ಸಾರಾಂಶ
ಪಕ್ಷದ ಕುರಿತು, ಪಕ್ಷದಲ್ಲಿರುವವರ ಕುರಿತು ಏನೇ ಅತೃಪ್ತಿಗಳಿರಲಿ ಬಹಿರಂಗ ಚರ್ಚೆ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪಕ್ಷದ ಕುರಿತು, ಪಕ್ಷದಲ್ಲಿರುವವರ ಕುರಿತು ಏನೇ ಅತೃಪ್ತಿಗಳಿರಲಿ ಬಹಿರಂಗ ಚರ್ಚೆ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಶನಿವಾರ ಮಾಜಿ ಸಚಿವ ವಿ. ಸೋಮಣ್ಣ ಅವರ ಬಂಡಾಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕದ ನಂತರ ಅವರ ಅತೃಪ್ತಿ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.
ಮಾಜಿ ಸಚಿವ ವಿ. ಸೋಮಣ್ಣ ಹೈಕಮಾಂಡ್ ಗೆ ದೂರು ನೀಡುತ್ತಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ನಿಮ್ಮ ಕುಂದು ಕೊರತೆಗಳು ಏನೇ ಇರಲಿ ಅದನ್ನು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಇತರ ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಲಿ. ಮಾಧ್ಯಮದ ಮೂಲಕ ಇದನ್ನು ಚರ್ಚಿಸುವುದು ಒಳ್ಳೆಯದಲ್ಲ. ಸೋಮಣ್ಣ ಪಕ್ಷದ ಪ್ರಮುಖ ನಾಯಕರು. ವೈಯಕ್ತಿಕವಾಗಿಯೂ ನನ್ನೊಂದಿಗೆ ಆತ್ಮೀಯರಾಗಿದ್ದು, ಈ ಕುರಿತು ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಉತ್ತರ ಕರ್ನಾಟಕ ಕಡೆಗಣನೆ ವಿಚಾರಕ್ಕೆ ಉತ್ತರಿಸಿದ ಜೋಶಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಅಂತ ಭಾಗ ಮಾಡಲು ಆಗುವುದಿಲ್ಲ. ಒಂದು ವ್ಯವಸ್ಥೆಯೊಳಗೆ ಈ ಪ್ರಕ್ರಿಯೆ ಮಾಡಲಾಗಿದೆ. ಉತ್ತರ ಕರ್ನಾಟಕಕ್ಕೆ ಮೊದಲ ಆದ್ಯತೆ ಕೊಟ್ಟಿದ್ದೇ ಬಿಜೆಪಿ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಅಧ್ಯಕ್ಷರನ್ನು ನೇಮಿಸಿದ್ದು ಇದೇ ಬಿಜೆಪಿ ಎಂಬುದು ನೆನಪಿರಲಿ. ಸಮಸ್ಯೆ ಏನಿದೆ ಅದನ್ನು ಬಗೆಹರಿಸಬೇಕು ಅದನ್ನು ಬಿಟ್ಟು ಯಾರೋ ವ್ಯಕ್ತಿಯನ್ನು ನೇಮಕ ಮಾಡಿದಾಗ ಈ ಬಗ್ಗೆ ಚರ್ಚಿಸುವುದು ಸರಿಯಲ್ಲ ಎಂದರು.