ವಾಮಿ, ಎಚ್.ವಿ.ರಾಜು, ಪುಟ್ಟಸ್ವಾಮಿ ಸೇರಿದಂತೆ ಇತರರು ಇದ್ದರು.